ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ ಹಿಡಿದ ಎಸ್‌ಟಿಎಸ್‌ ಬೆಂಬಲಿಗರು

Published 21 ಆಗಸ್ಟ್ 2023, 20:39 IST
Last Updated 21 ಆಗಸ್ಟ್ 2023, 20:39 IST
ಅಕ್ಷರ ಗಾತ್ರ

ಬೆಂಗಳೂರು: ಯಶವಂತಪುರ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್‌ ಬೆಂಬಲಿಗರಾದ ರಾಜಣ್ಣ, ಆರ್ಯ ಶ್ರೀನಿವಾಸ್, ಶಿವಮಾದಯ್ಯ, ಹನುಮಂತಯ್ಯ, ಚಿಕ್ಕರಾಜು, ಜೆಡಿಎಸ್ ಮುಖಂಡರಾದ ಉಮಾಶಂಕರ್, ರಘು, ಸತೀಶ್ ಮತ್ತಿತರರು ಸೋಮವಾರ ಕಾಂಗ್ರೆಸ್ ಸೇರ್ಪಡೆಯಾದರು.

ಕೆಪಿಸಿಸಿ ಕಚೇರಿಯ ಇಂದಿರಾ ಗಾಂಧಿ ಭವನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ‌ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ರಾಜ್ಯಸಭೆ ಸದಸ್ಯರೂ ಆಗಿರುವ ಸಿಡಬ್ಲ್ಯೂಸಿ ಸದಸ್ಯ ನಾಸೀರ್ ಹುಸೇನ್, ಆನೇಕಲ್ ಶಾಸಕ ಬಿ. ಶಿವಣ್ಣ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ನೆಲಮಂಗಲ ಶಾಸಕ ಶ್ರೀನಿವಾಸ್ ಇದ್ದರು.

ಸಭೆಯಲ್ಲಿ ಮಾತನಾಡಿದ ಶಿವಣ್ಣ ಅವರು ಎಸ್‌.ಟಿ. ಸೋಮಶೇಖರ್ ಹೆಸರು ಹೇಳುತ್ತಿದ್ದಂತೆ, ಅವರ ಹೆಸರು ಪ್ರಸ್ತಾಪಿಸದಂತೆ ಶ್ರೀನಿವಾಸ್ ತಡೆದ ಪ್ರಸಂಗವೂ ನಡೆಯಿತು.

ಬಳಿಕ ಮಾತು ಬದಲಿಸಿದ ಶಿವಣ್ಣ, ‘ನಾನು ಮತ್ತು ಎಸ್‌.ಟಿ. ಸೋಮಶೇಖರ್ ಎನ್‌ಎಸ್‌ಯುಐ ಮೂಲಕ ರಾಜಕೀಯಕ್ಕೆ ಬಂದವರು. ನಮ್ಮ ಮೇಲೆ ವಿಶ್ವಾಸ ಇಟ್ಟು‌ ಟಿಕೆಟ್ ನೀಡಲಾಗಿತ್ತು. ಕೆಲವು‌ ‌ಕಾರಣಗಳಿಂದ ಸೋಮಶೇಖರ್ ಅವರು ಬಿಜೆಪಿ ಹೋಗಿದ್ದಾರೆ. ಆದರೆ, ನಾನು ಕಾಂಗ್ರೆಸ್ ಬಿಟ್ಟು ಹೋಗಿಲ್ಲ’ ಎಂದರು.

ರಾಜಣ್ಣ ಮಾತನಾಡಿ, ‘ಶಾಸಕ ಎಸ್‌.ಟಿ. ಸೋಮಶೇಖರ್ ಅವರಿಗೆ ಬಿಜೆಪಿಯಲ್ಲಿ ಇಲ್ಲಸಲ್ಲದ‌ ಕಾಟ ಕೊಡುತ್ತಿದ್ದಾರೆ. ಹೀಗಾಗಿ, ಸೋಮಶೇಖರ್ ಆದಷ್ಟು ಬೇಗ ಕಾಂಗ್ರೆಸ್‌ಗೆ ಬರಬೇಕು’ ಎಂದು ಆಹ್ವಾನ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ರೈಲು ಹೋದ ಮೇಲೆ ಟಿಕೆಟ್ ತೆಗೆದುಕೊಳ್ಳಬೇಡ ಎಂದು ಚುನಾವಣೆ ಸಮಯದಲ್ಲಿ ನಾನು ಎಸ್‌.ಟಿ. ಸೋಮಶೇಖರ್‌ಗೆ ಹೇಳಿದ್ದೆ. ಈಗ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಕ್ಷೇತ್ರದ ವಿಚಾರದ ಬಗ್ಗೆ ಮಾತನಾಡಿದ್ದಾರೆ. ನನ್ನ ಬಳಿಯೂ ಮಾತನಾಡಿದ್ದಾರೆ’ ಎಂದರು.

‘ಇಂದಿರಾ ಕ್ಯಾಂಟೀನ್ ಎಂದು ಹೆಸರಿಡಬೇಕು ಎಂದು ಎಸ್‌.ಟಿ. ಸೋಮಶೇಖರ್, ಮುನಿರತ್ನ, ಬೈರತಿ ಬಸವರಾಜು ಹಟ ಮಾಡಿ 40 ಜನ ಶಾಸಕರ ಸಹಿ ಹಾಕಿಸಿ ಕೊಟ್ಟಿದ್ದರು.‌ ಅವರ ಕ್ಷೇತ್ರಗಳಲ್ಲಿ ಮನೆಗಳ ಮೇಲೆ ಕಾಂಗ್ರೆಸ್ ಧ್ವಜದ ಚಿತ್ರಗಳನ್ನು ಹಾಕಿಸಿದ್ದರು. ಈಗ ಪೂರ್ತಿ ಕೇಸರಿ ಬಣ್ಣ ಬಳಿದಿದ್ದಾರೆ’ ಎಂದರು.

ಪಕ್ಷ ಸೇರ್ಪಡೆ ಆದವರನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್‌, ‘ಪ್ರತಿಯೊಬ್ಬರೂ 10 ಜನರನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಬನ್ನಿ. ನಡುನೀರಿನಲ್ಲಿ ನಿಂತವರನ್ನೂ ಜೊತೆಗೆ ಕರೆದುಕೊಂಡು ಬನ್ನಿ. ದೊಡ್ಡವರ ವಿಚಾರ ನಮಗೆ ಬಿಡಿ. ಎಸ್‌.ಟಿ. ಸೋಮಶೇಖರ್ ಮತ್ತು ನಾನು ಸ್ನೇಹಿತರು. ಕಾಂಗ್ರೆಸ್‌ಗೆ ಬರುವುದು ಅವರಿಗೆ ಬಿಟ್ಟಿದ್ದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT