ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರಿಗೆ ಮತ್ತೆ ಸಿಗಲಿದೆ ‘ದಂತ ಭಾಗ್ಯ’

ಕೋವಿಡ್‌: ಸ್ಥಗಿತಗೊಂಡಿದ್ದ ಯೋಜನೆಗೆ ಮರು ಚಾಲನೆ l ದಂತ ಪಂಕ್ತಿಗೆ ಹೆಚ್ಚಿದ ಬೇಡಿಕೆ
Last Updated 9 ಸೆಪ್ಟೆಂಬರ್ 2022, 19:28 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಕಾಣಿಸಿಕೊಂಡ ಬಳಿಕ ಸ್ಥಗಿತಗೊಂಡಿದ್ದ ‘ದಂತ ಭಾಗ್ಯ’ ಯೋಜನೆಯನ್ನು ಆರೋಗ್ಯ ಇಲಾಖೆ ಮತ್ತೆ ಪ್ರಾರಂಭಿಸಿದೆ. ಬಾಯಿ ಚಿಕಿತ್ಸೆಗೆ ವಿಧಿಸಿದ್ದ ನಿರ್ಬಂಧಗಳು ತೆರವುಗೊಂಡಿದ್ದು, ದಂತ ಪಂಕ್ತಿಗೆ ಬೇಡಿಕೆ ಹೆಚ್ಚಾಗಿದೆ.

ಈ ವರ್ಷ ನಾಲ್ಕು ತಿಂಗಳ (ಏಪ್ರಿಲ್–ಜುಲೈ) ಅವಧಿಯಲ್ಲಿ 945 ಮಂದಿಗೆ ದಂತ ಪಂಕ್ತಿಗಳನ್ನು ಅಳವಡಿಕೆ ಮಾಡಲಾಗಿದೆ.

ಬಿಪಿಎಲ್ ಕುಟುಂಬಗಳ 45 ವರ್ಷಗಳು ಮೇಲ್ಪಟ್ಟವರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಹಲ್ಲುಗಳು ಇಲ್ಲದವರಿಗೆ ಯೋಜನೆಯಡಿ ಉಚಿತವಾಗಿ ದಂತ ಪಂಕ್ತಿಗಳನ್ನು ವಿತರಿಸಲಾಗುತ್ತದೆ.2020ರ ಮಾರ್ಚ್‌ ತಿಂಗಳಲ್ಲಿ ಕೋವಿಡ್ ಕಾಣಿಸಿಕೊಂಡ ಬಳಿಕ ದಂತ ಚಿಕಿತ್ಸೆಗಳಿಗೆ ನಿರ್ಬಂಧ ಹೇರಲಾಗಿತ್ತು. ಎರಡು ಹಾಗೂ ಮೂರನೇ ಅಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗಿದ್ದರಿಂದ ದಂತ ಚಿಕಿತ್ಸೆ ಮುಂದೂಡುವಂತೆ ಆಸ್ಪತ್ರೆಗಳಿಗೆ ಸರ್ಕಾರ ಸೂಚಿಸಿತ್ತು.

ಕೋವಿಡ್ ಪ್ರಕರಣಗಳು ಕಳೆದ ಏಪ್ರಿಲ್‌ ಬಳಿಕ ಇಳಿಕೆ ಕಂಡಿರು ವು ದರಿಂದ ದಂತ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ.ಯೋಜನೆಯ ಫಲಾನುಭವಿಗಳನ್ನು ಸ್ಥಳೀಯ ಮಟ್ಟದಲ್ಲಿ ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಸಹಾಯಕರು ಗುರುತಿಸಲಿದ್ದು,ಯೋಜನೆಯಡಿ ಹೆಸರು ನೋಂದಾಯಿಸಿಕೊಂಡವರಿಗೆ ದಂತ ವೈದ್ಯಕೀಯ ಕಾಲೇಜುಗಳ ಮೂಲಕ ದಂತ ಪಂಕ್ತಿಗಳನ್ನು ಅಳವಡಿಸಲಾಗುತ್ತಿದೆ.

ದಂತ ಪಂಕ್ತಿಗೆ ಬೇಡಿಕೆ ಹೆಚ್ಚಳ:ರಾಜ್ಯ ಸರ್ಕಾರವು 2016ರಲ್ಲಿ ‘ದಂತ ಭಾಗ್ಯ’ ಯೋಜನೆಯನ್ನು ಪ್ರಾರಂಭಿಸಿತ್ತು.ಸಂಪೂರ್ಣ ದಂತ ಪಂಕ್ತಿ ಕಳೆದುಕೊಂಡ, 60 ವರ್ಷ ಮೇಲ್ಪಟ್ಟ ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ನೆರವು ನೀಡಲಾಗುತ್ತಿತ್ತು. ಬಳಿಕ ಫಲಾನುಭವಿಗಳ ವಯೋಮಿತಿಯನ್ನು 55ಕ್ಕೆ ಇಳಿಸಲಾಗಿತ್ತು.

ಈಗ 45 ವರ್ಷಗಳು ಮೇಲ್ಪಟ್ಟವರಿಗೆ ದಂತ ಪಂಕ್ತಿ ಅಳವಡಿಸಲಾಗುತ್ತಿದೆ. ಸರ್ಕಾರಿಮತ್ತು ಖಾಸಗಿ ದಂತ ವೈದ್ಯಕೀಯ ಕಾಲೇಜುಗಳಿಗೆ ಯೋಜನೆಯ ಅನುಷ್ಠಾನದ ಜವಾಬ್ದಾರಿ ನೀಡಲಾಗಿದೆ.

ಯೋಜನೆ‍ಪ್ರಾರಂಭವಾದ ಮೊದಲ5 ವರ್ಷಗಳಲ್ಲಿ 16,755 ಮಂದಿಗೆ ದಂತ ಪಂಕ್ತಿಗಳನ್ನು ಅಳವಡಿಸಲಾಗಿತ್ತು. ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಳವಾಗಿತ್ತು.2020ರಲ್ಲಿ ಹೆಸರು ನೋಂದಾಯಿಸಿಕೊಂಡ ಬಹು ತೇಕರಿಗೆ ಕೋವಿಡ್‌ನಿಂದಾಗಿ ದಂತ ಪಂಕ್ತಿ ಅಳವಡಿಸಿರಲಿಲ್ಲ.

ಎರಡು ವರ್ಷಗಳ ಬಳಿಕ ದಂತ ಪಂಕ್ತಿ ಅಳವಡಿಸುತ್ತಿರುವುದರಿಂದ ಫಲಾನುಭವಿಗಳ ಸಂಖ್ಯೆ ಹೆಚ್ಚಳವಾಗಿದೆ.

‘ವಸಡಿನ ತೊಂದರೆ ಹಾಗೂ ದಂತಕ್ಷಯದಿಂದ ಬಹಳಷ್ಟು ಮಂದಿ ತಮ್ಮ ಹಲ್ಲುಗಳನ್ನು ಕಳೆದುಕೊಳ್ಳುತ್ತಾರೆ. ಕೃತಕ ದಂತ ಪಂಕ್ತಿ ಜೋಡಣೆಯಿಂದ ಆಹಾರವನ್ನು ಜಗಿದು ತಿನ್ನಲು ಸಾಧ್ಯವಾಗುತ್ತದೆ. ಆದ್ದರಿಂದ ದಂತ ಭಾಗ್ಯ ಯೋಜನೆಯಡಿ ದಂತ ಪಂಕ್ತಿ ಅಳವಡಿಸಲಾಗುತ್ತಿದೆ’ ಎಂದುಆರೋಗ್ಯ ಇಲಾಖೆಯ ಬಾಯಿ ಆರೋಗ್ಯದ ಉಪನಿರ್ದೇಶಕಡಾ. ಲೋಕೇಶ್ ಪಿ. ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT