ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಂಗಭದ್ರಾ ಜಲಾಶಯ: 2 ದಿನಗಳಲ್ಲಿ ಗೇಟ್‌ ಅಳವಡಿಕೆಗೆ ಚಾಲನೆ

Published : 13 ಆಗಸ್ಟ್ 2024, 13:21 IST
Last Updated : 13 ಆಗಸ್ಟ್ 2024, 13:21 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯಲ್ಲಿ ಕೊಚ್ಚಿ ಹೋಗಿರುವ 19ನೇ ತೂಬಿಗೆ ತಾತ್ಕಾಲಿಕ ಸ್ಟಾಪ್‌ ಲಾಗ್‌ ಗೇಟ್‌ ಅಳವಡಿಕೆ ಕಾರ್ಯ ಎರಡು ದಿನದಲ್ಲಿ ಆರಂಭವಾಗಲಿದೆ. ಅದಕ್ಕೆ ಮೊದಲಾಗಿ ಹರಿಯುತ್ತಿರುವ ನೀರಲ್ಲೇ ಗೇಟ್‌ನ ಒಂದು ಭಾಗವನ್ನು ಇಳಿಸುವ ಪ್ರಯೋಗ ನಡೆಯುವ ಸಾಧ್ಯತೆಯೂ ಇದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಅಣೆಕಟ್ಟೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಿರಿಯ ತಾಂತ್ರಿಕ ತಜ್ಞರು ಈ ಕುರಿತಂತೆ ವಿವರವಾದ ಮಾಹಿತಿಯನ್ನು ನೀಡಿದ್ದಾರೆ.

ಕೊಪ್ಪಳ ತಾಲ್ಲೂಕಿನ ಹೊಸಹಳ್ಳಿ, ಹೊಸಪೇಟೆಯ ಸಂಕ್ಲಾಪುರ ಮತ್ತು ತೋರಣಗಲ್‌ನ ಜಿಂದಾಲ್‌ ಕಂಪನಿಯ ಆವರಣದಲ್ಲಿ ಒಟ್ಟು ಎಂಟು ಗೇಟ್‌ ಭಾಗಗಳು ಸಿದ್ಧವಾಗುತ್ತಿವೆ. 4 ಅಡಿ (1.2 ಮೀಟರ್) ಎತ್ತರ ಮತ್ತು 60 ಅಡಿ ಅಗಲದ ಸುಮಾರು 16 ಮಿ.ಮೀ.ಗೇಜ್‌ನ ಕಬ್ಬಿಣದ ಎಲಿಮೆಂಟ್‌ ನಿಂದ ಈ ಬೃಹತ್‌ ಗೇಟ್‌ ನಿರ್ಮಿಸಲಾಗುತ್ತದೆ. ಇಂತಹ ಒಟ್ಟು 5 ಸೆಟ್‌ಗಳನ್ನು ಒಂದರ ಮೇಲೊಂದರಂತೆ ಜೋಡಿಸಿ ಗೇಟ್‌ ಕೂರಿಸಲಾಗುತ್ತದೆ. ಪ್ರತಿ ಹಂತದಲ್ಲೂ ಗೇಟುಗಳ ವಿನ್ಯಾಸ ತಜ್ಞ ಕನ್ನಯ್ಯ ನಾಯ್ಡು ಅವರ ಸಲಹೆ, ಸೂಚನೆಯಂತೆಯೇ ಕೆಲಸ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಲಾಗಿದೆ.

ನೀರಿನ ಮಟ್ಟ 1,625ಕ್ಕೆ (ನೀರಿನ ಸಂಗ್ರಹ 76.48 ಟಿಎಂಸಿ ಅಡಿ) ತಗ್ಗಿದ ಕೂಡಲೇ ಹರಿಯುತ್ತಿರುವ ನೀರಿನಲ್ಲೇ ಒಂದು ಎಲಿಮೆಂಟ್‌ ಸ್ಟಾಪ್‌ಲಾಗ್ ಗೇಟ್‌ ಅಳವಡಿಸುವ ಪ್ರಯತ್ನ ನಡೆಯಲಿದೆ. ಒಂದು ವೇಳೆ ಆ ಯತ್ನ ವಿಫಲವಾದರೆ ನೀರಿನ  ಮಟ್ಟವನ್ನು 1,621 ಅಡಿಗೆ (ನೀರಿನ ಸಂಗ್ರಹ 64.16 ಟಿಎಂಸಿ ಅಡಿ) ತಗ್ಗಿಸಿ ಗೇಟ್ ಅಳವಡಿಕೆ ನಡೆಯಲಿದೆ ಎಂದು ತಿಳಿಸಲಾಗಿದೆ.

‘ಅಣೆಕಟ್ಟೆಯ ನೀರಿನ ಮಟ್ಟವನ್ನು 1,621 ಅಡಿಗೆ ಇಳಿಸಿದಾಗಲೂ 64 ಟಿಎಂಸಿ ಅಡಿಯಷ್ಟು ನೀರು ಲಭ್ಯವಿರುತ್ತದೆ. ಮುಂದಿನ ದಿನಗಳಲ್ಲಿ ಸುರಿಯುವ ಮಳೆಯಿಂದ ಕನಿಷ್ಠ 90 ಟಿಎಂಸಿ ಅಡಿ ನೀರು ಸಂಗ್ರಹವಾಗುವ ವಿಶ್ವಾಸವನ್ನು ತಜ್ಞರು ಇಟ್ಟುಕೊಂಡಿದ್ದಾರೆ. ಹೀಗಾಗಿ ಮುಂಗಾರು ಹಂಗಾಮಿನ ಮೊದಲ ಬೆಳೆ ಬೆಳೆಯುವ ಸುಮಾರು 10 ಲಕ್ಷ ಎಕರೆ ಪ್ರದೇಶಕ್ಕೆ ಸಂಪೂರ್ಣ ನೀರು ಒದಗಿಸುವುದು ಸಾಧ್ಯವಾಗಲಿದೆ’ ಎಂಬ ಮಾಹಿತಿ ನೀಡಲಾಗಿದೆ.

ತುಂಗಭದ್ರಾ ಜಲಾಶಯ ಯೋಜನೆಯಡಿಯಲ್ಲಿ ರಾಜ್ಯದ 9.26 ಲಕ್ಷ ಎಕರೆ (2 ಬೆಳೆ ಸೇರಿ), ಆಂಧ್ರಪ್ರದೇಶದ 6.25 ಲಕ್ಷ ಎಕರೆ ಹಾಗೂ ತೆಲಂಗಾಣದ 87 ಸಾವಿರ ಎಕರೆ ನೀರಾವರಿಗೆ ಒಳಪಡುತ್ತದೆ.

20 ಟಿಎಂಸಿ ಅಡಿ ಖಾಲಿ: ತುಂಗಭದ್ರಾ ಜಲಾಶಯದಿಂದ ಮೂರು ದಿನದಲ್ಲಿ ಸುಮಾರು 20 ಟಿಎಂಸಿ ಅಡಿ ನೀರು ಖಾಲಿಯಾಗಿದ್ದು, ಆ.16ರ ವೇಳೆಗೆ 66.30 ಟಿಎಂಸಿ ಅಡಿಗೆ ಕುಸಿಯಲಿದೆ. ಆಗ ಗೇಟ್‌ ಅಳವಡಿಕೆ ಬಹುತೇಕ ಸರಾಗವಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT