ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ ಫಲಿತಾಂಶ; ಕನ್ನಡಿಗರ ಸಾಧನೆ

Published 16 ಏಪ್ರಿಲ್ 2024, 20:07 IST
Last Updated 16 ಏಪ್ರಿಲ್ 2024, 20:07 IST
ಅಕ್ಷರ ಗಾತ್ರ

ಬೆಂಗಳೂರು: ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಲಭ್ಯವಿರುವ ಮಾಹಿತಿ ಪ್ರಕಾರ ಕರ್ನಾಟಕದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಯಶಸ್ಸು ಸಾಧಿಸಿದ್ದಾರೆ.

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಬಿಎಸ್‌ಸಿ ಅಗ್ರಿ ವಿದ್ಯಾರ್ಥಿನಿ ದಾವಣಗೆರೆಯ ಸೌಭಾಗ್ಯ ಬೀಳಗಿಮಠ 101ನೇ ರ್‍ಯಾಂಕ್‌ ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್‌ ಆಗಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ತಿಮ್ಮನಾಯಕನಹಳ್ಳಿಯ ನಾಗೇಂದ್ರಬಾಬು ಕುಮಾರ್ 160ನೇ ರ‍್ಯಾಂಕ್ ಗಳಿಸಿದ್ದಾರೆ. ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲ್ಲೂಕಿನ ಜಾಲವಾದದವರಾದ ವಿಜೇತಾ ಬಿ ಹೊಸಮನಿ 200ನೇ ರ‍್ಯಾಂಕ್‌ ಪಡೆದಿದ್ದಾರೆ.

2022–23ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆ ಎದುರಿಸಿದ್ದ ಶಿವಮೊಗ್ಗದ ಮೇಘನಾ ಪ್ರಸ್ತುತ ಐಪಿಎಸ್‌ ಹುದ್ದೆ ಲಭಿಸಿದ್ದು, ಮಹಾರಾಷ್ಟ್ರ ಕೇಡರ್‌ನ ಅಧಿಕಾರಿಯಾಗಿ ತರಬೇತಿಯಲ್ಲಿ ಇದ್ದಾರೆ. ಅವರಿಗೆ ಈ ಬಾರಿ 589ನೇ ರ‍್ಯಾಂಕ್ ಲಭಿಸಿದೆ. ಪ್ರಜಾವಾಣಿ ವತಿಯಿಂದ 2019ರಲ್ಲಿ ನೀಡಿದ್ದ ‘ಯುವ ಸಾಧಕ’ ಪ್ರಶಸ್ತಿ ಮತ್ತು ಡೆಕ್ಕನ್‍ ಹೆರಾಲ್ಡ್ ವತಿಯಿಂದ 2022ರಲ್ಲಿ ನೀಡಿದ್ದ ‘ಚೇಂಜ್‍ಮೇಕರ್’ ಪ್ರಶಸ್ತಿಗೆ ಶಾಂತಪ್ಪ ಪಾತ್ರರಾಗಿದ್ದ ಪಿಎಸ್‌ಐ ಶಾಂತಪ್ಪ ಅವರಿಗೆ 644ನೇ ರ್‍ಯಾಂಕ್‌ ಲಭಿಸಿದೆ.

ರ್‍ಯಾಂಕ್ ಸಂಖ್ಯೆ–101

ಹೆಸರು: ಸೌಭಾಗ್ಯ ಬೀಳಗಿಮಠ

ವಿದ್ಯಾರ್ಹತೆ: ಬಿ.ಎಸ್‌ಸಿ (ಅಗ್ರಿ)

ಊರು: ದಾವಣಗೆರೆ

ಸೌಭಾಗ್ಯ ಅವರು ದಾವಣಗೆರೆಯವರು. ಶರಣಯ್ಯ ಸ್ವಾಮಿ ಮತ್ತು ಶರಣಮ್ಮ ದಂಪತಿಯ ಪುತ್ರಿ. ಶರಣಯ್ಯ ಅವರು ನರ್ಸರಿ ನಡೆಸುತ್ತಿದ್ದಾರೆ, ಶರಣಮ್ಮ ಅವರು ಗೃಹಿಣಿ.

ಅಭ್ಯರ್ಥಿಯ ಅಭಿಪ್ರಾಯ:  

ಬದುಕಿನಲ್ಲಿ ದೊಡ್ಡ ಗುರಿ ಇಟ್ಟುಕೊಂಡು ಅದನ್ನು ಸಾಧಿಸಬೇಕು ಎಂದು ನಮ್ಮ ತಂದೆ ಸದಾ ಹೇಳುತ್ತಿದ್ದರು. ಎರಡನೇ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿದೆ. ಯಾವುದೇ ಕೇಂದ್ರದಲ್ಲಿ ಕೋಚಿಂಗ್‌ ಪಡೆದಿರಲಿಲ್ಲ. ಆನ್‌ಲೈನ್‌ನಲ್ಲಿ ಅಣಕು ಪರೀಕ್ಷೆ ಸರಣಿಯಲ್ಲಿ ಭಾಗಿಯಾಗಿದ್ದೆ ಅಷ್ಟೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಬೋಧಕಿ ಅಶ್ವಿನಿ ಎಂ.ಅವರು ನನ್ನನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ಪರೀಕ್ಷೆಗೆ ಸಿದ್ಧತೆ ನಡೆಸಲು ಪ್ರೋತ್ಸಾಹ ನೀಡಿದರು. ಪರೀಕ್ಷೆ ತಯಾರಿಗೆ ಅವರೇ ಎಲ್ಲ ರೀತಿಯ ಮಾರ್ಗದರ್ಶನ ನೀಡಿದರು. 

----------

ರ್‍ಯಾಂಕ್ ಸಂಖ್ಯೆ–160

ಹೆಸರು: ನಾಗೇಂದ್ರ ಬಾಬು ಕುಮಾರ್‌

ವಿದ್ಯಾರ್ಹತೆ: ಬಿ.ಇ

ಊರು: ತಿಮ್ಮನಾಯಕನಹಳ್ಳಿ, ಮುಳಬಾಗಿಲು, ಕೋಲಾರ ಜಿಲ್ಲೆ

ತಂದೆ ಟಿ.ಎನ್‌.ನಾರಾಯಣಪ್ಪ ಹಾಗೂ ತಾಯಿ ಸುನಂದಮ್ಮ ಕೃಷಿಕರು. ನಾರಾಯಣಪ್ಪ ಮುಳಬಾಗಿಲಿನಲ್ಲಿ ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಅಭ್ಯರ್ಥಿಯ ಅಭಿಪ್ರಾಯ:

ಏಳನೇ ಪ್ರಯತ್ನದಲ್ಲಿ ನನಗೆ ಯಶಸ್ಸು ಸಿಕ್ಕಿದೆ. ಎಂಟನೇ ತರಗತಿಯಲ್ಲಿ ಓದಬೇಕಾದರೆ ಯುಪಿಎಸ್‌ಸಿ ಪರೀಕ್ಷೆ ಬರೆಯುವ ಆಸಕ್ತಿ ಮೂಡಿತ್ತು. ಈಗ ಆ ಕನಸು ನನಸಾಗಿದೆ. ನನ್ನ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಕೋಲಾರ ಜಿಲ್ಲಾಧಿಕಾರಿಯಾಗಿದ್ದ ಮನೋಜ್‌ ಕುಮಾರ್‌ ಮೀನಾ, ದಿವಂಗತ ಡಿ.ಕೆ.ರವಿ ಹಾಗೂ ಪೋಷಕರು ನನಗೆ ಸ್ಫೂರ್ತಿ. ಐಎಎಸ್‌ ಅಧಿಕಾರಿ ಆಗಬೇಕೆಂದುಕೊಂಡಿದ್ದೇನೆ.

–––––––––––

ವಿಜೇತರ ಹೆಸರು: ವಿಜೇತಾ ಬಿ. ಹೊಸಮನಿ
ರ‍್ಯಾಂಕ್ ಸಂಖ್ಯೆ: 200
ವಿದ್ಯಾರ್ಹತೆ: ಬಿಎ, ಎಲ್.ಎಲ್.ಬಿ
ಸ್ವಂತ ಊರು: ಜಾಲವಾದ, ದೇವರಹಿಪ್ಪರಗಿ ತಾಲ್ಲೂಕು, ವಿಜಯಪುರ ಜಿಲ್ಲೆ
ಸದ್ಯ ನೆಲೆಸಿರುವ ಊರು: ಹುಬ್ಬಳ್ಳಿ (ಗೋಕುಲ)

ವಿಜೇತಾ ಅವರ ತಂದೆ ಭೀಮಸೇನ ಹೊಸಮನಿ ಹಾಗೂ ತಾಯಿ ಶಶಿಕಲಾ ನಾರಾಯಣರಾವ್ ಮುಳಗುಂದ ಅವರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‍ ನಿವೃತ್ತ ಉದ್ಯೋಗಿಗಳು. 

ಅಭ್ಯರ್ಥಿಯ ಅಭಿಪ್ರಾಯ:

2019ರಿಂದ ಆನ್‍ಲೈನ್ ತರಬೇತಿ ಹಾಗೂ ದಿನಕ್ಕೆ 6 ರಿಂದ 8 ಗಂಟೆಗಳ ಕಾಲ ಸತತ ಅಧ್ಯಯನ ಹಾಗೂ ದೈನಂದಿನ ವಿಷಯಗಳಿಗಾಗಿ ‘ಪ್ರಜಾವಾಣಿ’ ಪತ್ರಿಕೆಯನ್ನು ಓದುತ್ತಿದ್ದೆ. 2022ರಲ್ಲಿ ಯುಪಿಎಸ್ಸಿಯಲ್ಲಿ ರಾಷ್ಟ್ರಕ್ಕೆ 14ನೇ ರ‍್ಯಾಂಕ್‌ ಪಡೆದ ಕಾರ್ತಿಕಾ ಗೋಯೆಲ್ ಸಾಧನೆಯಿಂದ ಸ್ಫೂರ್ತಿಗೊಂಡು, 2023ರಲ್ಲಿ ಗುರಿ ತಲುಪಿದ್ದೇನೆ

.........

ರ‍್ಯಾಂಕ್‌ ಸಂಖ್ಯೆ;440

ಹೆಸರು;ಕೃಪಾ ಜೈನ್‌

ವಿದ್ಯಾರ್ಹತೆ;ಬಿ.ಇ(ಕಂಪ್ಯೂಟರ್‌ ಸೈನ್ಸ್‌)

ಊರು;ಹುಬ್ಬಳ್ಳಿ

ತಂದೆ ಅಭಯ ಪಾರ್ಲೆಚಾ ಹೋಲ್‌ಸೆಲ್‌ ವ್ಯಾಪಾರಸ್ಥರು, ತಾಯಿ ಗೃಹಿಣಿ. ಕೃಪಾ ಜೈನ್‌ ಅವರು ಪ್ರಾಥಮಿಕ ಹಂತದಿಂದ ದ್ವಿತೀಯ ಪಿಯುವರೆಗೆ ಹುಬ್ಬಳ್ಳಿಯಲ್ಲಿ ಶಿಕ್ಷಣ ಪಡೆದರು. ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ರ‍್ಯಾಂಕ್‌ ಪಡೆದಿದ್ದರು.

ಅಭ್ಯರ್ಥಿ ಅಭಿಪ್ರಾಯ;

‘ಸಮುದಾಯ ಸೇವೆ ಮಾಡುವುದು ಹಾಗೂ ಜನರ ಜೀವನವನ್ನು ಸುಧಾರಿಸಬೇಕೆಂಬ ಆಸೆಯಿಂದ ಯುಪಿಎಸ್ಸಿ ಆಯ್ಕೆ ಮಾಡಿಕೊಂಡೆ. ರಿಸ್ಕ್‌ ತೆಗೆದುಕೊಂಡು ಒಳ್ಳೆಯ ಕೆಲಸ ಮಾಡಲು ಇಲ್ಲಿ ಅವಕಾಶವಿದೆ. ಇದು ನನ್ನ ಮೂರನೇ ಪ್ರಯತ್ನ. ಎರಡನೇ ಪ್ರಯತ್ನದಲ್ಲಿ ಇಂಡಿಯನ್‌ ರೈಲ್ವೆ ಮ್ಯಾನೇಜ್‌ಮೆಂಟ್‌ ಸರ್ವೀಸ್‌ನಲ್ಲಿ ಹುದ್ದೆ ಸಿಕ್ಕಿತ್ತು. ಐ.ಎ.ಎಸ್‌. ಮಾಡಲೇಬೇಕೆಂಬ ಆಸೆ ಇದೆ. ಈ ಸಲ ಐ.ಎ.ಎಸ್‌ ಸಿಗದಿದ್ದರೆ ಮತ್ತೊಮ್ಮೆ ಯುಪಿಎಸ್ಸಿ ಪರೀಕ್ಷೆ ಬರೆಯುವೆ’

–––––––––

ರ್‍ಯಾಂಕ್ ಸಂಖ್ಯೆ–459

ಹೆಸರು: ಶಶಾಂತ್ ಎನ್.ಎಂ.

‌ವಿದ್ಯಾರ್ಹತೆ: ಬಿಎಸ್ಸಿ

ಊರು: ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ನಲ್ಲೂರು ಗ್ರಾಮ

ಎನ್.ಮಂಜುನಾಥ್ ಕೃಷಿಕರಾಗಿದ್ದು, ಏಳು ಎಕರೆ ಜಮೀನಿದೆ. ತಾಯಿ ಚಂದ್ರಮ್ಮ ಗೃಹಿಣಿ. ಪದವಿ ವಿದ್ಯಾಭ್ಯಾಸವನ್ನು ಮೈಸೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪಡೆದರು.

ಅಭ್ಯರ್ಥಿಯ ಅಭಿಪ್ರಾಯ:

ಕಠಿಣ ಪರಿಶ್ರಮದಿಂದ ಮೂರನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದೇನೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ 83, ದ್ವಿತೀಯ ಪಿಯುಸಿಯಲ್ಲಿ ಶೇ 91 ಅಂಕ ಪಡೆದಿದ್ದು, ಬಿಎಸ್ಸಿ (ಸಿಬಿಝೆಡ್) ನಂತರ ಬೆಂಗಳೂರಿನ ಇಂಡಿಯಾ 4 ಐಎಎಸ್‌ನಲ್ಲಿ ತರಬೇತಿ ಪಡೆದೆ. ಮಾನವಶಾಸ್ತ್ರವನ್ನು ಮುಖ್ಯ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡು ಪಡೆದ ಫಲಿತಾಂಶ ತೃಪ್ತಿ ತಂದಿದೆ. ಐಪಿಎಸ್ ಆಗುವ ನನ್ನ ಕನಸಿಗೆ ಫಲಿತಾಂಶ ಸಾಕ್ಷಿಯಾಗಿದ್ದು, ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ

-------

ಶಶಾಂತ್ ಎನ್.ಎಂ.
ಶಶಾಂತ್ ಎನ್.ಎಂ.
ನಾಗೇಂದ್ರ ಬಾಬು ಕುಮಾರ್‌
ನಾಗೇಂದ್ರ ಬಾಬು ಕುಮಾರ್‌
ಕೃಪಾ ಜೈನ್‌
ಕೃಪಾ ಜೈನ್‌
ಸೌಭಾಗ್ಯ

ಸೌಭಾಗ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT