ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾ ಪರೀಕ್ಷೆ: ಗಡಿದಾಟಿದರಷ್ಟೇ ಕನ್ನಡಿಗರಿಗೆ ಯಶಸ್ಸು-ಶಂಕರ್‌ ಬಿದರಿ

‘ಸ್ಪರ್ಧಾವಾಣಿ’ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಶಂಕರ ಬಿದರಿ
Published 2 ನವೆಂಬರ್ 2023, 16:38 IST
Last Updated 2 ನವೆಂಬರ್ 2023, 16:38 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸೇವೆಗಳಲ್ಲಿ ಸಾಕಷ್ಟು ಉದ್ಯೋಗವಕಾಶಗಳಿದ್ದರೂ, ಹೆಚ್ಚಿನ ಸಂಖ್ಯೆಯ ಕನ್ನಡಿಗರು ರಾಜ್ಯದ ಗಡಿ ದಾಟದೇ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ನಿವೃತ್ತ ಐಪಿಎಸ್‌ ಅಧಿಕಾರಿ ಶಂಕರ್‌ ಬಿದರಿ ಗುರುವಾರ ಹೇಳಿದರು.

ಸರ್ಕಾರಿ ನೌಕರರ ಭವನದಲ್ಲಿ ‘ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳು ಸ್ಪರ್ಧಾ ಪರೀಕ್ಷೆಯ ಆಕಾಂಕ್ಷಿಗಳಿಗಾಗಿ ರೂಪಿಸಿದ ‘ಸ್ಪರ್ಧಾವಾಣಿ’ ಮಾಸಿಕ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಕೇಂದ್ರ ಸರ್ಕಾರದಲ್ಲಿ 1.80 ಕೋಟಿ ಹುದ್ದೆಗಳಿವೆ. ಭೌಗೋಳಿಕ ವಿಸ್ತೀರ್ಣ, ಜನಸಂಖ್ಯೆ ಆಧಾರದಲ್ಲಿ ರಾಜ್ಯದಿಂದ 15 ಲಕ್ಷ ಆಯ್ಕೆಯಾಗಬೇಕಿತ್ತು. ಕೇಂದ್ರ ಲೋಕಸೇವಾ ಆಯೋಗ, ಸಿಬ್ಬಂದಿ ನೇಮಕಾತಿ ಆಯೋಗ ನಡೆಸುವ ಪ್ರತಿ ವರ್ಷದ ನೇಮಕಾತಿಯಲ್ಲಿ ಕನಿಷ್ಠ ಶೇ 5.5 ರಷ್ಟು ಹುದ್ದೆಗಳು ಲಭಿಸಬೇಕು. ಈಗ ಇರುವುದು ಶೇ 1 ಕ್ಕಿಂತ ಕಡಿಮೆ. ನಮಗಿಂತ ಕಡಿಮೆ ವಿಸ್ತೀರ್ಣ, ಜನಸಂಖ್ಯೆ ಹೊಂದಿರುವ ಕೇರಳ ಶೇ 12 ರಷ್ಟು ಪಾಲು ಪಡೆಯುತ್ತಿದೆ ಎಂದರು.

ರಾಜ್ಯದ ಅಭ್ಯರ್ಥಿಗಳು ಗಡಿ ದಾಟಲು ಮನಸ್ಸು ಮಾಡದೆ ರಾಜ್ಯ ಸರ್ಕಾರದ ಹುದ್ದೆಗಳ ಮೇಲೆ ಅವಲಂಬಿತರಾಗಿದ್ದಾರೆ. ಇಲ್ಲಿನ ಬಹುತೇಕ ನೇಮಕಾತಿಗಳು 5 ರಿಂದ 10 ವರ್ಷಗಳಷ್ಟು ವಿಳಂಬವಾಗುತ್ತಿವೆ. ಯುವಕರಿದ್ದಾಗ ಅರ್ಜಿ ಸಲ್ಲಿದರೆ, ಪ್ರಕ್ರಿಯೆ ಪೂರ್ಣಗೊಂಡು ನೇಮಕಾತಿ ಆದೇಶ ನೀಡುವಷ್ಟರಲ್ಲಿ ಮಧ್ಯವಯಸ್ಸು ದಾಟಿರುತ್ತದೆ. ಕೆಲಸದ ಆಸಕ್ತಿ, ಸೇವಾ ಮನೋಭಾವ ಹೊರಟು ಹೋಗಿರುತ್ತದೆ. ಸರ್ಕಾರಕ್ಕೂ ಪ್ರಯೋಜನವಾಗುವುದಿಲ್ಲ. ಕೇಂದ್ರ ಸೇವೆಗಳಿಗೆ ಪರೀಕ್ಷೆ ಬರೆದರೆ ಒಂದು ವರ್ಷದ ಒಳಗೆ ನೇಮಕಾತಿ ಆದೇಶ ಪಡೆಯಬಹುದು ಎಂದು ಕಿವಿಮಾತು ಹೇಳಿದರು. 

‘ಸ್ಪರ್ಧಾವಾಣಿ’ ಬಿಡುಗಡೆ ಮಾಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಕೆಲ ವಿದ್ಯಾರ್ಥಿಗಳು ಜ್ಞಾನದ ಆಧಾರದಲ್ಲಿ ಪರೀಕ್ಷೆ ಎದುರಿಸದೆ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಅಡ್ಡದಾರಿ ಹಿಡಿಯುತ್ತಿದ್ದಾರೆ. ಅಂತಹ ದಾರಿಯಲ್ಲಿ ವಿದ್ಯಾರ್ಥಿನಿಯರೂ ಸಾಗಿರುವುದು ಕಳವಳಕಾರಿ ವಿಚಾರ. ಕೆಇಎ ಈಚೆಗೆ ನಡೆಸಿದ ಪರೀಕ್ಷೆಯಲ್ಲಿ ಕಿವಿಯೊಳಗೆ ಬ್ಲೂಟೂತ್‌ ಅಳವಡಿಸಿಕೊಂಡ ಪ್ರಕರಣ ಪತ್ತೆಹಚ್ಚಲಾಗಿದ್ದು, ವೈದ್ಯರ ಬಳಿ ತೆಗಿಸಬೇಕಾಯಿತು. ‘ಪ್ರಜಾವಾಣಿ’ಯಂತಹ ಪತ್ರಿಕೆ ಓದಿದರೆ ಅಡ್ಡದಾರಿಯ ಅಗತ್ಯವಿಲ್ಲ ಎಂದರು. 

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಕೋಲಾರದ ಯುವಕರೇ ಹೆಚ್ಚಿನ ಯಶಸ್ಸು ಪಡೆದಿದ್ದಾರೆ. ಒಂದು ಕಾಲದಲ್ಲಿ ಕೆಎಎಸ್‌ ಅನ್ನು ಕೋಲಾರ ಆಡಳಿತ ಸೇವೆ ಎಂದು ಕರೆಯುತ್ತಿದ್ದೆವು. ಇಂದು ಎಲ್ಲ ಕೆಲಸಗಳಿಗೂ ಘನತೆ ಇದೆ. ಹೋಟೆಲ್‌ ಅಡುಗೆ ಸಿದ್ಧಪಡಿಸುವ ಕೆಲಸಕ್ಕೂ ಬೇಡಿಕೆ ಇದೆ. ಜ್ಞಾನದ ಜತೆಗೆ ಗ್ರಹಿಕೆ ಇದ್ದರೆ ಎಲ್ಲ ಕ್ಷೇತ್ರದಲ್ಲೂ ಯಶಸ್ಸು ಕಾಣಬಹುದು ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಏನು ಅನುಕೂಲ ಮಾಡಿಕೊಟ್ಟಿದ್ದೀರಿ ಎಂದು ಶ್ರೇಷಾದ್ರಿಪುರಂ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ್ದ ನ್ಯಾಕ್‌ ಸಮಿತಿ ಕೇಳಿತ್ತು. ‘ಪ್ರಜಾವಾಣಿ’ಯ ‘ಮಾಸ್ಟರ್‌ಮೈಂಡ್‌’ ಪ್ರತಿ ತೋರಿಸಿದೆವು. ‘ಎ ಡಬಲ್‌ ಪ್ಲಸ್‌’ ಗ್ರೇಡ್‌ ದೊರೆಯಿತು.
–ವುಡೇ ಪಿ. ಕೃಷ್ಣ ಶಿಕ್ಷಣ ತಜ್ಞ
ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಸಿದರೆ ಬೇರೆಯವರ ಮಾತು ಕೇಳಿಸಿಕೊಳ್ಳಬೇಕು. ‘ಪ್ರಜಾವಾಣಿ’ ನೀಡುತ್ತಿರುವ ಸ್ಪರ್ಧಾವಾಣಿ ಎಂಬ ಬ್ಲೂಟೂತ್‌ ಬಳಸಿದರೆ ನಿಮ್ಮ ಧ್ವನಿ ನಿಮಗೇ ಕೇಳಿಸುತ್ತದೆ. ಯಶಸ್ಸು ಸಿಗುತ್ತದೆ.
–ರವೀಂದ್ರ ಭಟ್ಟ ಕಾರ್ಯನಿರ್ವಾಹಕ ಸಂಪಾದಕ ಪ್ರಜಾವಾಣಿ.
‘ಪ್ರಜಾವಾಣಿ’ ಓದಿದ ಬಹುತೇಕರು ಸ್ಪರ್ಧಾ ಪರೀಕ್ಷೆಗಳಲ್ಲಿ ಯಶಸ್ಸು ಕಂಡಿದ್ದಾರೆ. ಹೊಸದಾಗಿ ರೂಪಿಸಲಾದ ‘ಸ್ಪರ್ಧಾವಾಣಿ’ ಓದಿನ ಸಮಯವನ್ನು ಇನ್ನಷ್ಟು ಉಳಿಸುತ್ತದೆ. ಹೆಚ್ಚಿನ ಜ್ಞಾನ ವೃದ್ಧಿಗೆ ಸಹಕಾರಿಯಾಗುತ್ತದೆ.
–ಪಿ.ಮಣಿವಣ್ಣನ್‌ ಪ್ರಧಾನ ಕಾರ್ಯದರ್ಶಿ ಸಮಾಜ ಕಲ್ಯಾಣ ಇಲಾಖೆ.

ಬಡ ಅಭ್ಯರ್ಥಿಗಳಿಗೆ ‘ಸ್ಪರ್ಧಾವಾಣಿ’ ವರ

ಬಾಲ್ಯದಿಂದಲೇ ಪ್ರಜಾವಾಣಿ ಸುಧಾ ಮಯೂರ ಓದಿಕೊಂಡು ಬೆಳೆದಿದ್ದೇನೆ. ಪತ್ರಿಕೆಗಳಲ್ಲಿ ಅಂದಿನ ಗುಣಮಟ್ಟವೇ ಇಂದೂ ಉಳಿದಿದೆ. ಅಧಿಕ ಮೊತ್ತ ನೀಡಿ ತರಬೇತಿ ಪಡೆಯಲು ಸಾಧ್ಯವಾಗದ ಬಡ ವರ್ಗದ ಅಭ್ಯರ್ಥಿಗಳಿಗೆ ‘ಸ್ಪರ್ಧಾವಾಣಿ’ ದಾರಿ ದೀಪವಾಗಲಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಆಧುನಿಕ ತಂತ್ರಜ್ಞಾನದ ಬಳಕೆಯ ಜತೆಗೆ ವಿದ್ಯಾರ್ಥಿಗಳು ಓದುವ ಬರೆಯುವ ಅಭ್ಯಾಸ ರೂಢಿಸಿಕೊಳ್ಳಬೇಕು. ಬರೆಯುವ ಓದುವ ಬುನಾದಿ ಇದ್ದರೆ ಉಳಿದ ಮಾರ್ಗ ಸುಲಭವಾಗುತ್ತದೆ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT