ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರಕರಣ: ಎಎಜಿ ವಾದಕ್ಕೆ ಆಕ್ಷೇಪ–ಕಾಯ್ದಿರಿಸಿದ ಆದೇಶ

Last Updated 17 ಸೆಪ್ಟೆಂಬರ್ 2018, 20:12 IST
ಅಕ್ಷರ ಗಾತ್ರ

ಬೆಂಗಳೂರು: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಯನ್ನು ಅತ್ಯಾಚಾರ ಆರೋಪದಿಂದ ಕೈಬಿಟ್ಟಿರುವುದನ್ನು ಪ್ರಶ್ನಿಸಿರುವ ಮೇಲ್ಮನವಿ ವಿಚಾರಣೆಯಲ್ಲಿ ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ) ವಾದ ಮಂಡಿಸುವುದನ್ನು ಆಕ್ಷೇಪಿಸಲಾಗಿದೆ.

ಈ ಕುರಿತಂತೆ ಸ್ವಾಮೀಜಿ ಸಲ್ಲಿಸಿರುವ ಮಧ್ಯಂತರ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಆರ್‌.ಬಿ.ಬೂದಿಹಾಳ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸೋಮವಾರ ಆಲಿಸಿ ಆದೇಶ ಕಾಯ್ದಿರಿಸಿದೆ.

ವಿಚಾರಣೆ ವೇಳೆ ಸ್ವಾಮೀಜಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ‘ಹೆಚ್ಚುವರಿ ಅಡ್ವೊಕೇಟ್‌ ಜನರಲ್ ಎ.ಎಸ್‌.ಪೊನ್ನಣ್ಣ ಸಾಂವಿಧಾನಿಕ ಹುದ್ದೆ ನಿಭಾಯಿಸುತ್ತಿದ್ದು ಈ ಪ್ರಕರಣದಲ್ಲಿ ವಾದ ಮಂಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ’ ಎಂದು ಆಕ್ಷೇಪಿಸಿದರು.

‘ಹೈಕೋರ್ಟ್‌ನಲ್ಲಿನ ಕ್ರಿಮಿನಲ್‌ ಪ್ರಕರಣಗಳಲ್ಲಿ ಸರ್ಕಾರ ಅಥವಾ ಪ್ರಾಸಿಕ್ಯೂಷನ್‌ ಅನ್ನು ಪ್ರತಿನಿಧಿಸಬೇಕಾದರೆ ಅಂತಹವರು ರಾಜ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್ ಆಗಿರಬೇಕು ಅಥವಾ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್ ಆಗಿರಬೇಕು. ಇಲ್ಲವಾದರೆ ನಿರ್ದಿಷ್ಟ ಪ್ರಕರಣದಲ್ಲಿ ವಾದ ಮಂಡಿಸಲು ಸರ್ಕಾರದ ಒಪ್ಪಿಗೆ ಇರಬೇಕು. ಇಲ್ಲದಿದ್ದರೆ ಇದು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಕಲಂ 24ರ ಉಲ್ಲಂಘನೆಯಾಗತ್ತದೆ’ ಎಂದು ವಿವರಿಸಿದರು.

ಇದನ್ನು ಅಲ್ಲಗಳೆದ ಪೊನ್ನಣ್ಣ, ‘ಕರ್ನಾಟಕ ಕಾನೂನು ಅಧಿಕಾರಿಗಳು (ಸೇವೆ ಮತ್ತು ಷರತ್ತುಗಳು) ಕಾಯ್ದೆಯ ಕಲಂ 21 (ಸಿ) ಪ್ರಕಾರ ಹೆಚ್ಚುವರಿ ಅಡ್ವೊಕೇಟ್‌ ಜನರಲ್ ಕ್ರಿಮಿನಲ್ ಪ್ರಕರಣಗಳಲ್ಲಿ ಹಾಜರಾಗಲು ಅವಕಾಶವಿದೆ’ ಎಂದು ಪ್ರತಿಪಾದಿಸಿದರು.

‘ಪ್ರತಿವಾದಿಗಳು ಪ್ರಕರಣವನ್ನು ಸುಖಾಸುಮ್ಮನೇ ವಿಚಾರಣೆಯನ್ನು ವಿಳಂಬಿಸಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ನ್ಯಾಯಪೀಠ ಮಧ್ಯಂತರ ಅರ್ಜಿಯನ್ನು ಪರಿಗಣಿಸಬಾರದು’ ಎಂದು ಮನವಿ ಮಾಡಿದರು.

ಪ್ರಕರಣವೇನು?: ‘ಸ್ವಾಮೀಜಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಆದರೆ, ಪ್ರಕರಣದ ವಿಚಾರಣೆ ನಡೆಸಿರುವ ಸೆಷನ್ಸ್ ನ್ಯಾಯಾಧೀಶ ಜಿ.ಬಿ. ಮುದಿಗೌಡರ್ ಸ್ವಾಮೀಜಿಯನ್ನು ಆರೋಪದಿಂದ ಮುಕ್ತಗೊಳಿಸಿದ್ದಾರೆ. ಆದ್ದರಿಂದ ಈ ಕುರಿತಂತೆ 2016ರ ಮಾರ್ಚ್ 31ರಂದು ಮುದಿಗೌಡರ್ ನೀಡಿರುವ ಆದೇಶ ರದ್ದುಗೊಳಿಸಬೇಕು’ ಎಂದು ಕೋರಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಈ ಮೇಲ್ಮನವಿ ಸಲ್ಲಿಸಿದ್ದಾರೆ. ಪ್ರಾಸಿಕ್ಯೂಷನ್‌ ಕೂಡಾ ಮೇಲ್ಮನವಿ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT