ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ | ಸತ್ಯ ಅರಿಯದೇ ಅಪಪ್ರಚಾರ: ಸಚಿವ ಮಧು ಬಂಗಾರಪ್ಪ

ಕೊಟ್ಟದ್ದು ಶೇ 10ರಷ್ಟು ಗ್ರೇಸ್ ಮಾರ್ಕ್ಸ್ ಮಾತ್ರ
Published 30 ಮೇ 2024, 12:39 IST
Last Updated 30 ಮೇ 2024, 12:39 IST
ಅಕ್ಷರ ಗಾತ್ರ

ಶಿವಮೊಗ್ಗ: ’ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 10 ಗ್ರೇಸ್‌ ಮಾರ್ಕ್ಸ್ ಕೊಡುವ ಸಂಪ್ರದಾಯ ಕೋವಿಡ್ ವೇಳೆ ಬಿಜೆಪಿಯವರೇ ಆರಂಭಿಸಿದ್ದರು. ಅದೇ ಈ ಬಾರಿಯೂ ಮುಂದುವರೆದಿತ್ತು. ಸತ್ಯ ಅರಿಯದೇ ಪರೀಕ್ಷೆಯಲ್ಲಿ ಶೇ 20ರಷ್ಟು ಗ್ರೇಸ್‌ ಮಾರ್ಕ್ಸ್ ಕೊಡಲಾಗಿದೆ ಎಂಬ ಅಪಪ್ರಚಾರ ವಿರೋಧಿಗಳಿಂದ ನಡೆಯಿತು. ಅದಕ್ಕೆ ಕೆಲವು ಮಾಧ್ಯಮಗಳೂ ದನಿಗೂಡಿಸಿದವು‘ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷೆಯ ಪಾವಿತ್ರ್ಯತೆ ಕಾಪಾಡಲು ಈ ಬಾರಿ ಕೊಠಡಿಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಪ್ರಯೋಗದ ಮೊದಲ ವರ್ಷ, ಮಕ್ಕಳು ಪರೀಕ್ಷೆ ಬರೆಯುವಾಗ ಸಹಜವಾಗಿ ಗೊಂದಲ, ಆತಂಕಕ್ಕೆ ಒಳಗಾಗುತ್ತಾರೆ. ಅದು ಅವರ ನೈಜ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಹಾಗೂ ಶಿಕ್ಷಕರು ಇಲ್ಲದೇ ಪಾಠದಿಂದ ವಂಚಿತರಾದ ಮಕ್ಕಳ ನೆರವಿಗೆ ಈ ವರ್ಷ ಮಾತ್ರ ಗ್ರೇಸ್ ಮಾರ್ಕ್ಸ್ ಮುಂದುವರೆಸಲು ಇಲಾಖೆ ನಿರ್ಧರಿಸಿತ್ತು ಎಂದರು.

ಈ ವಿಚಾರದಲ್ಲಿ ಸಿಎಂ ಇಲ್ಲವೇ ಡಿಸಿಎಂ ಯಾರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಬದಲಿಗೆ ಗ್ರೇಸ್ ಮಾರ್ಕ್ಸ್ ಈ ವರ್ಷಕ್ಕೆ ಮಾತ್ರ ಸೀಮಿತಗೊಳಿಸುವಂತೆ ಸಭೆಯಲ್ಲಿ ಸೂಚಿಸಿದ್ದಾರೆ. ಅದನ್ನೇ ತಪ್ಪಾಗಿ ಬಿಂಬಿಸಲಾಯಿತು ಎಂದು ಹೇಳಿದರು.

ಈ ಅಪಪ್ರಚಾರದಲ್ಲಿ ಮಾಜಿ ಶಿಕ್ಷಣ ಸಚಿವ, ಬಿಜೆಪಿಯ ಎಸ್.ಸುರೇಶ್ ಕುಮಾರ್ ಮುಂಚೂಣಿಯಲ್ಲಿದ್ದರು. ಅವರ ಅವಧಿ ಸೇರಿದಂತೆ ಹಿಂದಿನ ಬಿಜೆಪಿ ಸರ್ಕಾರದ ಆಡಳಿತದ ವೇಳೆ ಕೇವಲ 5,108 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ನಮ್ಮ (ಕಾಂಗ್ರೆಸ್) ಸರ್ಕಾರ ಅಧಿಕಾರಕ್ಕೆ ಬಂದ ವರ್ಷದ ಅವಧಿಯಲ್ಲಿಯೇ 13 ಸಾವಿರ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗಿದೆ. ಇನ್ನೂ 45 ಸಾವಿರ ಶಿಕ್ಷಕರ ಭರ್ತಿಗೆ ಸಿದ್ಧತೆ ನಡೆದಿದೆ. ಶಾಲಾ ಕಟ್ಟಡಗಳ ದುರಸ್ತಿ, ಕೊಠಡಿ ನಿರ್ಮಾಣಕ್ಕೆ ಈ ಹಿಂದೆ ಅನುದಾನ ಘೋಷಿಸಿದ್ದರೂ ಹಣ ಕೊಟ್ಟಿರಲಿಲ್ಲ. ನಾವು (ಕಾಂಗ್ರೆಸ್) ಅಧಿಕಾರಕ್ಕೆ ಬಂದ ಮೇಲೆ ₹ 500 ಕೋಟಿ ಕೊಟ್ಟಿದ್ದೇವೆ ಎಂದರು.

ಶಾಲೆ ಬಿಡುವುದನ್ನು ತಪ್ಪಿಸಲು ಕ್ರಮ: ಮಕ್ಕಳು ಮಧ್ಯದಲ್ಲೇ ಶಾಲೆ ತೊರೆಯುವುದನ್ನು ತಪ್ಪಿಸಿ ಉನ್ನತ ಶಿಕ್ಷಣ ಪಡೆಯುವುದನ್ನು ಪ್ರೋತ್ಸಾಹಿಸಲು ವರ್ಷದಲ್ಲಿ ಮೂರು ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ.

ಒಮ್ಮೆ ಫೇಲ್ ಆದರೆ ಮತ್ತೊಮ್ಮೆ ಪರೀಕ್ಷೆ ಬರೆಯಲು ವರ್ಷಗಟ್ಟಲೇ ಕಾಯಬೇಕಾದ ಕಾರಣ ಬಹಳಷ್ಟು ಮಕ್ಕಳು ಮಧ್ಯದಲ್ಲಿಯೇ ಶಿಕ್ಷಣವನ್ನೇ ತೊರೆಯುತ್ತಾರೆ. ಆದರೆ ತಕ್ಷಣ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟರೆ ಅವರ ಶೈಕ್ಷಣಿಕ ಬದುಕು ಮುಂದುವರೆಯುತ್ತದೆ. ಮಕ್ಕಳ ಭವಿಷ್ಯದ ವಿಚಾರದಲ್ಲಿ ಇಲಾಖೆಯ ಈ ನಿರ್ಧಾರ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಬಿಜೆಪಿ ಅವಧಿಯಲ್ಲಿ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಹಾಳುಗೆಡವಲಾಗಿತ್ತು. ಅದನ್ನು ಸರಿಪಡಿಸುವ ಜೊತೆಗೆ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಕೈಗೆತ್ತಿಕೊಳ್ಳಲಾಗಿದೆ. ಅದೇ ಕಾರಣಕ್ಕೆ ಆ ಪಕ್ಷದ ಮುಖಂಡರು ನನ್ನ ವಿರುದ್ಧ ವ್ಯಕ್ತಿಗತ ಟೀಕೆಗೆ ಇಳಿದಿದ್ದಾರೆ. ಅದಕ್ಕೆ ಅಂಜುವ ಪ್ರಶ್ನೆಯೇ ಇಲ್ಲ.
–ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT