ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಗುರುತಿನ ಚೀಟಿ: ಸಿಬಿಐ ತನಿಖೆಗೆ ಒತ್ತಾಯ

Published 25 ಅಕ್ಟೋಬರ್ 2023, 16:19 IST
Last Updated 25 ಅಕ್ಟೋಬರ್ 2023, 16:19 IST
ಅಕ್ಷರ ಗಾತ್ರ

ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಕಲಿ ಆಧಾರ್‌, ಚುನಾವಣಾ ಗುರುತಿನ ಚೀಟಿ, ಪಾನ್ ಕಾರ್ಡ್‌ಗಳನ್ನು ಸೃಷ್ಟಿಸಿರುವ ಘಟನೆಗೆ ಸಂಬಂಧಿಸಿದಂತೆ ಸಿಬಿಐ ಅಥವಾ ಎನ್‌ಐಎಯಿಂದ ತನಿಖೆ ನಡೆಸಬೇಕು ಎಂದು ಬಿಜೆಪಿ ಶಾಸಕ ಎಸ್‌.ಸುರೇಶ್‌ ಕುಮಾರ್‌ ಒತ್ತಾಯಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಎಸ್ಎಲ್‌ ಟೆಕ್ನೊ ಸೊಲ್ಯೂಷನ್ಸ್‌ನಲ್ಲಿ ಸಿದ್ಧಪಡಿಸಿದ ನಕಲಿ ಆಧಾರ್‌ ಕಾರ್ಡ್‌ಗಳನ್ನು ಕೂಡಲೇ ರದ್ದು ಮಾಡಬೇಕು. ಇದರಲ್ಲಿ ಸಚಿವ ಬೈರತಿ ಸುರೇಶ್‌ ಅವರ ನಿಕಟವರ್ತಿಗಳೂ ಶಾಮೀಲಾಗಿದ್ದಾರೆ ಎಂದು ಅವರು ಆರೋಪಿಸಿದರು.

‘ಜನನ ದೃಢೀಕರಣ ಪತ್ರವನ್ನೂ ನೀಡದೇ ಆಧಾರ್‌ ಕಾರ್ಡ್‌ ಮಾಡಿಕೊಡಲಾಗಿದೆ ಎಂದರೆ ಇವರ ಅಟ್ಟಹಾಸ, ಅಹಂಕಾರ ಎಷ್ಟಿರಬೇಕು? ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಚುನಾವಣೆಯಲ್ಲಿ ಗೆಲುವಿಗಾಗಿ ಇದನ್ನು ಮಾಡಿಸಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೂ ದೂರು ಕೊಡಲಿದ್ದೇವೆ. ಆಧಾರ್‌ ಕಾರ್ಡ್‌, ನಕಲಿ ಮತದಾರರ ಚೀಟಿ ಜಾಲದ ವ್ಯಾಪ್ತಿ ವಿಚಾರಣೆ ನಡೆಯಬೇಕಿದೆ. ಎನ್‌ಐಎ ಅಥವಾ ಸಿಬಿಐಗೆ ಒಪ್ಪಿಸಲು ಮನವಿ ಮಾಡುತ್ತೇವೆ’ ಎಂದು ಹೇಳಿದರು.

‘ಹೆಬ್ಬಾಳ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಪ್ರಕಾರ ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಪೊಲೀಸ್‌ ಇನ್ಸ್‌ಪೆಕ್ಟರ್ ಅವರು ಇದೇ 19 ರಂದು ಆರ್‌ಟಿ ನಗರದ ಸುಲ್ತಾನ್‌ ಪಾಳ್ಯ, ಬನಶಂಕರಿ ಕಾಂಪ್ಲೆಕ್ಸ್‌ನ ಎಂಎಸ್‌ಎಲ್‌ ಟೆಕ್ನೊ ಸೊಲ್ಯೂಷನ್ಸ್‌ನಲ್ಲಿ ಗುರುತಿನ ಚೀಟಿಗಳನ್ನು ಸಿದ್ಧಪಡಿಸಲಾಗುತ್ತಿತ್ತು ಎಂದು ಉಲ್ಲೇಖಿಸಲಾಗಿದೆ. ಇವರು ಈ ಎಲ್ಲಾ ಗುರುತಿನ ಚೀಟಿಗಳನ್ನು ಸ್ವಂತ ಲಾಭಕ್ಕಾಗಿ ಸೃಷ್ಟಿಸಿ ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾದವರಿಗೆ ಸಹಕರಿಸುತ್ತಿದ್ದರು. ನೈಜ ಗುರುತಿನ ಚೀಟಿಗಳೆಂದು ಹಚ್ಚಿನ ಹಣಕ್ಕೆ ನೀಡಿ ಸರ್ಕಾರ ಮತ್ತು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದರು’ ಎಂದು ಸುರೇಶ್‌ ಕುಮಾರ್‌ ತಿಳಿಸಿದರು.

‘ಎಂಎಸ್‌ಎಲ್‌ ಟೆಕ್ನೊ ಸೊಲ್ಯೂಷನ್ಸ್‌ ಮಾಲೀಕ ಮೌನೇಶ್‌ ಕುಮಾರ್ ಮತ್ತು ಈತನ ಕೃತ್ಯಕ್ಕೆ ಸಹಕರಿಸಿದ ಭಗತ್‌, ರಾಘವೇಂದ್ರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಲಾಗಿತ್ತು. ಸೆಕ್ಷನ್‌ 420 ಸೇರಿ ಹಲವು ಸೆಕ್ಷನ್‌ಗಳಡಿ ಎಫ್‌ಐಆರ್‌ ದಾಖಲಾಗಿದೆ. ಈ ಅಪರಾಧವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದೆ. ಆರೋಪಿ ಮೌನೇಶ್‌ ಸಚಿವ ಬೈರತಿ ಸುರೇಶ್ ಅವರ ನಿಕಟವರ್ತಿ’ ಎಂದು ಆರೋಪಿಸಿದ ಅವರು, ಮೌನೇಶ್‌ ಜತೆ ಬೈರತಿ ಸುರೇಶ್‌ ಸ್ಕೂಟರ್‌ನಲ್ಲಿ ಕುಳಿತು ಹೋಗುತ್ತಿದ್ದ ಚಿತ್ರವನ್ನೂ ಪ್ರದರ್ಶಿಸಿದರು. 

ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿವೇಕ್‌ ರೆಡ್ಡಿ ಮಾತನಾಡಿ, ‘ಬಾಂಗ್ಲಾದಿಂದ ವಲಸೆ ಬಂದವರು ಅತ್ಯಂತ ಸುಲಭವಾಗಿ ನಕಲಿ ಗುರುತಿನ ಚೀಟಿಗಳನ್ನು ಪಡೆಯುತ್ತಿದ್ದಾರೆ. ಪೊಲೀಸರು ಈ ಪ್ರಕರಣವನ್ನು ಮುಚ್ಚಿ ಹಾಕಲು ಮುಂದಾಗಿದ್ದಾರೆ’ ಎಂದರು. ಬಿಜೆಪಿ ಮುಖಂಡ ಕಟ್ಟಾ ಜಗದೀಶ್ ನಾಯ್ಡು ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT