ನವದೆಹಲಿ: ಬೆಂಗಳೂರಿನಲ್ಲಿ ಅಮೆರಿಕ ರಾಯಭಾರಿ ಕಚೇರಿಯನ್ನು ಆದ್ಯತೆ ಮೇರೆಗೆ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭಾರತದಲ್ಲಿನ ಅಮೆರಿಕ ಸಂಯುಕ್ತ ಸಂಸ್ಥಾನಗಳ ರಾಯಭಾರಿ ಎರಿಕ್ ಗಾರ್ಸೆಟಿ ಅವರು ಗ್ರಾಮೀಣಾಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಭರವಸೆ ನೀಡಿದ್ದಾರೆ.
ಗುರುವಾರ ಇಲ್ಲಿ ಗಾರ್ಸೆಟಿ ಅವರನ್ನು ಭೇಟಿ ಮಾಡಿದ ಪ್ರಿಯಾಂಕ್ ಬೆಂಗಳೂರಿನಲ್ಲಿ ರಾಯಭಾರಿ ಕಚೇರಿ ಆರಂಭ, ರಾಜ್ಯದಲ್ಲಿ ಬಂಡವಾಳ ಹೂಡಿಕೆ, ತಂತ್ರಜ್ಞಾನ ವಿನಿಮಯ ಸೇರಿದಂತೆ ಕೆಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
‘ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆಯಿಂದ ಅಮೆರಿಕಕ್ಕೆ ಪಯಣ ಬೆಳೆಸುವವರು ಈಗ ಚೆನ್ನೈಗೆ ಹೋಗಬೇಕಿದೆ. ರಾಯಭಾರಿ ಕಚೇರಿ ತೆರೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಮನವಿ ಸಲ್ಲಿಸಿದ್ದಾರೆ’ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
‘ಅಮೆರಿಕದಲ್ಲಿ ಅಧ್ಯಕ್ಷರ ಚುನಾವಣೆಯ ಪ್ರಕ್ರಿಯೆ ನಡೆಯುತ್ತಿದೆ. ಚುನಾವಣೆ ಮುಗಿದ ಕೂಡಲೇ ಆದ್ಯತೆಯ ಮೇರೆಗೆ ಬೆಂಗಳೂರಿನಲ್ಲಿ ರಾಯಭಾರ ಕಚೇರಿ ಆರಂಭಿಸಲಾಗುವುದು’ ಎಂದು ಗಾರ್ಸೆಟಿ ಭರವಸೆ ನೀಡಿದರು.
ಕನ್ನಡಿಗರ ಬಹು ದಿನಗಳ ಕನಸು ಶೀಘ್ರದಲ್ಲೇ ಸಾಕಾರಗೊಳ್ಳಲಿದೆ ಎಂದು ಸಚಿವ ಪ್ರಿಯಾಂಕ್ ತಿಳಿಸಿದರು.