ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರ ಸ್ಮಾರಕಗಳ ದತ್ತು ನೀಡಲು ಚಿಂತನೆ: ಸಚಿವ ಎಚ್.ಕೆ. ಪಾಟೀಲ

Published 7 ನವೆಂಬರ್ 2023, 8:14 IST
Last Updated 7 ನವೆಂಬರ್ 2023, 8:14 IST
ಅಕ್ಷರ ಗಾತ್ರ

ನಾಗಾವಿ (ಕಲಬುರಗಿ ಜಿಲ್ಲೆ): ರಾಜ್ಯದಲ್ಲಿ ಸುಮಾರು 5 ಸಾವಿರ ಅತ್ಯಂತ ಮಹತ್ವದ ಸ್ಮಾರಕಗಳಿದ್ದು, ಅದರಲ್ಲಿ ಒಂದು ಸಾವಿರ ಸ್ಮಾರಕಗಳನ್ನು ಅವುಗಳ ನಿರ್ವಹಣೆ ಮಾಡಲು ಆಸಕ್ತಿ ಇರುವವರಿಗೆ ದತ್ತು ನೀಡಲು ತೀರ್ಮಾನಿಸಲಾಗಿದೆ ಎಂದು ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಐತಿಹಾಸಿಕ ತಾಣ‌ ನಾಗಾವಿಯ ಘಟಿಕಾಸ್ಥಾನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು 834 ಸ್ಮಾರಕಗಳನ್ನು ಅಭಿವೃದ್ಧಿ ಮಾಡಲು ಉದ್ದೇಶಿಸಲಾಗಿದೆ. 300 ಸ್ಮಾರಕಗಳಿಗೆ ಬೇಲಿ ಹಾಕಲಾಗಿದೆ ಎಂದರು.

ನಾಗಾವಿಯು ಸಾವಿರಾರು ವರ್ಷಗಳ ಹಿಂದೆ ಪ್ರಮುಖ ವಿಶ್ವವಿದ್ಯಾಲಯವಾಗಿತ್ತು. ಇಲ್ಲಿ 400 ವಿದ್ಯಾರ್ಥಿಗಳು ಆಗಲೇ ಅಧ್ಯಯನ ಮಾಡುತ್ತಿದ್ದರು ಎಂದು ಕೇಳಿದ್ದೇನೆ. ಈ ಸ್ಮಾರಕವನ್ನು ಯುನೈಟೆಡ್‌ ವೇ ಬೆಂಗಳೂರು ಸಂಸ್ಥೆಗೆ ದತ್ತು ನೀಡಲಾಗುತ್ತಿದೆ. ಒಂದು ತಿಂಗಳಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್)ಯನ್ನು ತಯಾರಿಸಲು ಸೂಚಿಸಲಾಗಿದೆ. ಈ ಸಂಸ್ಥೆಗೆ 60 ಕಂಬಗಳ ದೇವಸ್ಥಾನ, ನಂದಿ ಬಾವಿ, ಮಲ್ಲಿಕಾರ್ಜುನ ದೇವಸ್ಥಾನ, ಮಲ್ಲಯ್ಯ ದೇವಸ್ಥಾನಗಳನ್ನು ದತ್ತು ನೀಡಲಾಗುತ್ತಿದೆ ಎಂದರು.

ಹೀಗೆ ದತ್ತು ಪಡೆಯುವವರಿಗೆ ಆದಾಯ ತೆರಿಗೆ ವಿನಾಯಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಇತ್ತೀಚೆಗೆ ಅಮೆರಿಕದಲ್ಲಿ ನೆಲೆಸಿರುವ 25 ಜನ ಭಾರತ ಮೂಲದ ಉದ್ಯಮಿಗಳೊಂದಿಗೆ ಆನ್ಲೈನ್ ಮೂಲಕ ಸಭೆ ನಡೆಸಿ ಸ್ಮಾರಕ ದತ್ತು ಯೋಜನೆ ಬಗ್ಗೆ ವಿವರಿಸಿದಾಗ ತಕ್ಷಣ 20 ಜನ ತಾವು ಸ್ಮಾರಕಗಳನ್ನು ದತ್ತು ಪಡೆಯುವುದಾಗಿ ಭರವಸೆ ನೀಡಿದರು ಎಂದರು.

ಪ್ರವಾಸಿ ಸರ್ಕ್ಯೂಟ್: ಕಲ್ಯಾಣ ಕರ್ನಾಟಕದ ಬೀದರ್, ಬಸವ ಕಲ್ಯಾಣ, ಕಲಬುರಗಿ, ಮಳಖೇಡ, ನಾಗಾವಿ, ಆಲಮಟ್ಟಿ, ಕೂಡಲಸಂಗಮ, ಬಾದಾಮಿ, ಐಹೊಳೆ, ಪಟ್ಟದಕಲ್ಲಿಗೆ ಭೇಟಿ ಮಾಡುವ ಮೂರು ದಿನಗಳ ಪ್ರವಾಸಿ ಸರ್ಕ್ಯೂಟ್ ಆರಂಭಿಸುವ ಚಿಂತನೆ ಇದೆ ಎಂದು ಪ್ರಕಟಿಸಿದರು.

ರಾಜ್ಯದ ಪ್ರಕಾರ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡಲು ಪ್ರವಾಸಿ ಗೈಡ್ ಗಳನ್ನು ನಿಯೋಜಿಸಲಾಗುವುದು ಎಂದರು.

ಸ್ಥಳೀಯ ಶಾಸಕರೂ ಆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಮತ್ತು ಐಟಿ, ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಐತಿಹಾಸಿಕ ನಾಗಾವಿ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಯನ್ನು ₹ 22 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ₹ 8 ಕೋಟಿ ಬಿಡುಗಡೆಯಾಗಿದೆ. ಕಲ್ಯಾಣ ‌ಕರ್ನಾಟಕದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ತನ್ನ ಅನುದಾನದ ಶೇ 2.5ರಷ್ಟು ವೆಚ್ಚ ಮಾಡಿದರೆ ಸಾಕಷ್ಟು ಅಭಿವೃದ್ಧಿಯಾಗಲಿದೆ ಎಂದರು.

ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಪ್ರಾಚ್ಯವಸ್ತು ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ನಿರ್ದೇಶಕ ದೇವರಾಜ, ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಬಿ, ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ, ಎಸ್ಪಿ ಅಡ್ಡೂರು ಶ್ರೀನಿವಾಸಲು, ಉಪವಿಭಾಗಾಧಿಕಾರಿ ಆಶಪ್ಪ ಪೂಜಾರಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT