ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಂಬೂರಿಯಲ್ಲಿ ಮೇಳೈಸಿದ ಸಾಂಸ್ಕೃತಿಕ ‘ಜಗತ್ತು’

ಕೊರಿಯಾದ ಬೀಸಣಿಗೆ ನೃತ್ಯ, ಅಸ್ಸಾಂನ ಬಿಹು ಮಾಧುರ್ಯಕ್ಕೆ ಮಾರುಹೋದ ವಿದ್ಯಾರ್ಥಿಗಳು
Last Updated 26 ಡಿಸೆಂಬರ್ 2022, 23:30 IST
ಅಕ್ಷರ ಗಾತ್ರ

ಮೂಡುಬಿದಿರೆ: ರಂಗು ರಂಗಿನ ಬೀಸಣಿಗೆ ಬೀಸುತ್ತಾ, ಇಂಪಾದ ಹಿನ್ನೆಲೆ ಸಂಗೀತಕ್ಕೆ ವಯ್ಯಾರದಿಂದ ಹೆಜ್ಜೆಹಾಕುತ್ತಾ ದಕ್ಷಿಣ ಕೊರಿಯದ ವಿದ್ಯಾರ್ಥಿಗಳು ಬೀಸಣಿಗೆ ನೃತ್ಯ ಪ್ರದರ್ಶಿಸುತ್ತಿದ್ದರೆ ಪ್ರೇಕ್ಷಕ ಗಡಣ ತದೇಕಚಿತ್ತದಿಂದ ಈ ಮನೋಹರ ಕ್ಷಣವನ್ನು ಕಣ್ತುಂಬಿಕೊಂಡಿತು. ಅಸ್ಸಾಂ ತಂಡದ ಬಿಹು ನೃತ್ಯದ ಮಾಧುರ್ಯಕ್ಕೆ ವಿದ್ಯಾರ್ಥಿಗಳು ಮಾರು ಹೋದರು.

ಇಲ್ಲಿನ ಆಳ್ವಾಸ್‌ ವಿದ್ಯಾಂಸಂಸ್ಥೆಯ ಪ್ರಾಂಗಣದಲ್ಲಿ ನಡೆಯುತ್ತಿರುವ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ‘ಏಕ್‌ ಭಾರತ್‌ ಶ್ರೇಷ್ಠ ಭಾರತ್‌’ ವೇದಿಕೆಯಲ್ಲಿ ಸೋಮವಾರ ದೇಶ–ವಿದೇಶಗಳ ಸಾಂಸ್ಕೃತಿಕ ವೈಭವ ಮೇಳೈಸಿತ್ತು.

ಹಬ್ಬ ಹರಿದಿನಗಳ ಸಂದರ್ಭದಲ್ಲಿ ವಿಶೇಷವಾಗಿ ಮಹಿಳೆಯರು ಪ್ರದರ್ಶಿಸುವ ಲಯಬದ್ಧ ಬೀಸಣಿಗೆ (ಬುಚೇ) ನೃತ್ಯಕೊರಿಯದ ಸಾಂಸ್ಕೃತಿಕ ಹಿರಿಮೆಯ ದರ್ಶನ ಮಾಡಿಸಿತು. ಕೆಂಬಣ್ಣದ ಉದ್ದನೆಯ ಲಂಗ ಹಾಗೂ ಹಸಿರು ನಿಲುವಂಗಿ ತೊಟ್ಟ ನೃತ್ಯಗಾರ್ತಿಯರು ವೃತ್ತಾಕಾರವಾಗಿ ತಿರುಗುತ್ತ, ಬೀಸಣಿಗೆಯಲ್ಲೇ ವಿವಿಧ ಚಿತ್ತಾರಗಳನ್ನು ಮೂಡಿಸಿದರು. ಹಕ್ಕಿಗಳು ಹಾರುವಂತೆ, ಮತ್ತೊಮ್ಮೆ ನೀರಿನ ಅಲೆಗಳು ತೇಲುವಂತೆ, ಬಳಿಕ ತಂಗಾಳಿ ಬೀಸುವಂತೆ, ಹೂಗಳು ಅರಳುವಂತೆ ನಾನಾ ದೃಶ್ಯಗಳನ್ನು ನೃತ್ಯದ ಮೂಲಕ ಕಟ್ಟಿಕೊಟ್ಟರು.

ಅಸ್ಸಾಂನಲ್ಲಿ ಏಪ್ರಿಲ್‌ ತಿಂಗಳಿನಲ್ಲಿ ಬಿಹು ಹಬ್ಬದ ಸಂದರ್ಭದಲ್ಲಿ ಪ್ರದರ್ಶಿಸುವ ಬಿಹು ನೃತ್ಯವು ದೇಶದ ಈಶಾನ್ಯ ರಾಜ್ಯಗಳ ಸಮೃದ್ಧ ಸಂಸ್ಕೃತಿಯ ದರ್ಶನ ಮಾಡಿಸಿತು. ತಿಳಿಕಂದು ಬಣ್ಣದ ಸೀರೆ ಧರಿಸಿ, ತಲೆಯಲ್ಲಿ ಅಗಲವಾದ ಟೋಪಿ ತೊಟ್ಟ ಹುಡುಗಿಯರು ಡೋಲಿನ ಶಬ್ದಕ್ಕೆ ತಾಳಬದ್ಧವಾಗಿ ಹೆಜ್ಜೆ ಹಾಕಿದರು.

ಪಶ್ಚಿಮ ಬಂಗಾಳದ ವಿದ್ಯಾರ್ಥಿಗಳು ಶ್ರೀಕೃಷ್ಣ ಹಾಗೂ ರಾಧೆಯರ ಆಪ್ತ ಕ್ಷಣಗಳನ್ನು ಕಟ್ಟಿಕೊಡುವ ರವೀಂದ್ರಿಕ್‌ ನೃತ್ಯವನ್ನು ಸೊಗಸಾಗಿ ಪ್ರಸ್ತುತಪಡಿಸಿದರು.

ತಲೆಗೆ ಬಣ್ಣದ ಪಗಡಿ (ಸಫಾ) ಸುತ್ತಿಕೊಂಡು, ಹಳದಿ ಪೋಷಾಕು, ಧೋತಿ ಕುರ್ತಾ ಮೊದಲಾದ ದಿರಿಸುವ ಧರಿಸಿ ವೇದಿಕೆಗೆ ಬಂದ ರಾಜಸ್ಥಾನದ ವಿದ್ಯಾರ್ಥಿಗಳು ತಮ್ಮ ರಾಜ್ಯದ ಸಾಂಸ್ಕೃತಿಕ ವೈವಿಧ್ಯದ ದರ್ಶನ ಮಾಡಿಸಿದರು. ಉತ್ತರ ಪ್ರದೇಶ, ತಮಿಳುನಾಡು, ಜಾರ್ಖಂಡ್‌, ದಾದರ್‌ ಹಾಗೂ ಕರ್ನಾಟಕದ ವಿವಿಧ ರಾಜ್ಯಗಳ ತಂಡಗಳು ತಮ್ಮೂರಿನ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ಹಾಗೂ ಆಚರಣೆಗಳನ್ನು ಪ್ರದರ್ಶಿಸಿದವು. ಒಟ್ಟು 59 ತಂಡಗಳು ಸಾಂಸ್ಕೃತಿಕ ಪ್ರದರ್ಶನಕ್ಕೆ ಹೆಸರು ನೋಂದಾಯಿಸಿದ್ದವು.

ಜಾಂಬೂರಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸೋಮವಾರ ಸಂಪನ್ನಗೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT