ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಪ್ರಕರಣ ಹಿಂಪಡೆಯುವ ರಾಜ್ಯ ಸರ್ಕಾರದ ತೀರ್ಮಾನ ಕಾನೂನುಬಾಹಿರ: ವಿಜಯೇಂದ್ರ

Published 24 ನವೆಂಬರ್ 2023, 5:46 IST
Last Updated 24 ನವೆಂಬರ್ 2023, 5:46 IST
ಅಕ್ಷರ ಗಾತ್ರ

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆಯುವ ರಾಜ್ಯ ಸಚಿವ ಸಂಪುಟದ ತೀರ್ಮಾನ ಕಾನೂನುಬಾಹಿರವಾದುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ʼಆದಾಯ ತೆರಿಗೆ ಇಲಾಖೆಯ ದಾಳಿಯಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ನಗದು ಪತ್ತೆಯಾದದ್ದನ್ನು ಆಧರಿಸಿ ಶಿವಕುಮಾರ್‌ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿದೆ. ಜಾರಿ ನಿರ್ದೇಶನಾಲಯವೂ ತನಿಖೆ ನಡೆಸುತ್ತಿದೆ. ಶಿವಕುಮಾರ್‌ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಬಗ್ಗೆ ತನಿಖೆಯಲ್ಲಿ ಸಾಕ್ಷ್ಯಗಳು ಲಭಿಸಿವೆ ಎಂದು ಸಿಬಿಐ ಹೇಳಿದೆ. ಈ ಹಂತದಲ್ಲಿ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆಯುವ ತೀರ್ಮಾನ ಮಾಡಿರುವುದು ಕಾನೂನಿಗೆ ವಿರುದ್ಧʼ ಎಂದರು.

ಶಿವಕುಮಾರ್‌ ಅಪರಾಧಿ ಎಂದು ನಾನು ಹೇಳುವುದಿಲ್ಲ. ಅದು ನ್ಯಾಯಾಲಯದಲ್ಲಿ ತೀರ್ಮಾನ ಆಗಬೇಕು. ತನಿಖೆ ಎದುರಿಸಿ, ಆರೋಪಗಳಿಂದ ಮುಕ್ತರಾಗಿ ಹೊರಬರುವ ಸುವರ್ಣಾವಕಾಶ ಶಿವಕುಮಾರ್‌ ಮುಂದಿದೆ. ಅದನ್ನು ಅವರು ಬಳಸಿಕೊಳ್ಳಲಿ. ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆಯುವ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈಬಿಡಬೇಕು ಎಂದು ಆಗ್ರಹಿಸಿದರು.

ರಾಜ್ಯದ ಜನರು, ದೇಶದ ಜನರು ಈ ಪ್ರಕರಣವನ್ನು ನೋಡಿದ್ದಾರೆ. ಸಂಪುಟದ ತೀರ್ಮಾನ ಸಂಪೂರ್ಣವಾಗಿ ಕಾನೂನು, ಸಂವಿಧಾನಕ್ಕೆ ವಿರುದ್ಧವಾದುದು. ಈ ತೀರ್ಮಾನವನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ. ಕಾನೂನಾತ್ಮಕವಾಗಿ ಸಂಪುಟ ತೀರ್ಮಾನ ತೆಗೆದುಕೊಂಡಿದೆ ಎಂದು ಕಾನೂನು ಸಚಿವ ಎಚ್‌.ಕೆ. ಪಾಟೀಲ ಹೇಳಿದ್ದಾರೆ. ಇದು ಸಂಪೂರ್ಣ ಅಕ್ರಮ ಎಂದರು.

ಡಿ.ಕೆ. ಶಿವಕುಮಾರ್‌ ಅವರಿಗೆ ಏಕೆ ಈಗ ಭಯ ಆರಂಭವಾಗಿದೆ? ಅವರು ಪ್ರಾಮಾಣಿಕರಿದ್ದರೆ ಈ ತೀರ್ಮಾನವನ್ನು ಅವರೇ ವಿರೋಧಿಸಬೇಕಿತ್ತು. ರಾಜ್ಯದ ಉಪ ಮುಖ್ಯಮಂತ್ರಿಯಾಗಿ ತನಿಖೆ ಎದುರಿಸುವುದಾಗಿ ಹೇಳಬೇಕಿತ್ತು. ಶಿವಕುಮಾರ್‌ ಅವರನ್ನು ರಕ್ಷಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ. ತಪ್ಪು ಮಾಡಿರುವುದಾಗಿ ಶಿವಕುಮಾರ್‌ ಒಪ್ಪಿಕೊಳ್ಳುವಂತಿದೆ ಈ ತೀರ್ಮಾನ ಎಂದು ಟೀಕಿಸಿದರು.

ಹಿಂದಿನ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು ಶಿವಕುಮಾರ್‌ ಪ್ರಕರಣದಲ್ಲಿ ಏನು ವರದಿ ನೀಡಿದ್ದರು ಎಂಬುದು ನನಗೆ ಗೊತ್ತಿಲ್ಲ. ನಾನು ಆ ವರದಿಯನ್ನು ನೋಡಿಲ್ಲ. ಆದರೆ, ಇಂತಹ ಪ್ರಕರಣದಲ್ಲಿ ರಾಜ್ಯ ಸರ್ಕಾರ ಮೂಗು ತೂರಿಸುವುದು ತಪ್ಪು. ಹಿಂದಿನ ಸರ್ಕಾರವು ರಾಜಕೀಯ ದ್ವೇಷದ ಕಾರಣಕ್ಕಾಗಿ ತನಿಖೆಗೆ ಅನುಮತಿ ಕೊಟ್ಟಿರಲಿಲ್ಲ. ಪ್ರಕರಣದಲ್ಲಿ ಮೇಲ್ನೋಟಕ್ಕೆ ಸಾಕ್ಷ್ಯಗಳಿದ್ದರಿಂದ ಅನುಮತಿ ನೀಡಲಾಗಿತ್ತು ಎಂದು ಹೇಳಿದರು.

ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ ಶಿವಕುಮಾರ್‌ ಪ್ರಕರಣದ ಕುರಿತು ಹೋರಾಟ ನಡೆಸಲಾಗುವುದು. ಸಚಿವ ಜಮೀರ್‌ ಅಹಮದ್‌ ಖಾನ್‌ ಅವರು ಸ್ಪೀಕರ್‌ ಸ್ಥಾನದ ಕುರಿತು ಆಡಿರುವ ಮಾತುಗಳ ವಿರುದ್ಧವೂ ಹೋರಾಟ ನಡೆಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT