ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಿಂಗ ವಿವಾಹ| ಹಿಂದೂ ವಿದ್ವಾಂಸರೊಂದಿಗೆ ಸುಪ್ರೀಂ ಕೋರ್ಟ್ ಚರ್ಚಿಸಲಿ: ಪೇಜಾವರ ಶ್ರೀ

Published 28 ಏಪ್ರಿಲ್ 2023, 12:59 IST
Last Updated 28 ಏಪ್ರಿಲ್ 2023, 12:59 IST
ಅಕ್ಷರ ಗಾತ್ರ

ಬಾಗಲಕೋಟೆ: ಸಲಿಂಗಿಗಳ ವೈವಾಹಿಕ ಜೀವನಕ್ಕೆ ಮುದ್ರೆ ಒತ್ತುವ ಮುನ್ನ ಕೇಂದ್ರ ಹಾಗೂ ಸುಪ್ರೀಂ ಕೋರ್ಟ್ ಹಿಂದೂ ಸಮಾಜದ ವಿದ್ವಾಂಸರು, ಧರ್ಮಶಾಸ್ತ್ರ ತಜ್ಞರೊಂದಿಗೆ ವಿಚಾರ, ವಿಮರ್ಶೆ ಮಾಡಿ ಮುಂದಿನ ಕ್ರಮಕೈಗೊಳ್ಳಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. 

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಲಿಂಗಿಗಳು ವಿವಾಹಕ್ಕೆ ಅನುಮತಿ ಕೋರಿದ್ದಾರೆ. ಅದಕ್ಕೆ ವೈವಾಹಿಕ ಜೀವನಕ್ಕೆ ಸಮ್ಮತಿ ನೀಡುವುದು ಸಲ್ಲ ಎಂಬುದು ನಮ್ಮ ಅಭಿಪ್ರಾಯ. ವೈವಾಹಿಕ ಜೀವನಕ್ಕೆ ಅದರದ್ದೇ ಆದ ಪಾವಿತ್ರ್ಯವಿದೆ. ಭಾವನಾತ್ಮಕ, ಶಾಸ್ತ್ರಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ನೇರವಾಗಿ ಕ್ರಮಕೈಗೊಳ್ಳಬಾರದು’ ಎಂದರು.

‘ಸಲಿಂಗಿ ವಿವಾಹಗಳಿಗೆ ಪ್ರತ್ಯೇಕ ಸೌಲಭ್ಯ. ಇನ್ನೊಂದಕ್ಕೆ ಪ್ರತ್ಯೇಕ ಸೌಲಭ್ಯ ಎಂದರೆ ಕೊನೆಯಿಲ್ಲದಂತಾಗುತ್ತದೆ. ಸಮಾಜದಲ್ಲಿ ಸಮಾನತೆ ಸ್ವೀಕರಿಸಿದ್ದೇವೆ. ಈಗಾಗಲೇ ಇರುವ ಮೀಸಲಾತಿ ಸೌಲಭ್ಯದಿಂದ ಗೊಂದಲ ಸೃಷ್ಟಿಯಾಗಿದೆ. ಮತ್ತಷ್ಟು ವಿಷಯಗಳನ್ನು ಆ ಪಟ್ಟಿಗೆ ಸೇರಿಸುವುದು ಸೂಕ್ತವಲ್ಲ’ ಎಂದು ಅಭಿಪ್ರಾಯಪಟ್ಟರು.

‘ಸುಪ್ರೀಂ ಕೋರ್ಟ್‌ಗೆ ಘನತೆ ಇದೆ. ಅದರ ತೀರ್ಪನ್ನು ಒಪ್ಪುತ್ತೇವೆ. ರಾಜಪ್ರಭುತ್ವ ನಮ್ಮಲ್ಲಿಲ್ಲ. ಅಡ್ಡಬಾಗಿಲು ಮೂಲಕ ನಿರ್ಧಾರವಾದದ್ದು ಎಂಬ ಭಾವನೆ ಬರಬಾರದು. ರಾಜಪ್ರಭುತ್ವದ ಇನ್ನೊಂದು ಮುಖ ಆಗಬಾರದು’ ಎಂದರು. 

‘ಆರ್ಥಿಕ ಹಿಂದುಳಿದವರಿಗೆ ಕೇಂದ್ರ ನಿಗದಿಪಡಿಸಿರುವ ಶೇ 10ರಷ್ಟು ಮೀಸಲಾತಿ ಜಾರಿಗೆ ಏನು ಸಮಸ್ಯೆ ಇದೆ ಎಂಬುದನ್ನು ರಾಜ್ಯ ಜನರ ಮುಂದಿಡಬೇಕು. ಬೀದಿಯಲ್ಲಿ ನಿಂತು ಹೋರಾಡಿದವರಿಗೆ, ದಂಗೆ ಎದ್ದರೆ ಮಾತ್ರ ಸೌಲಭ್ಯ ಎಂಬಂತಾದರೆ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಮುಂದೆ ಬರುವ ಸರ್ಕಾರ ಆದ್ಯತೆ ಮೇಲೆ ಈ ವಿಷಯ ಎತ್ತಿಕೊಳ್ಳಬೇಕು’ ಎಂದು ಹೇಳಿದರು.

‘ಶೇ 10ರಷ್ಟು ಮೀಸಲಾತಿಯಲ್ಲಿ ಶೇ 4ರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ನೀಡುವ ರಾಜ್ಯ ಸರ್ಕಾರದ ನಿರ್ಧಾರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೊದಲು ಈಗಿರುವುದನ್ನು ಜಾರಿಗೊಳಿಸಿ ಅವರಿಗೆ ನ್ಯಾಯ ಒದಗಿಸಲಿ. ಅದನ್ನು ಮತ್ತಷ್ಟು ಗೋಜಲುಗೊಳಿಸುವುದು ಸರಿಯಲ್ಲ’ ಎಂದರು.

‘ಕೋಮುವಾದ ವೈಭವೀಕರಿಸುವ, ಯಾರನ್ನೂ ತುಷ್ಟೀಕರಣ ಮಾಡುವ ಸರ್ಕಾರ ಬರಬಾರದು. ಎಲ್ಲರನ್ನೂ ಸಮಭಾವದಿಂದ ಕಾಣುವ ಸರ್ಕಾರ ಬರಬೇಕು’ ಎಂದು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT