ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಕೌನ್ಸೆಲಿಂಗ್‌ ಆರಂಭಕ್ಕೆ ಸಿಗದ ‘ಶುಭ’ದಿನ!

ಶಿಕ್ಷಣ ಸಚಿವರ ಮಧ್ಯಪ್ರವೇಶ ತಂದ ತೊಡಕು: ಹಳ್ಳಿಗಳತ್ತ ತೆರಳಲು ಶಿಕ್ಷಕರ ನಿರಾಸಕ್ತಿ
Last Updated 3 ಅಕ್ಟೋಬರ್ 2018, 17:20 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಶಾಲಾ ಶಿಕ್ಷಕರ ವಲಯವಾರು ಕಡ್ಡಾಯ ವರ್ಗಾವಣೆಗೆ ಸಕಲ ಸಿದ್ಧತೆಗಳು ಮುಗಿದಿದ್ದರೂ, ಶಿಕ್ಷಣ ಸಚಿವರ ದ್ವಂದ್ವ ನಿಲುವು ಮತ್ತುಆಯಕಟ್ಟಿನ ಸ್ಥಳಗಳಲ್ಲಿ ದಶಕಗಟ್ಟಲೇ ಕಾರ್ಯನಿರ್ವಹಿಸುತ್ತಿರುವ ಕೆಲವು ಶಿಕ್ಷಕರ ಒತ್ತಡದಿಂದ ಕೌನ್ಸಿಲಿಂಗ್‌ ಪ್ರಕ್ರಿಯೆಗೆ ಶುಭದಿನ ಕೂಡಿಬರುತ್ತಿಲ್ಲ.

ವರ್ಗಾವಣೆ ಕಾಯ್ದೆಯಲ್ಲಿನ ಗೊಂದಲಗಳು, ಶಿಕ್ಷಣ ಸಚಿವರ ಮಧ್ಯಪ್ರವೇಶ, ಅಧಿಕಾರಿಗಳ ಅಸಹಾಯಕತೆಯಿಂದ ವರ್ಗಾವಣೆ ಪ್ರಕ್ರಿಯೆ ಮತ್ತೆ ನಿಂತಲ್ಲೆ ನಿಂತಿದೆ ಎಂದು ವರ್ಗಾವಣೆ ಬಯಸಿರುವ ಶಿಕ್ಷಕರು ತೀವ್ರ ಆಕ್ರೋಶ ತೋಡಿಕೊಂಡಿದ್ದಾರೆ.

ವರ್ಗಾವಣೆ ಪ್ರಕ್ರಿಯೆಯನ್ನು ಗಣಕೀಕೃತ ಕೌನ್ಸಿಲಿಂಗ್‌ ಮೂಲಕ ಪಾರದರ್ಶಕವಾಗಿ ನಡೆಸಲು ಎಲ್ಲ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಶಿಕ್ಷಕರ ಸೇವಾ ಮಾಹಿತಿಯನ್ನು ಇಲಾಖೆಯ ಪೋರ್ಟಲ್‌ನಲ್ಲಿ ಭರ್ತಿ ಮಾಡಲಾಗಿದೆ. ವರ್ಗಾವಣೆಗೆ ಅರ್ಹರಾಗಿರುವ ಶಿಕ್ಷಕರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕೌನ್ಸಿಲಿಂಗ್‌ ನಡೆಸಿ, ಸ್ಥಳ ನಿಯೋಜನೆ ಮಾಡುವ ಕೆಲಸ ಮಾತ್ರ ನನೆಗುದಿಗೆ ಬಿದ್ದಿದೆ.

‘ಮೂರು ವರ್ಷಗಳಿಂದ ಮುಂದೂಡುತ್ತಲೇ ಬಂದಿರುವ ಈ ಪ್ರಕ್ರಿಯೆಗೊಂದು ಅಂತ್ಯಹಾಡಲು ಅಕ್ಟೋಬರ್‌ 3ರಿಂದಲೇ ಕೌನ್ಸೆಲಿಂಗ್‌ ಆರಂಭಿಸುತ್ತೇವೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌.ಮಹೇಶ್‌ ಹೇಳಿದ್ದರು. ಅವರ ಮಾತಿನಂತೆ ಪ್ರಕ್ರಿಯೆ ಆರಂಭವಾಗಿಲ್ಲ.

‘ಎಲ್ಲ ಪೂರ್ವಸಿದ್ಧತೆ ಮುಗಿಸಿದ್ದೇವೆ. ವರ್ಗಾವಣೆ ತಡೆ ಹಿಡಿಯುವಂತೆ ಸಚಿವರು ಇದ್ದಕ್ಕಿದ್ದಂತೆ ಸೂಚಿಸಿದರೆ ನಾವೇನು ಮಾಡುವುದಕ್ಕಾಗುತ್ತದೆ’ ಎಂದು ಅಳಲು ತೋಡಿಕೊಳ್ಳುವ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಈ ವಿಷಯದಲ್ಲಿ ಕೈಚೆಲ್ಲುತ್ತಾರೆ.

ವೇಳಾಪಟ್ಟಿಯಂತೆ ಈ ತಿಂಗಳು ವರ್ಗಾವಣೆ ಆಗುವ ನಿರೀಕ್ಷೆಯಲ್ಲಿದ್ದ ಶಿಕ್ಷಕರುಇವರ ನಿರ್ಧಾರಗಳಿಂದ ಮತ್ತೆ ನಿರಾಶರಾಗಿದ್ದಾರೆ.

2017ರ ವರ್ಗಾವಣೆ ನಿಯಮಗಳಲ್ಲಿ ಎ, ಬಿ ಮತ್ತು ಸಿ ವಲಯಗಳನ್ನು ರೂಪಿಸಲಾಗಿದೆ. ಜಿಲ್ಲಾ ಕೇಂದ್ರಗಳಲ್ಲಿನ ಶಾಲೆಗಳನ್ನು ‘ಎ’ ವಲಯಕ್ಕೆ, ಜಿಲ್ಲಾ ಕೇಂದ್ರದಿಂದ 20 ಕಿ.ಮೀ. ಅಂತರದಲ್ಲಿನ ಶಾಲೆಗಳನ್ನು ‘ಬಿ’ ವಲಯಕ್ಕೆ, ಉಳಿದ ಶಾಲೆಗಳನ್ನು ‘ಸಿ’ ವಲಯಕ್ಕೆ ಸೇರಿಸಲಾಗಿದೆ.

ವರ್ಗಾವಣೆಯ ನಿಯಮಾವಳಿ ಅನ್ವಯ ವಲಯಗಳಲ್ಲಿನ ಶೇ 5ರಷ್ಟು ಶಿಕ್ಷಕರನ್ನು ಕಡ್ಡಾಯ ವರ್ಗಾವಣೆ ಮಾಡಲು ಇಲಾಖೆ ನಿರ್ಧರಿಸಿದೆ. ‘ಎ’ ವಲಯದಿಂದ ‘ಬಿ’ ವಲಯಕ್ಕೆ, ‘ಬಿ’ ಯಿಂದ ‘ಸಿ’ ವಲಯಕ್ಕೆ, ‘ಸಿ’ ಯಿಂದ ‘ಎ’ ವಲಯಕ್ಕೆ ಶಿಕ್ಷಕರು ವರ್ಗ ಆಗಬೇಕು. 70 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಎಂದು ನಿಗದಿಪಡಿಸಿ, ಹೆಚ್ಚುವರಿ ಶಿಕ್ಷಕರು ಇದ್ದರೆ, ಅವರಲ್ಲಿ ಶೇ5ರಷ್ಟು ವರ್ಗಾವಣೆ ಮಾಡಬೇಕು. ಕೋರಿಕೆ ಮೇರೆಗೆಶೇ3ರಷ್ಟು ಶಿಕ್ಷಕರನ್ನು ವರ್ಗಾವಣೆ ಮಾಡಬಹುದು ಎಂದು ನಿಯಮಗಳು ಹೇಳುತ್ತವೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಶಿಕ್ಷಣ ಸಚಿವ ಎನ್.ಮಹೇಶ್‌ ಅವರನ್ನು ಸಂಪರ್ಕಿಸಿದಾಗ ಕರೆಯನ್ನು ಸ್ವೀಕರಿಸಲಿಲ್ಲ.

**

ಶಿಕ್ಷಕರ ನೇಮಕಾತಿ ಪಟ್ಟಿ 1:2 ಅನುಪಾತದಲ್ಲಿ ಪ್ರಕಟವಾಗಿದೆ. ಅದರಲ್ಲಿನ ಶಿಕ್ಷಕ ಸ್ಥಾನಗಳನ್ನು ಹುದ್ದೆಗಳನ್ನು ಪರಿಗಣಿಸಿ, ಹೆಚ್ಚುವರಿ ವರ್ಗಾವಣೆ ಮಾಡಬೇಕು.
- ವಿ.ಎಂ.ನಾರಾಯಣಸ್ವಾಮಿ, ಅಧ್ಯಕ್ಷ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT