2024–25ನೇ ಸಾಲಿಗಿಲ್ಲ ರಾಜ್ಯ ಶಿಕ್ಷಣ ನೀತಿ?
ರಾಜ್ಯ ಶಿಕ್ಷಣ ನೀತಿಯ ಕರಡು ರೂಪಿಸಲು ಶಿಕ್ಷಣ ತಜ್ಞ ಹಾಗೂ ಯುಜಿಸಿ ಮಾಜಿಅಧ್ಯಕ್ಷ ಪ್ರೊ.ಸುಖ್‌ದೇವ್ ಥೋರಟ್ ಅಧ್ಯಕ್ಷತೆಯ ರಾಜ್ಯ ಶಿಕ್ಷಣ ನೀತಿ ಆಯೋಗದ ಅವಧಿಯನ್ನು ಇದೇ ವರ್ಷದ ಆಗಸ್ಟ್‌ವರೆಗೆ ವಿಸ್ತರಿಸಲಾಗಿದೆ.ಹಾಗಾಗಿ, ಹೊಸ ಶಿಕ್ಷಣ ನೀತಿಯ ಅನುಷ್ಠಾನ ಇನ್ನೊಂದು ವರ್ಷ ವಿಳಂಬವಾಗಲಿದೆ. ಆಯೋಗ ಈಗಾಗಲೇ ಪ್ರಥಮ ವರದಿ ಸಲ್ಲಿಸಿದ್ದು, ಇನ್ನಷ್ಟು ವಿಷಯಗಳ ಕುರಿತು ಅಧ್ಯಯನ ನಡೆಸುತ್ತಿದೆ. ಪ್ರೌಢಶಾಲಾ ಹಂತದವರೆಗಿನ ಪಠ್ಯಪುಸ್ತಕ ಗಳು ಮುದ್ರಣ ಹಂತದಲ್ಲಿವೆ. ಪದವಿ ಕಾಲೇಜುಗಳು ಜುಲೈ–ಆಗಸ್ಟ್ ವೇಳೆಗೆ ಪ್ರಾರಂಭವಾಗಿರುತ್ತವೆ. ಆಯೋಗ ಅಂತಿಮ ವರದಿ ನೀಡಿದ ನಂತರ ಅನುಷ್ಠಾನಕ್ಕೆ ಸಮಯಬೇಕಾಗುತ್ತದೆ. ಹಾಗಾಗಿ, ರಾಜ್ಯ ಶಿಕ್ಷಣ ನೀತಿ ಅನುಷ್ಠಾನ ವಿಳಂಬವಾಗಲಿದೆ ಎನ್ನುತ್ತಾರೆ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ.