ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಯೋನಿಕ್ಸ್‌: ವರ್ಗವಾದರೂ ಕದಲದ ಅಧಿಕಾರಿಗಳು!

Published 20 ನವೆಂಬರ್ 2023, 0:45 IST
Last Updated 20 ನವೆಂಬರ್ 2023, 0:45 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ವಿದ್ಯುನ್ಮಾನ ಅಭಿವೃದ್ಧಿ ನಿಗಮದ (ಕಿಯೋನಿಕ್ಸ್‌) ಕೇಂದ್ರ ಕಚೇರಿಯ ಆಯಕಟ್ಟಿನ ಸ್ಥಾನಗಳಲ್ಲಿರುವ ಮೂವರು ವ್ಯವಸ್ಥಾಪಕರು ವರ್ಗಾವಣೆ ಆದೇಶ ಹೊರಡಿಸಿ ಒಂಬತ್ತು ದಿನ ಕಳೆದರೂ ಹುದ್ದೆ ಬಿಟ್ಟು ಕದಲಿಲ್ಲ.

ಕಿಯೋನಿಕ್ಸ್‌ನ ವಾಣಿಜ್ಯ–1 ವಿಭಾಗದ ವ್ಯವಸ್ಥಾಪಕ ವಿಜಯದೇವ ಅವರನ್ನು ಹುಬ್ಬಳ್ಳಿ ಮಾಹಿತಿ ತಂತ್ರಜ್ಞಾನ (ಐ.ಟಿ) ಪಾರ್ಕ್‌ಗೆ ಹಾಗೂ ವಾಣಿಜ್ಯ, ಹಣಕಾಸು ಮತ್ತು ಲೆಕ್ಕಪತ್ರ ಶಾಖೆ, ಸೌಕರ್ಯ, ಮಾನವ ಸಂಪನ್ಮೂಲ ಮತ್ತು ಕಾನೂನು ವಿಭಾಗಗಳ ಜವಾಬ್ದಾರಿ ಹೊಂದಿದ್ದ ಮಾರುತಿ ಎಂ. ಅವರನ್ನು ಶಿವಮೊಗ್ಗ ಐ.ಟಿ ಪಾರ್ಕ್‌ಗೆ ವರ್ಗಾವಣೆ ಮಾಡಲಾಗಿತ್ತು.

ತಾಂತ್ರಿಕ ಶಿಕ್ಷಣ ಇಲಾಖೆಯಿಂದ ನಿಯೋಜನೆ ಮೇಲೆ ಕಿಯೋನಿಕ್ಸ್‌ನ ವಾಣಿಜ್ಯ–2 ವ್ಯವಸ್ಥಾಪಕರ ಹುದ್ದೆಯಲ್ಲಿ ದೀರ್ಘ ಕಾಲದಿಂದ ಇರುವ ಪಿ.ಎಸ್‌. ಪವಿತ್ರಾ ಅವರ ಸೇವೆಯನ್ನು ಮಾತೃ ಇಲಾಖೆಗೆ ಹಿಂದಿರುಗಿಸಲು ಆದೇಶ ಹೊರಡಿಸಲಾಗಿತ್ತು. ಮೂರೂ ಮಂದಿಯನ್ನು ವರ್ಗಾವಣೆಗೊಳಿಸಿ ನವೆಂಬರ್‌ 10ರಂದು ಆದೇಶ ಹೊರಡಿಸಲಾಗಿತ್ತು. ಎಲ್ಲರೂ ಹಾಲಿ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳಲ್ಲೇ ಮುಂದುವರಿದಿದ್ದಾರೆ.

ಬಿಕ್ಕಟ್ಟಿನಲ್ಲಿರುವ ನಿಗಮ:

ಟೆಂಡರ್‌ ಪ್ರಕ್ರಿಯೆ ಮತ್ತು ಬಿಲ್‌ ಪಾವತಿಯಲ್ಲಿ ನಿಯಮ ಉಲ್ಲಂಘನೆ ನಡೆದಿದೆ ಎಂದು ಅಕೌಂಟೆಂಟ್‌ ಜನರಲ್‌ ವರದಿ ನೀಡಿದ್ದರು. ಬಾಕಿ ಬಿಲ್‌ ಪಾವತಿಗೆ ಕಿಯೋನಿಕ್ಸ್‌ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಕಿಯೋನಿಕ್ಸ್‌ ವೆಂಡರ್‌ದಾರರ ವೆಲ್ಫೇರ್‌ ಅಸೋಸಿಯೇಷನ್‌ ಆರೋಪಿಸಿತ್ತು. ಇದರಿಂದಾಗಿ ನಿಗಮದಲ್ಲಿ ಅಧಿಕಾರಿಗಳು ಮತ್ತು ವೆಂಡರ್‌ದಾರರ ಮಧ್ಯೆ ಸಂಘರ್ಷದ ವಾತಾವರಣ ಸೃಷ್ಟಿಯಾಗಿತ್ತು.

ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಂಗಪ್ಪ ಅವರು ನವೆಂಬರ್‌ 7ರಿಂದ ಒಂದು ತಿಂಗಳ ಕಾಲ ರಜೆಯ ಮೇಲೆ ತೆರಳಿದ್ದಾರೆ. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆಎಸ್‌ಎಫ್‌ಸಿ) ವ್ಯವಸ್ಥಾಪಕ ನಿರ್ದೇಶಕ ಉಜ್ವಲ್‌ ಕುಮಾರ್‌ ಘೋಷ್‌ ಅವರಿಗೆ ಕಿಯೋನಿಕ್ಸ್‌ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯ ಪ್ರಭಾರವನ್ನು ವಹಿಸಲಾಗಿತ್ತು.

ನಿಗಮದಲ್ಲಿ ಟೆಂಡರ್‌ ಪ್ರಕ್ರಿಯೆ, ಖರೀದಿ ಮತ್ತು ಪೂರೈಕೆ ವಹಿವಾಟು ಸೇರಿದಂತೆ ಪ್ರಮುಖ ಕೆಲಸಗಳನ್ನು ನಿರ್ವಹಿಸುತ್ತಿರುವ ಮೂವರು ವ್ಯವಸ್ಥಾಪಕರನ್ನು ಕೇಂದ್ರ ಕಚೇರಿಯಿಂದ ಹೊರಕ್ಕೆ ವರ್ಗಾವಣೆ ಮಾಡುವಂತೆ ಕಿಯೋನಿಕ್ಸ್‌ ಅಧ್ಯಕ್ಷರೂ ಆಗಿರುವ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ನಿರ್ದೇಶನ ನೀಡಿದ್ದರು. ಬಳಿಕ ಮೂವರು ವ್ಯವಸ್ಥಾಪಕರನ್ನು ಸಂಸ್ಥೆಯ ಕೇಂದ್ರ ಕಚೇರಿಯಿಂದ ವರ್ಗಾವಣೆ ಮಾಡಿ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದರು.

‘ವರ್ಗಾವಣೆ ಆದೇಶದಲ್ಲಿ ಸ್ಪಷ್ಟತೆ ಇಲ್ಲ. ನಾವು ಯಾರಿಗೆ ಅಧಿಕಾರ ವಹಿಸಿಕೊಡಬೇಕು ಎಂಬ ಅಂಶ ಆದೇಶದಲ್ಲಿಲ್ಲ. ಈ ಕಾರಣದಿಂದ ಮೂವರೂ ಅದೇ ಹುದ್ದೆಗಳಲ್ಲಿ ಮುಂದುವರಿದಿದ್ದೇವೆ’ ಎಂದು ಮಾರುತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT