ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕ ಘಟನೆಗೆ ಅಮಾನತಿನ ಶಿಕ್ಷೆ ಸರಿಯಲ್ಲ : ಕಾಗೇರಿ

Published 3 ಆಗಸ್ಟ್ 2023, 15:57 IST
Last Updated 3 ಆಗಸ್ಟ್ 2023, 15:57 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದಲ್ಲಿ 50–60 ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್‌ ಪಕ್ಷ, ಸದನದಲ್ಲಿ ಪೇಪರ್‌ ಹರಿದು ಹಾಕಿದ ಚಿಕ್ಕ ಘಟನೆಗೆ ಶಾಸಕರಿಗೆ ಅಮಾನತಿನ ಶಿಕ್ಷೆ ಕೊಡುವುದು ಸರಿಯಲ್ಲ’ ಎಂದು ವಿಧಾನಸಭೆ ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸಿಟಿಜನ್ಸ್ ಫಾರ್ ಡೆಮಾಕ್ರೆಸಿ ಆಯೋಜಿಸಿದ್ದ ‘ಶಾಸಕರ ಅಮಾನತು ಒಂದು ಮುಕ್ತ ಚರ್ಚೆ’ಯಲ್ಲಿ ಅವರು ಮಾತನಾಡಿದರು.

‘ವಿಧಾನಸಭೆಯಲ್ಲಿ ದುರ್ಬೀನು ಹಾಕಿ ಹುಡುಕಿದರೂ ಸಿಗದಷ್ಟು ಚಿಕ್ಕ ಪ್ರಕರಣ ಇದಾಗಿದೆ. ಊಟದ ವಿರಾಮ ನೀಡಿದ್ದರೆ ಇಂತಹ ಘಟನೆಯೇ ನಡೆಯುತ್ತಿರಲಿಲ್ಲ. ಈ ಹಿಂದೆ, ಯೋಗಿಶ್‌ ಭಟ್‌ ಅವರತ್ತ ಪೇಪರ್‌ ವೇಯ್ಟ್‌ ಎಸೆದು, ಫೈಲ್‌ಗಳನ್ನೇ ಕಿತ್ತೆಸೆಗಿದ್ದರು. ಆಗ ಅಮಾನತು ಮಾಡಿರಲಿಲ್ಲ. ಸದನವನ್ನು ಸುಗಮವಾಗಿ ನಡೆಸಿಕೊಂಡು ಹೋಗುವಲ್ಲಿ ಆಡಳಿತ ಪಕ್ಷದವರ ಪಾತ್ರ ಅತ್ಯಂತ ಪ್ರಮುಖ’ ಎಂದು ನುಡಿದರು.

‌ವಿಧಾನಪರಿಷತ್‌ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿ, ‘ವಿಧಾನಸಭೆಯಲ್ಲಿ ಪೈಲ್ವಾನರಂತೆ ತೊಡೆ ತಟ್ಟಿದವರು ಇಂದಿನ ಮುಖ್ಯಮಂತ್ರಿಯವರು. ತೊಡೆ ತಟ್ಟಿದ್ದು, ಸದನದ ಬಾಗಿಲು ಒದ್ದಿದ್ದು ಮರೆತು ಹೋಗಿದೆಯೇ? ಸಂಸದೀಯ ವ್ಯವಹಾರಗಳ ಸಚಿವರ ನಡೆ ಬೇಸರ ತಂದಿದೆ’ ಎಂದರು.

‘10 ಶಾಸಕರ ಅಮಾನತು ಮಾಡಿ, ಹೊರಕ್ಕೆ ಹಾಕಿದ್ದನ್ನು ನೋಡಿದರೆ, ಅದು ಪಿಕ್ ಪಾಕೆಟ್ ಮಾಡಿದವನಿಗೆ ಮರಣ ದಂಡನೆ ಕೊಟ್ಟಂತೆ. ಮುಂದಿನ ಬಾರಿ ವಜಾ ಕೂಡ ಮಾಡಬಹುದೇನೋ? ಎದೆಗುಂದಬೇಕಿಲ್ಲ, ಕ್ಷುಲ್ಲಕ ರಾಜಕಾರಣದಿಂದ ನಿರಾಶರಾಗಬೇಕಿಲ್ಲ’ ಎಂದು ಹೇಳಿದರು.

‘ಹಿಂದೆ ವಾಜಪೇಯಿಯವರು ಕರ್ನಾಟಕಕ್ಕೆ ಬಂದಾಗ ಅವರನ್ನು ಶಾಸಕರು ಪ್ರಶ್ನಿಸಿದ್ದೆವು. ‘ಧರಣಿ ಮಾಡಬೇಡಿ; ಕಾಂಗ್ರೆಸ್ಸಿನಂತೆ ನಾವಾಗುವುದು ಬೇಡ. ನಾವಾದರೂ ಮೇಲ್ಪಂಕ್ತಿ ಆಗಿರೋಣ’ ಎಂದಿದ್ದರು. ಸಭಾಧ್ಯಕ್ಷರ ಪೀಠದಲ್ಲಿ ಕುಳಿತವರು ಧಾರಾಳತನ ತೋರಿಸಿ, ಜವಾಬ್ದಾರಿಯಿಂದ ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ, ಬೇಲಿಯೇ ಎದ್ದು ಹೊಲ ಮೇಯ್ದರೆ, ಕಾಪಾಡುವ ದೊರೆಯೇ ಕೊಲೆಗಾರನಾದರೆ ರಕ್ಷಣೆ ಮಾಡುವವರು ಯಾರು?  ಚುನಾವಣೆಗಳಲ್ಲಿ ಬೀದಿಬೀದಿಗಳಲ್ಲಿ ಹಣ ಚೆಲ್ಲಿದರೂ ಯಾರಿಗೂ ಶಿಕ್ಷೆ ಆಗುತ್ತಿಲ್ಲ ಎಂದರು.

ಪ್ರಾಮಾಣಿಕ ವ್ಯಕ್ತಿಗಳಿಗೆ ಮಾನ್ಯತೆ ಸಿಗುತ್ತಿಲ್ಲ. ವರ್ಗಾವಣೆ ಒಂದು ಉದ್ಯಮ, ದಂಧೆಯಾಗಿದೆ. ಎರಡು ತಿಂಗಳಲ್ಲೇ ಭ್ರಷ್ಟಾಚಾರ ಬೆಳೆದಿದೆ. ಬೆಲೆ ಏರಿಕೆ ಆಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT