ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮಘಟ್ಟ ಪರಿಸರ ಸೂಕ್ಷ್ಮ: ಅಂತಿಮ ಅಧಿಸೂಚನೆ ಸದ್ಯಕ್ಕಿಲ್ಲ

ಕರಡು ಅಂತಿಮಗೊಳಿಸಲು 2024ರ ಜೂನ್‌ 30ರ ವರೆಗೆ ಕಾಲಾವಕಾಶ
Published 24 ಜುಲೈ 2023, 14:08 IST
Last Updated 24 ಜುಲೈ 2023, 14:08 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳ ಕರಡು ಅಧಿಸೂಚನೆಯನ್ನು ಅಂತಿಮಗೊಳಿಸಲು 2024ರ ಜೂನ್‌ 30ರವರೆಗೆ ಕಾಲಾವಕಾಶ ನೀಡಲಾಗಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವ ತನಕ ಅಂತಿಮ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಕಡಿಮೆ. 

ಕರ್ನಾಟಕ, ತಮಿಳುನಾಡು, ಕೇರಳ, ಗುಜರಾತ್‌, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ವ್ಯಾಪಿಸಿರುವ 56,825 ಚದರ ಕಿ.ಮೀ ವಿಸ್ತೀರ್ಣವನ್ನು  ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 2022ರ ಜುಲೈ 6ರಂದು ಐದನೇ ಬಾರಿ ಕರಡು ಅಧಿಸೂಚನೆ ಹೊರಡಿಸಿತ್ತು. ಪರಿಸರ ಸೂಕ್ಷ್ಮ ಪ್ರದೇಶ ಕಡಿಮೆ ಮಾಡಬೇಕು ಎಂದು ಕರ್ನಾಟಕ ಸೇರಿ ಉಳಿದ ರಾಜ್ಯಗಳು ಒತ್ತಾಯಿಸಿದ್ದವು. ರಾಜ್ಯ ಸರ್ಕಾರಗಳ ತಕರಾರಿನಿಂದಾಗಿ ಕರಡು ಅಧಿಸೂಚನೆಯನ್ನು ಅಂತಿಮಗೊಳಿಸಲು ಈವರೆಗೆ ಸಾಧ್ಯವಾಗಿಲ್ಲ. 

ರಾಜ್ಯಗಳ ಆಕ್ಷೇಪದ ಬಗ್ಗೆ ಪರಿಶೀಲನೆ ನಡೆಸಲು ಸಚಿವಾಲಯದ ನಿವೃತ್ತ ಮಹಾನಿರ್ದೇಶಕರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ಕಳೆದ ವರ್ಷ ಜುಲೈ ತಿಂಗಳಲ್ಲಿ ರಚಿಸಲಾಗಿತ್ತು. ರಾಜ್ಯಗಳಿಗೆ ಭೇಟಿ ನೀಡಿ ಸಮಾಲೋಚಿಸಿ ವರ್ಷದೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಈ ಸಮಿತಿಯು ಆರು ರಾಜ್ಯಗಳಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಹಾಗೂ ಪಶ್ಚಿಮಘಟ್ಟಗಳ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದೆ. ಈ ಸಮಿತಿ ಇನ್ನೂ ವರದಿ ಸಲ್ಲಿಸಿಲ್ಲ. ಹೀಗಾಗಿ, ಸಮಿತಿಯ ಅಧಿಕಾರದ ಅವಧಿಯನ್ನು 2024ರ ಮಾರ್ಚ್‌ 31ರ ವರೆಗೆ ವಿಸ್ತರಿಸಲಾಗಿದೆ. 

ಅಳಿವಿನ ಅಂಚಿನಲ್ಲಿರುವ ಅಪರೂಪದ ಸಸ್ಯ ಮತ್ತು ಪ್ರಾಣಿ ಸಂಕುಲ, ನದಿ ಮೂಲಗಳನ್ನು ಹೊಂದಿರುವ ಪಶ್ಚಿಮಘಟ್ಟದ ಕೆಲ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿದ ಬಳಿಕವಷ್ಟೇ ಈ ಪ್ರದೇಶಕ್ಕೆ ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ
ಮಾನ್ಯತೆ ದೊರಕಲಿದೆ. 

ಪಶ್ಚಿಮಘಟ್ಟದ ಜೀವ ವೈವಿಧ್ಯದ ಸಂರಕ್ಷಣೆಗೆ ಉದ್ದೇಶದಿಂದ ಹಿರಿಯ ವಿಜ್ಞಾನಿ ಮಾಧವ ಗಾಡ್ಗಿಳ್‌ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಈ ಹಿಂದೆ ಸಮಿತಿ ರಚಿಸಿತ್ತು. ಈ ಸಮಿತಿಯು 2011ರ  ಆಗಸ್ಟ್‌ 31ರಂದು ವರದಿ ಸಲ್ಲಿಸಿತ್ತು. ಪಶ್ಚಿಮಘಟ್ಟದ 1,29,037 ಚದರ ಕಿ.ಮೀ ವ್ಯಾಪ್ತಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಬಹುದು ಎಂದು ಶಿಫಾರಸು ಮಾಡಿತ್ತು. ಈ ವರದಿಗೆ ರಾಜಕೀಯ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಆ ಬಳಿಕ ಕೇಂದ್ರ ಸರ್ಕಾರವು ಡಾ.ಕೆ.ಕಸ್ತೂರಿ ರಂಗನ್‌ ಸಮಿತಿಯನ್ನು 2013ರಲ್ಲಿ ರಚಿಸಿತ್ತು. ಪಶ್ಚಿಮಘಟ್ಟದ ಶೇ 37ರಷ್ಟು ಅರಣ್ಯ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಬೇಕು ಎಂದು ಶಿಫಾರಸು ಮಾಡಿತ್ತು. ಈ ವರದಿಗೂ ರಾಜಕಾರಣಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT