ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸಗಿ ಅಭಿವೃದ್ಧಿಯ ಕನಸಿನ ದೊರೆ: ರಾಜಾ ವೆಂಕಟಪ್ಪ ನಾಯಕ

Published 25 ಫೆಬ್ರುವರಿ 2024, 11:42 IST
Last Updated 25 ಫೆಬ್ರುವರಿ 2024, 11:42 IST
ಅಕ್ಷರ ಗಾತ್ರ

ಹುಣಸಗಿ (ಯಾದಗಿರಿ ಜಿಲ್ಲೆ): ಸುರಪುರ ಮತಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪನಾಯಕ (ಆರ್‌ವಿಎನ್) ಅವರು ಇನ್ನಿಲ್ಲ ಎಂಬ ಸುದ್ದಿ ಭಾನುವಾರ ಮಧ್ಯಾಹ್ನ ತಾಲ್ಲೂಕಿನಲ್ಲಿ ಹರಡುತ್ತಿದ್ದಂತೆ ಕಾಂಗ್ರೆಸ್ ವಲಯದಲ್ಲಿ ಬರಸಿಡಿಲು ಬಡಿದಂತಾಗಿದ್ದು, ತಾಲ್ಲೂಕು ಕೇಂದ್ರದಾದ್ಯಂತ ದುಖಃ ನೀರವ ಮೌನ ಸೇರಿದಂತೆ ಶೋಕ ಮಡುಗಟ್ಟಿದ ವಾತಾವರಣವೇ ಇದೆ.

ಎಐಸಿಸಿ ಅಧ್ಯಕ್ಷ ಮಲ್ಲಕಾರ್ಜುನ ಖರ್ಗೆ ಅವರಿಗೆ ಪರಮಾಪ್ತರಾಗಿದ್ದ ಶಾಸಕ ರಾಜಾ ವೆಂಕಟಪ್ಪನಾಯಕ ಅವರು, ಶಾಸಕರಾಗುತ್ತಿದ್ದಂತೆ ಕಾಂಗ್ರೆಸ್ ವಲಯದಲ್ಲಿ ಈ ಭಾರಿ ಮತ್ತೆ ಸುರಪುರಕ್ಕೆ ಹೆಚ್ಚಿನ ಅಧಿಕಾರ ಸಿಗಲಿದೆ ಎಂದು ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮದಲ್ಲಿದ್ದರು. ಅದರಂತೆ ಕೆಲವೇ ದಿನಗಳಲ್ಲಿ ಶಾಸಕ ರಾಜಾ ವೆಂಕಟಪ್ಪನಾಯಕ ಅವರ ಪಕ್ಷ ನಿಷ್ಠೆ ಹಾಗೂ ಹಿರಿಯತವನ್ನು ಗುರುತಿಸಿ ಅವರನ್ನು ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತಿದ್ದಂತೆ ತಾಲ್ಲೂಕಿನಲ್ಲಿ ಸಂಭ್ರಮ ಮನೆಮಾಡಿತ್ತು. ಆದರೆ, ಆ ಸಂಭ್ರಮ ಕೆಲವೇ ಸಮಯದಲ್ಲಿ ವಿಧಿ ಕಿತ್ತುಕೊಂಡು ಇಡೀ ಕ್ಷೇತ್ರದಲ್ಲಿಯೇ ಕಾರ್ಗತ್ತಲು ಕವಿಯುಂತೆ ಮಾಡಿದೆ.

ತಮ್ಮ ರಾಜಕೀಯ ಜೀವನದಲ್ಲಿ ಹುಣಸಗಿಗೆ ಮೊದಲಿನಿಂದಲೂ ಅಪ್ಪಟ ಅಭಿಮಾನ ಹಾಗೂ ಅಭಿವೃದ್ಧಿಗೆ ಸಾಕಷ್ಟು ಕನಸು ಕಂಡವರಾಗಿದ್ದು, ಈ ನಿಟ್ಟಿನಲ್ಲಿ ತಾಲ್ಲೂಕಿನ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಈ ಭಾಗದಲ್ಲಿ ಸಾಕಷ್ಟು ಕಟ್ಟಾ ಅಭಿಮಾನಿಗಳನ್ನು ಹೊಂದಿದ್ದರು.

‘ಹುಣಸಗಿ ತಾಲ್ಲೂಕಿನಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ ಶಾಲಾ ಕಟ್ಟಡಗಳು, ಹಾಸ್ಟೆಲ್, ನೀರಾವರಿ ಯೋಜನೆಗಾಗಿ ಕಾಲುವೆ ನವೀಕರಣ ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಗೆ ಹತ್ತಿರವಾಗಿದ್ದರು. ನೇರ, ನುಡಿ ಹಾಗೂ ಸರಳ ವ್ಯಕ್ತಿತ್ವದ ಮೂಲಕ ಜನರಿಗೆ ಹತ್ತಿರವಾಗಿದ್ದರು. ಕೊಟ್ಟ ಮಾತಿಗೆ ಎಂದೂ ತಪ್ಪಿದವರಲ್ಲ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ ನೋವು ತೋಡಿಕೊಂಡರು.

‘ಶಾಸಕ ರಾಜಾ ವೆಂಕಟಪ್ಪನಾಯಕ ಅವರ ಅಗಲಿಕೆ ನೋವು ಸಹಿಸಲು ಆಗುತ್ತಿಲ್ಲ’ ಎಂದು ಕೆಪಿಸಿಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಸವರಾಜ ಸಜ್ಜನ್ ನೋವು ತೊಡಿಕೊಂಡರು.

ಹುಣಸಗಿ ತಾಲ್ಲೂಕು ಕೇಂದ್ರ ಉದ್ಘಾಟನೆ

ಕಳೆದ ಅವಧಿಯಲ್ಲಿ ಶಾಸಕರಾಗಿದ್ದ ಸಂದರ್ಭದಲ್ಲಿ ಫೆ. 18, 2018 ರಂದು ಹುಣಸಗಿ ತಾಲ್ಲೂಕು ಕೇಂದ್ರ ಉದ್ಘಾಟಿಸಲಾಗಿತ್ತು. ಈ ಬಾರಿ ಬಸ್ ಡಿಪೋ, ಬಿಇಒ ಕಚೇರಿ ಸೇರಿದಂತೆ ಇತರ ಸರ್ಕಾರಿ ಕಚೇರಿಗಳನ್ನು ಆರಂಭಿಸುವ ಮೂಲಕ ನೂತನ ತಾಲ್ಲೂಕು ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದು ಕಳೆದ ಎರಡು ತಿಂಗಳ ಹಿಂದೆ ಸ್ವತಃ ರಾಜಾ ವೆಂಕಟಪ್ಪನಾಯಕ ಅವರೆ ಸುದ್ದಿಗಾರರಿಗೆ ತಿಳಿಸಿದ್ದರು.

‘ಎಲ್ಲ ಶಾಸಕರಿಗೆ ಒಂದೇ ತಾಲ್ಲೂಕು ಒಂದು ಕ್ಷೇತ್ರ ಇರುತ್ತದೆ. ಆದರೆ, ನನಗೆ ಎರಡು ತಾಲ್ಲೂಕು ಅಭಿವೃದ್ಧಿಗೆ ಒತ್ತು ನೀಡುವ ಅಪರೂಪದ ಶಾಸಕರಲ್ಲಿ ನಾನೂ ಒಬ್ಬ ಎಂದು ಹೆಮ್ಮೆಯಿಂದ ಹೇಳಿದ್ದರು.

ಹುಣಸಗಿ ಪಟ್ಟಣದಲ್ಲಿ ಬಸ್ ಡಿಪೋ ಆರಂಭಿಸುವ ನಿಟ್ಟಿನಲ್ಲಿ ಕಳೆದ ಎರಡು ತಿಂಗಳ ಹಿಂದೆ ಸರ್ಕಾರ ಮಟ್ಟದಲ್ಲಿ ಪ್ರಯತ್ನಿಸಿ ಕೆಬಿಜೆಎಲ್ಎಲ್‌ನಲ್ಲಿ ಲಭ್ಯವಿರುವ ಸ್ಥಳವನ್ನು ಗುರುತಿಸಿ ಅದಕ್ಕೆ ಸೂಕ್ತ ಹಣ ಕಟ್ಟುವಂತೆ ಸಾರಿಗೆ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಹೇಳಿದ್ದರು.

‘ಹುಣಸಗಿ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬಂದಿದ್ದನ್ನು ಕಂಡು ಅತ್ಯಂತ ಸಂಸತ ವ್ಯಕ್ತಪಡಿಸಿ ಸದಸ್ಯರಿಗೆ ಅಭಿನಂದನೆ ತಿಳಿಸಿದ್ದರು’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ ಹಾಗೂ ಪಟ್ಟಣ ಪಂಚಾಯಿತಿ ನೂತನ ಸದಸ್ಯ ಸಿದ್ದು ಮುದಗಲ್ಲ ಹಾಗೂ ದುಖಃದಿಂದಲೇ ಹೇಳಿದರು.

ಹುಣಸಗಿ ತಾಲ್ಲೂಕು ಕೇಂದ್ರವನ್ನು ಅಂದಿನ ಶಾಸಕ ರಾಜಾ ವೆಂಕಟಪ್ಪನಾಯಕ ಉದ್ಘಾಟಿಸಿರುವುದು (ಸಂಗ್ರಹ ಚಿತ್ರ)


ಹುಣಸಗಿ ತಾಲ್ಲೂಕು ಕೇಂದ್ರವನ್ನು ಅಂದಿನ ಶಾಸಕ ರಾಜಾ ವೆಂಕಟಪ್ಪನಾಯಕ ಉದ್ಘಾಟಿಸಿರುವುದು (ಸಂಗ್ರಹ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT