ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಕರೇ ಕರ್ಮಸಿದ್ಧಾಂತ ನಂಬಿದರೆ ಹೇಗೆ?: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

Published : 5 ಸೆಪ್ಟೆಂಬರ್ 2024, 15:26 IST
Last Updated : 5 ಸೆಪ್ಟೆಂಬರ್ 2024, 15:26 IST
ಫಾಲೋ ಮಾಡಿ
Comments

ಬೆಂಗಳೂರು: ಹಣೆಬರಹ, ಕರ್ಮ ಸಿದ್ಧಾಂತವನ್ನು ಶಿಕ್ಷಕರೇ ನಂಬಿದರೆ ಮನುಷ್ಯ–ಮನುಷ್ಯನನ್ನು ಪ್ರೀತಿಸುವ ಮನೋಭಾವದ ವಿದ್ಯಾರ್ಥಿಗಳನ್ನು ರೂಪಿಸಲು ಹೇಗೆ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ವಿಧಾನಸೌಧದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವಾದಿ ಶರಣರು ಎಂಟು ಶತಮಾನಗಳ ಹಿಂದೆಯೇ ಕರ್ಮ ಸಿದ್ಧಾಂತ ತಿರಸ್ಕರಿಸಿದ್ದರು. ಶಿಕ್ಷಕ ಸಮೂಹ ಅಂತಹ ಸಿದ್ಧಂತ ನಂಬುವುದು ಅಪಾಯಕಾರಿ. ವಿಜ್ಞಾನ ವಿಷಯ ಓದಿದ ವಿದ್ಯಾರ್ಥಿಗಳೇ ಮೌಢ್ಯಕ್ಕೆ ಜೋತು ಬೀಳುವುದೂ ವಿಪರ್ಯಾಸ. ಶಿಕ್ಷಣ ಪಡೆದವರೇ ಜಾತಿ ತಾರತಮ್ಯ ಮಾಡಿದರೆ, ಅವರು ಪಡೆದ ಶಿಕ್ಷಣಕ್ಕೆ ಅರ್ಥ ಇರುವುದಿಲ್ಲ ಎಂದರು.

ಮಾನವೀಯತೆ, ಸ್ವತಂತ್ರ ಚಿಂತನೆ, ವೈಜ್ಞಾನಿಕ ಹಾಗೂ ಜಾತ್ಯತೀತ ಮನೋಭಾವದ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು. ಆಗ ದೇಶದ ಭವಿಷ್ಯ ತಾನಾಗಿಯೇ ರೂಪುಗೊಳುತ್ತದೆ. ಈ ಕೆಲಸ ಶಿಕ್ಷಕರ ಮೂಲಭೂತ ಜವಾಬ್ದಾರಿಯೂ ಆಗಿದೆ ಎಂದು ಹೇಳಿದರು.

ಎಲ್ಲರಿಗೂ ಶಿಕ್ಷಣ ಸಿಗದಂತೆ ತಡೆಯುತ್ತಿದ್ದ ಕಾಲ ಅಂತ್ಯಗೊಂಡಿದೆ. ಈಗ ಪ್ರತಿಯೊಬ್ಬರಿಗೂ ಶಿಕ್ಷಣ ಕಡ್ಡಾಯವಾಗಿದೆ. ಶಿಕ್ಷಕ ಎಂಬುದು ವೃತ್ತಿಯಲ್ಲ, ಅದು ಸಾಮಾಜಿಕ ಜವಾಬ್ದಾರಿ. ಆಕಸ್ಮಿಕವಾಗಿ ಶಿಕ್ಷಕ ವೃತ್ತಿಗೆ ಬಂದವರಿಗಿಂತ, ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರ ಬಗ್ಗೆ ಹೆಮ್ಮೆ ಎನಿಸುತ್ತದೆ. ಸಾವಿತ್ರಿಬಾಯಿ ಫುಲೆ, ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಆದರ್ಶಗಳು ಇಡೀ ಶಿಕ್ಷಕ ಸಮುದಾಯಕ್ಕೆ ಮಾದರಿಯಾಗಬೇಕು ಎಂದರು.

ಪ್ರಾಥಮಿಕ ಶಾಲೆಯ 20 ಶಿಕ್ಷಕರು, ಪ್ರೌಢಶಾಲೆಯ 11 ಶಿಕ್ಷಕರು, ಪಿಯು ಕಾಲೇಜಿನ ಎಂಟು ಉಪನ್ಯಾಸಕರು ಹಾಗೂ ಒಬ್ಬ ಪ್ರಾಂಶುಪಾಲರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ಶಾಸಕರಾದ ಬಿ.ಪಿ. ಹರೀಶ್‌, ಎನ್‌.ಎಚ್‌. ಕೋನರಡ್ಡಿ, ವಿಧಾನ ಪರಿಷತ್‌ ಸದಸ್ಯರಾದ ರಾಮೋಜಿ ಗೌಡ, ಸುಧಾಮ್‌ದಾಸ್‌, ಡಿ.ಟಿ. ಶ್ರೀನಿವಾಸ್‌, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಬಸಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಉಪಸ್ಥಿತರಿದ್ದರು. ಶಾಸಕ ರಿಜ್ವಾನ್‌ ಅರ್ಷದ್ ಅಧ್ಯಕ್ಷತೆ ವಹಿಸಿದ್ದರು.

ಎಂ.ಬಾಗೀರಥಿ 
ಎಂ.ಬಾಗೀರಥಿ 
ಆರ್.ಡಿ. ರವೀಂದ್ರ
ಆರ್.ಡಿ. ರವೀಂದ್ರ
ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸಿದ 40 ದಿನಗಳಲ್ಲಿ 40 ಸಾವಿರ ಮಕ್ಕಳು ಪ್ರವೇಶ ಪಡೆದಿದ್ದಾರೆ. ಈ ನಿರ್ಧಾರ ಸರ್ಕಾರಿ ಶಾಲೆಗಳ ಬಲರ್ಧನೆಗೆ ಸಹಕಾರಿಯಾಗಲಿದೆ
ಮಧು ಬಂಗಾರಪ್ಪ ಶಾಲಾ ಶಿಕ್ಷಣ ಸಚಿವ
ಕ್ರಿಯಾಶೀಲ ತಾರೆಯರ ತಂಡ ಕಟ್ಟಿಕೊಂಡು ನಲಿಕಲಿ ಪರಿಣಾಮಕಾರಿ ಅನುಷ್ಠಾನ ಮಕ್ಕಳಿಗೆ ಅಗತ್ಯ ಸಾಮಗ್ರಿ ಲಭ್ಯವಾಗುವಂತೆ ಮಾಡಿದ್ದರ ಫಲವಾಗಿ ಪ್ರಶಸ್ತಿ ಸಂದಿದೆ
–ಭಾಗೀರಥಿ ಪ್ರಶಸ್ತಿ ಪುರಸ್ಕೃತ ಪ್ರಾಥಮಿಕ ಶಾಲಾ ಶಿಕ್ಷಕಿ.
ಸರ್ಕಾರಿ ಶಾಲೆಯ ಅಭಿವೃದ್ಧಿಗೆ ದಾನಿಗಳಿಂದ ₹1.20 ಕೋಟಿ ನೆರವು ಕೊಡಿಸಲು ಯತ್ನಿಸಿದ್ದೆ. 50ಕ್ಕೂ ಹೆಚ್ಚು ರಾಷ್ಟ್ರಗಳ ಒಂದು ಲಕ್ಷಕ್ಕೂ ಅನಿವಾಸಿಗಳಿಗೆ ಕನ್ನಡ ಕಲಿಸಿರುವೆ
–ಆರ್‌.ಡಿ. ರವೀಂದ್ರ ಪ್ರಶಸ್ತಿ ಪುರಸ್ಕೃತ ಪ್ರೌಢಶಾಲಾ ಶಿಕ್ಷಕ. 

ಡಿಸೆಂಬರ್‌ ಒಳಗೆ ಪ್ರಾಂಶುಪಾಲರ ನೇಮಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 310 ಪ್ರಾಂಶುಪಾಲರಿಗೆ ಡಿಸೆಂಬರ್‌ ಒಳಗೆ ನೇಮಕಾತಿ ಆದೇಶ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದರು. ಪ್ರಾಂಶುಪಾಲರ ನೇಮಕಾತಿಗೆ ಈಗಾಗಲೇ ನೇರ ಪರೀಕ್ಷೆ ನಡೆದಿದ್ದು ಫಲಿತಾಂಶವೂ ಪ್ರಕಟವಾಗಿದೆ. ದಾಖಲೆಗಳ ಪರಿಶೀಲನಾ ಕಾರ್ಯ ನಡೆಯುತ್ತಿದೆ. ಎರಡು ತಿಂಗಳ ಒಳಗೆ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು. ಹಾಗೆಯೇ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು ಸ್ಥಳ ನಿಯುಕ್ತಿ ಆದೇಶ ನೀಡಲಾಗುವುದು ಎಂದರು. ರಾಜ್ಯದ ಅನುದಾನಿತ ಪ್ರಥಮದರ್ಜೆ ಕಾಲೇಜುಗಳಲ್ಲಿ 2020ಕ್ಕೂ ಹಿಂದೆ ಖಾಲಿಯಾಗಿದ್ದ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ ಅನುಮತಿ ನೀಡಲಾಗುವುದು ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT