ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಬೀದಿಗೆ ತಂದ ಕೋವಿಡ್‌: ಮನೆಗೆಲಸದವರಿಗೆ ಪರಿಹಾರ ಮರೀಚಿಕೆ

ನೋವಿನ ಕುಲುಮೆಯಲ್ಲಿ ನಿತ್ಯ ಬೇಯುವ ಕಾರ್ಮಿಕರು; ಆರ್ಥಿಕ ಸಂಕಷ್ಟದಿಂದ ದಿಕ್ಕೆಟ್ಟ ಕುಟುಂಬಗಳು
Last Updated 8 ಅಕ್ಟೋಬರ್ 2021, 20:11 IST
ಅಕ್ಷರ ಗಾತ್ರ

ಬೆಂಗಳೂರು: ಅವರಿವರ ಮನೆಯಲ್ಲಿ ಕಸ–ಮುಸುರೆ ಕೆಲಸ ಮಾಡಿ ತಮ್ಮ ಕುಟುಂಬಗಳನ್ನು ಸಲಹುತ್ತಿದ್ದ ಸಾವಿರಾರು ಗೃಹ ಕಾರ್ಮಿಕರ (ಮನೆಗೆಲಸದವರು) ಬದುಕು ಕೋವಿಡ್ ನಿಂದ ಸಂಕಷ್ಟಕ್ಕೆ ಸಿಲುಕಿ ಪತರಗುಟ್ಟಿಹೋಗಿದೆ. ತಮ್ಮಂತೆ ತಮ್ಮ ಮಕ್ಕಳ ಜೀವನ ಆಗಬಾರದು ಎಂದುಕೊಂಡಿದ್ದ ಈ ಮಹಿಳೆಯರಿಗೆ ಶಾಲಾ– ಕಾಲೇಜು ಶುಲ್ಕ ಕಟ್ಟುವುದಿರಲಿ, ಮಕ್ಕಳ ಬಸ್‌ಪಾಸ್‌ಗೆ ಹಣ ಹೊಂದಿಸುವುದೂ ಕಷ್ಟವಾಗಿದೆ.

ಕೋವಿಡ್‌ ಮೊದಲ ಮತ್ತು ಎರಡನೇ ಅಲೆಯಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಗೃಹಕಾರ್ಮಿಕರಿಗೆ ಸರ್ಕಾರ ಘೋಷಿಸಿರುವ ಒಂದು ಬಾರಿಯ ₹ 2 ಸಾವಿರ ಪರಿಹಾರ ಧನವೂ ಎಟುಕುತ್ತಿಲ್ಲ. ಕಷ್ಟವನ್ನೇ ನೆಂಚಿಕೊಂಡು ಎರಡೊತ್ತಿನ ಊಟಕ್ಕೂ ಪರದಾಡುವ ಬಹುತೇಕ ಮನೆಗೆಲಸದವರ ಬದುಕು ನಿತ್ಯ ನೋವಿನ ಕುಲುಮೆಯಲ್ಲಿ ಬೇಯುವಂಥ ಸ್ಥಿತಿಯಂತಾಗಿದೆ.

‘ಕೊರೊನಾ ಮೊದಲ ಅಲೆ ವೇಳೆಯಲ್ಲಿ ಸೊಸೈಟಿಯಲ್ಲಿ ಅಕ್ಕಿ ಸಿಕ್ಕಿದ್ದರಿಂದ ಹೇಗೋ ಜೀವನ ನಡೀತು. ಈಗಲೂಮನೆಬಾಡಿಗೆ, ಊಟಕ್ಕೆ ತುಂಬಾ ಕಷ್ಟವಾಗಿದೆ. ಗಂಡ ಆಟೋರಿಕ್ಷಾ ಡ್ರೈವರ್. ಅವರಿಗೂ ಆದಾಯವಿಲ್ಲ. ಗಾಡಿಯ ಸಾಲ ಇನ್ನೂ ತೀರಿಲ್ಲ. ಮುಂಚೆ ಎರಡು ಮನೆಯಿಂದ ₹ 10 ಸಾವಿರ ಸಿಗುತ್ತಿತ್ತು. ಈಗ ತಿಂಗಳಿಗೆ ₹ 5 ಸಾವಿರ ಸಿಗೋದೂ ಕಷ್ಟ. ಹಲವು ಮನೆಗಳಿಗೆ ಹೋಗಿ ಕೆಲಸ ಮಾಡುವುದರಿಂದ ಕೋವಿಡ್ ಭಯದಿಂದ ಇತರರು ಮನೆಗೆಲಸಕ್ಕೆ ಕರೆಯುತ್ತಿಲ್ಲ. ಕೆಲಸಕ್ಕೆ ಬರಬೇಡ ಅಂದಿದ್ದಾರೆ. ಹಾಗಾಗಿ, ನಮ್ಮ ಸಂಬಳಕ್ಕೆ ಹೊಡೆತ ಬಿದ್ದಿದೆ. ಎಸ್ಎಸ್ಎಲ್‌ಸಿ ಪಾಸಾಗಿರುವ ಮಗ ತನ್ನ ಸ್ನೇಹಿತರಂತೆ ಖಾಸಗಿ ಕಾಲೇಜಿಗೆ ಸೇರಬೇಕು ಅಂತಾನೆ. ನಮ್ಮ ಕಷ್ಟ ಅರ್ಥ ಮಾಡಿಕೊಳ್ಳುತ್ತಿಲ್ಲ...’ ಎಂದು ದುಃಖ ತೋಡಿಕೊಂಡರು ಬೆಂಗಳೂರಿನ ಲಗ್ಗೆರೆಯ ಪೂರ್ಣಿಮಾ.

‘ಮೊದಲು 8 ಮನೆಗಳಲ್ಲಿ ಕೆಲಸ ಮಾಡ್ತಾ ಇದ್ದೆ. ಈಗ 2 ಮನೆಗಳಲ್ಲಿ ಕೆಲಸ ಮಾಡ್ತಾ ಇದ್ದೀನಿ. ಕೆಲಸ ಮಾಡುತ್ತಿದ್ದ ಮನೆಗಳಲ್ಲಿ ಕೆಲವರಿಗೆ ಕೋವಿಡ್ ಬಂತು. ಮಕ್ಕಳಿರೋ ನೀನು ಕೆಲಸಕ್ಕೆ ಬರಬೇಡ ಅಂತ ಬಿಡಿಸಿದರು. ಮತ್ತೆ ಕೆಲಸಕ್ಕೆ ಕರೆಯಲೇ ಇಲ್ಲ. ಈಗ ಎರಡೂ ಮನೆಗಳಿಂದ ₹ 4,300 ಸಂಬಳ ಸಿಗುತ್ತೆ. ಮನೆ ಬಾಡಿಗೆಯೇ ಮೂರೂವರೆ ಸಾವಿರ ರೂಪಾಯಿ. ಸಂಘದ ಸಾಲ ಬೇರೆ. ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಮಗನಿಗೆ ಮೊಬೈಲ್ ಕೂಡಾ ಕೊಡಿಸಲು ಆಗಲಿಲ್ಲ ನಮ್ಮ ಕೈಲಿ’ ಎಂದರು ತುಮಕೂರಿನ ಮಾಲಾ.

‘ಮನೆಯಲ್ಲಿ ನಾನೊಬ್ಬಳೇ ದುಡಿಯುವವಳು. ಗಂಡ ತೀರಿಹೋಗಿದ್ದಾರೆ. ಮಕ್ಕಳಿನ್ನೂ ಓದುತ್ತಿದ್ದಾರೆ. ತಾಯಿಗೆ ವಯಸ್ಸಾಗಿದೆ. ಕೊರೊನಾ ಮೊದಲ ಅಲೆಯಲ್ಲಿ ಹೇಗೆ ದಿನ ಕಳೆದೆವು ಅನ್ನೋದು ಆ ದೇವರಿಗೇ ಗೊತ್ತು. ಹಾಲು ಕೊಳ್ಳಲೂ ₹ 10 ಕೈಲಿರಲಿಲ್ಲ. ಆಗ ರೇಷನ್ ಕಿಟ್ ಕೂಡಾ ಸಿಗಲಿಲ್ಲ. ಕೋವಿಡ್ ಬರುವ ಮುನ್ನ 5 ಮನೆಗಳಲ್ಲಿ ಕೆಲಸ ಮಾಡಿ ತಿಂಗಳಿಗೆ ₹ 8 ಸಾವಿರ ಗಳಿಸುತ್ತಿದ್ದೆ. ಕೋವಿಡ್ ಮುಗಿಯುವ ತನಕ ಕೆಲಸಕ್ಕೆ ಬರಬೇಡ ಅಂತ ಹೇಳಿದರು. ಕೆಲಸವಿಲ್ಲದೇ ಬೀದಿಯಲ್ಲಿ ಬಿದ್ದೆವು. ಸರ್ಕಾರದಿಂದ ಹಾಲು ಕೊಡ್ತಾರೆ ಅಂತ ಹೇಳಿದ್ದರು. ಆದರೆ, ಉಳ್ಳವರಿಗೇ ಕೊಟ್ಟರು. ಹಾಲಿಗಾಗಿ ಜಗಳ ಮಾಡಿದ್ದಕ್ಕೆ ಎರಡು ದಿನ ಕೊಟ್ಟರು. ಆದರೆ, ಮೂರನೇ ದಿನ ಮತ್ತೆ ಉಪವಾಸ. ಬರುವ ಅಲ್ಪಸಂಬಳದಲ್ಲಿ ಜೀವನ ನಡೆಸುವುದು ಕಷ್ಟ’ ಎಂದು ತಮ್ಮ ನೋವು ಬಿಚ್ಚಿಟ್ಟರು ದಾವಣಗೆರೆಯ ಮಮತಾ.

ಪರಿಶೀಲಿಸಿ ಹಣ ಬಿಡುಗಡೆ: ‘ಸಮೀಕ್ಷೆ ನಡೆಸಿರದ ಕಾರಣ, ರಾಜ್ಯದ ಒಟ್ಟು ಗೃಹ ಕಾರ್ಮಿಕರ ಸಂಖ್ಯೆಯ ಮಾಹಿತಿಯು ಲಭ್ಯವಿಲ್ಲ. ಸರ್ಕಾರದಿಂದ ನೀಡಲಾಗುವ ₹ 2 ಸಾವಿರ ನೆರವು ಕೋರಿ ಬಾಕಿ ಉಳಿದ ಅರ್ಜಿಗಳು ಪರಿಶೀಲನಾ ಹಂತದಲ್ಲಿದ್ದು, ಪರಿಶೀಲನೆ ಪೂರ್ಣಗೊಂಡ ಬಳಿಕ ಅರ್ಹರಿಗೆ ನೆರವಿನ ಮೊತ್ತವನ್ನು ಬಿಡುಗಡೆ ಮಾಡಲಾಗುವುದು’ ಎಂದು ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕೋರಿದ್ದು 4,90,111 ಮಂದಿ, ಸಿಕ್ಕಿದ್ದು 24,902 ಮಂದಿಗೆ

ಲಾಕ್‍ಡೌನ್‌ನಿಂದ ಅರ್ಥಿಕ ನಷ್ಟ ಅನುಭವಿಸಿದ್ದ ಗೃಹ ಕಾರ್ಮಿಕರಿಗೆ ಸರ್ಕಾರವು ಒಂದು ಬಾರಿ ₹ 2 ಸಾವಿರ ಪರಿಹಾರ ಧನ ಘೋಷಿಸಿತ್ತು. ಪರಿಹಾರಕ್ಕಾಗಿ 4,90,111 ಗೃಹಕಾರ್ಮಿಕರು ಅರ್ಜಿ ಸಲ್ಲಿಸಿದ್ದರು. ಇದುವರೆಗೆ 24,902 ಮಂದಿಗೆ ಮಾತ್ರ ಪರಿಹಾರ ಧನ ವಿತರಣೆಯಾಗಿದೆ. ಉಳಿದ 4,65,209 ಮಂದಿಗೆ ಇನ್ನೂ ವಿತರಣೆಯಾಗಿಲ್ಲ.

11 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಪರಿಹಾರ ಧನ ನೀಡಲು ಇನ್ನೂ ₹ 215.07 ಕೋಟಿಗಳ ಹೆಚ್ಚಿನ ಅನುದಾನ ಅವಶ್ಯಕತೆ ಇದೆ. ಈ ಅನುದಾನ ಬಿಡುಗಡೆಗಾಗಿ ಆರ್ಥಿಕ ಇಲಾಖೆಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕೆಂದು ಕೋರಿ ಕಾರ್ಮಿಕ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗೆ ಇದೇ ವರ್ಷ ಆಗಸ್ಟ್‌ 25 ರಂದು ಕಾರ್ಮಿಕ ಇಲಾಖೆಯ ಆಯುಕ್ತ ಅಕ್ರಂ ಪಾಷ ಪತ್ರ ಬರೆದಿದ್ದಾರೆ.

***

ಪರಿಹಾರ ಮರೀಚಿಕೆ

ಗೃಹ ಕಾರ್ಮಿಕರಿಗೆ ಸರ್ಕಾರವು ಘೋಷಿಸಿದ ₹ 2 ಸಾವಿರ ಪರಿಹಾರ ನಿಧಿಯು ಶೇ 95ರಷ್ಟು ಮಹಿಳೆಯರಿಗೆ ಮರೀಚಿಕೆಯಾಗಿದೆ. ದಿನಬಳಕೆಯ ಅಗತ್ಯ ವಸ್ತುಗಳ ಬೆಲೆಯೇರಿಕೆ ಹಿನ್ನೆಲೆಯಲ್ಲಿ ಸರ್ಕಾರ ಈ ಕೂಡಲೇ ಪರಿಹಾರ ಹಣವನ್ನು ಬಿಡುಗಡೆ ಮಾಡಬೇಕು ಹಾಗೂ ಬಡತನದಲ್ಲಿರುವ ಈ ಕುಟುಂಬಗಳಿಗೆ ಆರೋಗ್ಯದ ಸೌಲಭ್ಯ, ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು–

-ಶೋಭಾ ಎಸ್, ಕಾರ್ಯದರ್ಶಿ ಎಐಎಂಎಸ್ಎಸ್, ಗೃಹ ಕಾರ್ಮಿಕರ ಹಕ್ಕುಗಳ ಹೋರಾಟಗಾರ್ತಿ

***

ಮಗನ ಬಸ್‌ಪಾಸ್‌ಗೂ ಕಾಸಿಲ್ಲ

‘ಸದ್ಯಕ್ಕೆ ಒಂದೇ ಮನೆಯಲ್ಲಿ ಕೆಲಸ ಮಾಡ್ತೀದ್ದೀನಿ. ಗಂಡನಿಗೂ ಕೆಲಸವಿಲ್ಲ. ಮಗನನ್ನು ಓದಿಸಲು ಆಗುತ್ತಿಲ್ಲ. ಬೆಂಗಳೂರಿನಲ್ಲಿ ಖರ್ಚು ಹೆಚ್ಚು, ಬಸ್ ಪಾಸ್ ಮಾಡಿಸೋಕೂ ಆಗ್ತಿಲ್ಲ. ಹಾಗಾಗಿ, ಮಗನನ್ನು ತಾಯಿ ಮನೆ ಚನ್ನಪಟ್ಟಣಕ್ಕೆ ಕಳಿಸಿದ್ದೀನಿ’ ಎಂದರು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಶಾರದಾ.

ಸೊಸೈಟಿ ಅಕ್ಕಿಯೇ ಜೀವನಾಧಾರ

‘ಕೋವಿಡ್ ಬರುವ ಮುನ್ನ 4 ಮನೆಗಳಿಗೆ ಕೆಲಸ ಮಾಡುತ್ತಿದ್ದೆ. ಬೇರೆ ಮನೆಗಳಲ್ಲಿ ಕೆಲಸ ಮಾಡಿ ಬರ್ತೀರಿ. ಬೇಡ ಅಂತ ಹೇಳಿ ಕೆಲಸ ಬಿಡಿಸಿದ್ರು. ಈಗ ಒಂದೇ ಮನೆಗೆ ಹೋಗಿ ಬಾಗಿಲಿಗೆ ನೀರು ಹಾಕಿ ಬರ್ತೀನಿ. ಒಳಗಿನ ಕೆಲಸವಿಲ್ಲ. ತಿಂಗಳಿಗೆ ₹ 1 ಸಾವಿರ ಕೊಡ್ತಾರೆ. ಸೊಸೈಟಿಯಲ್ಲಿ ಅಕ್ಕಿ ಕೊಡ್ತಾರೆ ಹೆಂಗೋ ಜೀವನ ನಡೆಸ್ತಾ ಇದ್ದೀನಿ. ಪರಿಹಾರ ಧನ ಕೋರಿ ಅರ್ಜಿ ಹಾಕಿ 2 ತಿಂಗಳಾಗಿದೆ ಇನ್ನೂ ಪರಿಹಾರ ಬಂದಿಲ್ಲ’ ಎಂದು ಅಳಲು ತೋಡಿಕೊಂಡರು ಬೆಂಗಳೂರಿನ ಮುತ್ಯಾಲನಗರದ ರತ್ನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT