ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ವಾಸಿಗಳ ಸಮೀಕ್ಷೆಗೆ ತಿಂಗಳ ಗಡುವು: ಆರಗ ಜ್ಞಾನೇಂದ್ರ

ಸಿಎಂ ಜೊತೆ ಚರ್ಚಿಸಿ ಡಿಟೆನ್ಸನ್‌ ಕೇಂದ್ರಗಳ ಸಂಖ್ಯೆ ಹೆಚ್ಚಳ– ಗೃಹ ಸಚಿವ ಆರಗ ಜ್ಞಾನೇಂದ್ರ
Last Updated 7 ಮಾರ್ಚ್ 2022, 16:25 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರ ಕುರಿತು ಪ್ರತಿ ‌ಠಾಣೆಯಲ್ಲೂ ಸಮೀಕ್ಷೆ ನಡೆಸಿ ಒಂದು ತಿಂಗಳ ಒಳಗೆ ವರದಿ ನೀಡುವಂತೆ ಸೂಚಿಸಲಾಗಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ವಿಧಾನಪರಿಷತ್‌ನಲ್ಲಿ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಮುಖ್ಯಮಂತ್ರಿ ಜೊತೆ ಚರ್ಚಿಸಿ, ದಿಗ್ಬಂಧನ (ಡಿಟೆನ್ಸನನ್‌) ಕೇಂದ್ರಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಶೀಘ್ರದಲ್ಲಿ ನಿರ್ಧರಿಸಲಾಗುವುದು’ ಎಂದರು.

‘ರಾಜ್ಯದಲ್ಲಿ 441 ಮಂದಿ ವಿದೇಶಿ ಪ್ರಜೆಗಳ ವಿರುದ್ಧ 296 ಪ್ರಕರಣಗಳನ್ನು ದಾಖಲಿಸಲಾಗಿದೆ. ಅವು ಇತ್ಯರ್ಥ ಆಗುವವರೆಗೂ ಸ್ವದೇಶಕ್ಕೆ ವಾಪಸು ಹೋಗಲು ಅವಕಾಶ ಕೊಡದೆ, ದಿಗ್ಭಂಧನ ಕೇಂದ್ರಗಳಲ್ಲಿ ಇರಿಸಲಾಗುವುದು. ಪ್ರಕರಣ ಮುಗಿದ ಬಳಿಕ ಬಳಿಕ ಗಡಿಪಾರು ಮಾಡಲಾಗುವುದು. ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ 675 ಮಂದಿ ವಿದೇಶಿಗರು ಅಕ್ರಮವಾಗಿ ನೆಲೆಸಿರುವುದು ಪತ್ತೆಯಾಗಿದೆ. ಅವರು ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗದಂತೆ ಎಚ್ಚರಿಕೆ ವಹಿಸಲು ಮತ್ತು ಅಕ್ರಮವಾಗಿ ನೆಲೆಸಿರುವವರನ್ನು ಪತ್ತೆ ಮಾಡಲು ಎಲ್ಲ ಠಾಣೆಗಳಲ್ಲಿ ನುರಿತ ಸಿಬ್ಬಂದಿ ಮತ್ತು ಅಧಿಕಾರಿಗಳ ತಂಡ ರಚಿಸಲಾಗಿದೆ’ ಎಂದರು.

‘ಹತ್ತು ವರ್ಷಗಳಿಂದ ನಗರದಲ್ಲಿ ಅಕ್ರಮವಾಗಿ ಹಾಗೂ ಸಕ್ರಮವಾಗಿ ನೆಲೆಸಿರುವ ವಿದೇಶಿಯರು ಮಾದಕ ವಸ್ತು ಸಾಗಣೆ, ಕಳ್ಳತನ, ವೇಶ್ಯಾವಟಿಕೆ, ನಕಲಿ ನೋಟುಗಳ ದಂಧೆ ಸೇರಿ ಹಲವು ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಗಂಭೀರ ಸ್ವರೂಪದ ಕೃತ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇಲ್ಲಿಯೇ ಉಳಿದುಕೊಳ್ಳಲು ಸಣ್ಣಪುಟ್ಟ ಕ್ರಿಮಿನಲ್ ಪ್ರಕರಣಗಳನ್ನು ಹಾಕಿಸಿಕೊಂಡು ವಿಚಾರಣೆ ಹೆಸರಿನಲ್ಲಿ ಕಾಲಹರಣ ಮಾಡಿ ಅಕ್ರಮ ಕೆಲಸಗಳನ್ನು ಮಾಡುತ್ತಿದ್ದಾರೆ. ಪೊಲೀಸ್ ಠಾಣೆ ಮೇಲೆ ದಾಳಿ ಮಾಡುವಷ್ಟು ಉದ್ಧಟತನ ತೋರಿಸಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಬಾಂಗ್ಲಾ, ಆಫ್ರಿಕನ್, ಕಾಂಬೋಡಿಯಾ ಸೇರಿ ಹಲವು ದೇಶಗಳ ನಿವಾಸಿಗಳು ಅಕ್ರಮವಾಗಿ ನೆಲೆಸಿದ್ದಾರೆ’ ಎಂದು ನಾರಾಯಣ ಸ್ವಾಮಿ ಆರೋಪಿಸಿದರು.

ಕಾಂಗ್ರೆಸ್ಸಿನ ಸಲಿಂ ಅಹ್ಮದ್, ‘ವಿದೇಶಿಗರು ಮಾದಕ ವಸ್ತು ದಂಧೆಯಲ್ಲಿ ತೊಡಗಿದ್ದಾರೆ. ಸರ್ಕಾರ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ಬಿಜೆಪಿಯ ಭಾರತಿ ಶೆಟ್ಟಿ, ‘ಬೆಂಗಳೂರಷ್ಟೇ ಅಲ್ಲ, ಹುಬ್ಬಳ್ಳಿ, ಶಿವಮೊಗ್ಗ, ಮಂಗಳೂರಿನಲ್ಲೂ ವಿದೇಶಿಗರು ಅಕ್ರಮವಾಗಿ ನೆಲೆಸಿದ್ದಾರೆ. ಕಾರ್ಯಾಚರಣೆಯನ್ನು ಬೇರೆ ಜಿಲ್ಲೆಗಳಿಗೂ ವಿಸ್ತರಿಸಬೇಕು’ ಎಂದು ಒತ್ತಾಯಿಸಿದರು.‌‌

ಕಾಂಗ್ರೆಸ್ಸಿನ ಕೆ.ಗೋವಿಂದ ರಾಜು, ‘ಠಾಣೆಯ ರೈಟರ್‌ಗೆ ಎಲ್ಲಾ ಮಾಹಿತಿ ಇರುತ್ತದೆ. ಅವರನ್ನು ಹೆಚ್ಚು ದಿನ ಒಂದೇ ಠಾಣೆಯಲ್ಲಿ ಇರಲು ಬಿಡಬೇಡಿ. ಮೇಲ್ಮಟ್ಟದ ಅಧಿಕಾರಿಗಳನ್ನು ನೆಲೆಯೂರಲು ಬಿಡಬಾರದು’ ಎಂದರು.‌

ಅದಕ್ಕೆ ಉತ್ತರಿಸಿದ ಗೃಹ ಸಚಿವರು, ‘ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಕುರಿತು ನನಗೂ ಆತಂಕವಿದೆ. ಗಡಿಯಲ್ಲಿ ಯುದ್ಧ ನಡೆದರೆ ಸೈನಿಕರು ಶತ್ರುಗಳನ್ನು ಹೊಡೆದು ಓಡಿಸುತ್ತಾರೆ. ದೇಶದ ಒಳಗೆ ಮಾದಕ ವಸ್ತುಗಳ ಪರೋಕ್ಷ ಯುದ್ಧ ನಡೆಯುತ್ತಿದೆ. ನಮ್ಮ ಯುವ ಸಮುದಾಯವನ್ನು ನಿಶ್ಯಕ್ತಿಗೊಳಿಸುವ ಹುನ್ನಾರ ನಡೆಯುತ್ತಿದೆ. ಅಕ್ರಮವಾಗಿ ನೆಲೆಸಿರುವವರು ಅಕ್ರಮ ಚಟುವಟಿಕೆ ನಡೆಸುತ್ತಿರುವುದರಿಂದ ನಗರದ ನಾಗರಿಕರ ನೆಮ್ಮದಿ ಇಲ್ಲದಂತಾಗಿದೆ. ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಉಪಟಳಕ್ಕೆ ಕಡಿವಾಣ ಹಾಕಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT