ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5,8,9 ಹಾಗೂ 11 ನೇ ತರಗತಿಗಳ ಬೋರ್ಡ್ ಪರೀಕ್ಷೆ ರದ್ದಪಡಿಸಿದ ಹೈಕೋರ್ಟ್‌

Published 6 ಮಾರ್ಚ್ 2024, 8:21 IST
Last Updated 6 ಮಾರ್ಚ್ 2024, 8:21 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆ ಹಾಗೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯನ್ನು ಬೋರ್ಡ್‌ ಮೂಲಕ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

ಈ ಸಂಬಂಧದ ಅಧಿಸೂಚನೆ ಪ್ರಶ್ನಿಸಿ ‘ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಸಂಘ ಕರ್ನಾಟಕ’ (ರುಪ್ಸಾ) ಹಾಗೂ ‘ಅನುದಾನರಹಿತ ಮಾನ್ಯತೆ ಹೊಂದಿದ ಶಾಲೆಗಳ ಸಂಘಟನೆ’ (ಅವರ್‌ ಸ್ಕೂಲ್ಸ್‌) ಸಲ್ಲಿಸಿದ್ದ ಎರಡು ರಿಟ್‌ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ರವಿ ವಿ.ಹೊಸಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿದೆ.

‘ಕರ್ನಾಟಕ ಶಿಕ್ಷಣ ಕಾಯ್ದೆ–1983ರ ಕಲಂ​ 22ರ ಅನುಸಾರ ಪರೀಕ್ಷಾ ವ್ಯವಸ್ಥೆಯಲ್ಲಿ ಆಂತರಿಕ ಅಥವಾ ಬಾಹ್ಯ ಮೌಲ್ಯಮಾಪನ ಮಾಡಲು ನಿಯಮಗಳಿಗೆ ತಿದ್ದುಪಡಿ ಮಾಡಬೇಕು ಎಂದು ಹೇಳಲಾಗಿದೆ. ಅಲ್ಲದೆ, ಕಲಂ​ 145(4)ರ ಪ್ರಕಾರ ಯಾವುದೇ ನಿಯಮಗಳಲ್ಲಿ ಬದಲಾವಣೆ ತರಬೇಕಾದರೆ ಅದನ್ನು ಶಾಸನ ಸಭೆಯಲ್ಲಿ ಚರ್ಚಿಸಿದ ಬಳಿಕವೇ ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಲಾಗಿದೆ. ಆದರೆ, ಸರ್ಕಾರ ಬೋರ್ಡ್ ಪರೀಕ್ಷೆ ನಡೆಸುವುದಕ್ಕೆ ಈ ರೀತಿಯ ಯಾವುದೇ ನಿಯಮಕ್ಕೆ ತಿದ್ದುಪಡಿ ಮಾಡಿಲ್ಲ. ಆದ್ದರಿಂದ, ಬೋರ್ಡ್ ಪರೀಕ್ಷೆ ನಡೆಸಲು ಮುಂದಾಗಿರುವ ಕ್ರಮ ಶಿಕ್ಷಣ ಕಾಯ್ದೆಯ ‌ಕಲಂ​ 22ಕ್ಕೆ ತದ್ವಿರುದ್ಧವಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹೊಂದಿದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಾದಲ್ಲಿ ಯಾವುದೇ ಆಕ್ಷೇಪ ಇರಬಾರದು. ಅಧಿಸೂಚನೆಗೆ ಮುನ್ನ ಅಹವಾಲುಗಳನ್ನು ಆಲಿಸಿರಬೇಕು ಮತ್ತು ಕಡ್ಡಾಯವಾಗಿ ನಿಗದಿಪಡಿಸಿರುವ ಕಾರ್ಯವಿಧಾನದ ಮೂಲಕವೇ ಜಾರಿಗೆ ತರಬೇಕಾಗುತ್ತದೆ. ಹೀಗಾಗಿ, ಸರ್ಕಾರದ ಅಧಿಸೂಚನೆ ದೋಷಪೂರಿತವಾಗಿದೆ’ ಎಂದು ನ್ಯಾಯಪೀಠ ಹೇಳಿದೆ.

ಅರ್ಜಿದಾರರ ವಾದ ಪುರಸ್ಕೃತ:

‘ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಪರೀಕ್ಷೆಗೆ ಸಂಬಂಧಿಸಿದ ಕಲಂ 22ರ ಪ್ರಕಾರ, ಪರೀಕ್ಷಾ ಪದ್ದತಿಯಲ್ಲಿ ಬದಲಾವಣೆ ಮಾಡಬೇಕಾದರೆ, ಕಾಯ್ದೆಯ ಅನ್ವಯ ಮೊದಲು ನಿಯಮಗಳನ್ನು ರೂಪಿಸಬೇಕು. ಅದು ಶಾಸಕಾಂಗದಲ್ಲಿ ಅನುಮೋದನೆಗೊಂಡ ಬಳಿಕವಷ್ಟೇ ಅಂತಿಮಗೊಳಿಸಿ ಜಾರಿಗೆ ತರಬೇಕು. ಆದರೆ, ಈ ಪ್ರಕರಣದಲ್ಲಿ ಸರ್ಕಾರ ಅಂತಹ ವಿಧಾನವನ್ನು ಪಾಲಿಸಿಲ್ಲ’ ಎಂಬ ಅರ್ಜಿದಾರರ ವಾದವನ್ನು ನ್ಯಾಯಪೀಠ ಎತ್ತಿ ಹಿಡಿದಿದೆ.

‘ಶಾಲಾ ಪರೀಕ್ಷೆಗಳನ್ನು ಅಧಿಸೂಚನೆಯ ರೂಪದಲ್ಲಿ ಅನುಷ್ಠಾನಗೊಳಿಸುವುದು ತರವಲ್ಲ. ಇದು ನಿಯಮಗಳನ್ನು ಅನುಸರಿಸಿ ಕಾಯ್ದೆ ಪ್ರಕಾರ ನಡೆಸಬೇಕಾದ ಕಾನೂನುಬದ್ಧ ಪ್ರಕ್ರಿಯೆ. ಈ ವಿಚಾರದಲ್ಲಿ ಸರ್ಕಾರ ವಿವೇಚನಾಧಿಕಾರವನ್ನು ಬಳಸುವುದಕ್ಕೂ ಆಗದು. ಇಲ್ಲಿ ಸರ್ಕಾರ ಎಡವಿದೆ. ಕಡ್ಡಾಯ ನಿಯಮ‌ಗಳನ್ನು ಪಾಲನೆ ಮಾಡಿಲ್ಲ’ ಎಂಬ ಅರ್ಜಿದಾರರ ಆಕ್ಷೇಪವನ್ನು ಪುರಸ್ಕರಿಸಿದೆ.

ಸರ್ಕಾರದ ವಾದ: ‘ಉದ್ದೇಶಿತ ಬೋರ್ಡ್ ಪರೀಕ್ಷೆ ಅಥವಾ ಮೌಲ್ಯಮಾಪನವು ಪೂರ್ವಸಿದ್ಧತಾ ಸ್ವರೂಪದ್ದಾಗಿದ್ದು, 10 ಮತ್ತು 12ನೇ ತರಗತಿಗೆ ಎದುರಾಗುವ ಬೋರ್ಡ್ ಪರೀಕ್ಷೆಗೆ ಮಕ್ಕಳನ್ನು ಸನ್ನದ್ಧಗೊಳಿಸುವ ಉದ್ದೇಶ ಹೊಂದಿದೆ.  ಶಿಕ್ಷಣದ ಗುಣಮಟ್ಟದಲ್ಲಿ ಏಕರೂಪತೆ ತರುವ ಉದ್ದೇಶವೂ ಇದರಲ್ಲಿ ಅಡಕವಾಗಿದೆ. ಕಲಿಕಾ ಚೇತರಿಕೆ ಕೂಡಾ ಪಠ್ಯಕ್ರಮದ ಭಾಗವೇ ಆಗಿದೆ’ ಎಂದು ಸರ್ಕಾರ ವಿವರಿಸಿತ್ತು.

‘ಸಾಮಾನ್ಯ ಪಠ್ಯಕ್ರಮದಿಂದಲೇ ಕಲಿಕಾ ಚೇತರಿಕೆ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದೆ. ಮಕ್ಕಳ ಬುದ್ಧಿಮತ್ತೆಯನ್ನು ಸಕಾರಾತ್ಮಕವಾಗಿ ವೃದ್ಧಿಸುವ ದಿಸೆಯಲ್ಲಿಯೇ ಇದನ್ನು ರೂಪಿಸಲಾಗಿದೆ. ಪ್ರಶ್ನೆಪತ್ರಿಕೆಯಲ್ಲಿ ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳಿಲ್ಲ. ಹಾಗಾಗಿ, ಬೋರ್ಡ್ ಪರೀಕ್ಷೆಗೆ ಕಲಿಕಾ ಚೇತರಿಕೆ ಪಠ್ಯಕ್ರಮದಿಂದ ಪ್ರಶ್ನೆಗಳನ್ನು ಪಡೆದುಕೊಂಡಿರುವುದು ಸರಿಯಿದೆ. ಅದರಂತೆ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸಬೇಕು’ ಎಂದು ಕೋರಿತ್ತು.

‘ಆರ್‌ಟಿಇ ಕಾಯ್ದೆಯ ಕಲಂ 16ರಡಿ  5ರಿಂದ 8ನೇ ತರಗತಿವರೆಗೆ ಸಾಮಾನ್ಯ ವಾರ್ಷಿಕ ಪರೀಕ್ಷೆಯನ್ನು ಮಾತ್ರವೇ ನಡೆಸಬೇಕು ಎನ್ನುವುದು ಅರ್ಜಿದಾರರ ವಾದ. ಆದರೆ, ಅದು ಬೋರ್ಡ್ ಪರೀಕ್ಷೆಯನ್ನು ನಿರ್ಬಂಧಿಸುತ್ತದೆ ಎಂದು ಅರ್ಥವಲ್ಲ. ಕರ್ನಾಟಕ ಶಿಕ್ಷಣ ಕಾಯ್ದೆಯ ಕಲಂ 22ರಡಿ ನಿಯಮಗಳನ್ನು ರೂಪಿಸುವುದು ಕಡ್ಡಾಯವಲ್ಲ. ಯಾವ ಸಂದರ್ಭದಲ್ಲಿ ನಿಯಮಗಳನ್ನು ರೂಪಿಸಬೇಕು ಎಂಬ ವಿವೇಚನಾಧಿಕಾರವನ್ನು ಸರ್ಕಾರ ಹೊಂದಿದೆ’ ಎಂಬ ಸರ್ಕಾರದ ವಾದವನ್ನು ನ್ಯಾಯಪೀಠ ತಳ್ಳಿ ಹಾಕಿದೆ.

ಅರ್ಜಿದಾರರ ಪರ ಕೆ.ವಿ.ಧನಂಜಯ, ಎಸ್.ಸುದರ್ಶನ, ಅನಿರುದ್ಧ ವಿ.ಕುಲಕರ್ಣಿ ಹಾಗೂ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಿಕ್ರಂ ಹುಯಿಲಗೋಳ ಅವರು ವಾದ ಮಂಡಿಸಿದ್ದರು. 

ಎರಡು ಅಧಿಸೂಚನೆಗಳು

‘2023–24ನೇ ಸಾಲಿನಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ 589ನೇ ತರಗತಿಗಳ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ (ಎಸ್ಎ–2) ಮತ್ತು 11ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯನ್ನು ಬೋರ್ಡ್‌ ಮೂಲಕ ನಡೆಸಲಾಗುತ್ತದೆ’ ಎಂದು ರಾಜ್ಯ ಸರ್ಕಾರ 2023ರ ಅಕ್ಟೋಬರ್ 6 ಮತ್ತು 9ರಂದು ಎರಡು ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಿತ್ತು. ಅರ್ಜಿದಾರರು ಈ ಅಧಿಸೂಚನೆಗಳನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

****

ಹೊಸ ಪರೀಕ್ಷಾ ಯೋಜನೆಯನ್ನು ಕಾನೂನು ಬದ್ಧಗೊಳಿಸಲು ಕರ್ನಾಟಕ ಶಿಕ್ಷಣ ಕಾಯ್ದೆ–1983ರ ಕಲಂ 145ರ ಪಾಲನೆ ಕಡ್ಡಾಯ. ಈ ಪ್ರಕರಣದಲ್ಲಿನ ಅಧಿಸೂಚನೆಗಳು ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ಕಲಂ 30ಕ್ಕೆ ವಿರುದ್ಧವಾಗಿವೆ.

-ರವಿ ವಿ.ಹೊಸಮನಿ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT