ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲ್ಮೀಕಿ ನಿಗಮ ಹಗರಣ: ಸಚಿವ ನಾಗೇಂದ್ರ ವಜಾಕ್ಕೆ ಬಿಜೆಪಿ ಗಡುವು

Published 30 ಮೇ 2024, 8:24 IST
Last Updated 30 ಮೇ 2024, 8:24 IST
ಅಕ್ಷರ ಗಾತ್ರ

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ  ₹187 ಕೋಟಿ ಹಣ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ವಜಾ ಮಾಡಲು ಜೂನ್‌ 6ರವರೆಗೆ ಗಡುವು ನೀಡಿರುವ ಬಿಜೆಪಿ, ಅವರಿಂದ ರಾಜೀನಾಮೆ ಪಡೆಯದೇ ಇದ್ದರೆ ರಾಜ್ಯ ವ್ಯಾಪಿ ಉಗ್ರ ಹೋರಾಟ ಮಾಡುವುದಾಗಿ ಬಿಜೆಪಿ ಹೇಳಿದೆ.

ಪಕ್ಷದ ಕಚೇರಿಯಲ್ಲಿ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರೋಧಪಕ್ಷದ ನಾಯಕ ಆರ್‌.ಅಶೋಕ ಅವರು, ಈ ಪ್ರಕರಣವನ್ನು ತಾರ್ಕಿಕ ಅಂತ್ಯ ಮುಟ್ಟಿಸದೇ ವಿರಮಿಸುವುದಿಲ್ಲ ಎಂದು ಹೇಳಿದರು.

ದಲಿತ ವರ್ಗದವರಿಗೆ ಸೇರಿದ ಹಣವನ್ನು ಈ ಸರ್ಕಾರ ಲೂಟಿ ಮಾಡಿದೆ. ಈ ಹಣವನ್ನು ಆಂಧ್ರ, ತೆಲಂಗಾಣ ಮುಂತಾದ ಕಡೆಗಳಲ್ಲಿ ಡ್ರಾ ಮಾಡಿಕೊಳ್ಳಲಾಗಿದೆ. ಇವೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ಬರದೇ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಮೃತ ಚಂದ್ರಶೇಖರನ್ ಅವರ ಮರಣ ಪತ್ರದಲ್ಲಿ ಎನ್‌.ನಾಗರಾಜ್ ಅವರ ಉಲ್ಲೇಖವಿದೆ. ಈತನ ಜತೆ ಸಚಿವ ನಾಗೇಂದ್ರ ಅವರ ವ್ಯವಹಾರ ಪಾಲುದಾರಿಕೆ ಇದೆ. ಅಲ್ಲದೇ ಡಿ.ಕೆ.ಶಿವಕುಮಾರ್ ಅವರ ಪರಮಾಪ್ತ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಆಪ್ತ. ಈ ಬಗ್ಗೆಯೂ ತನಿಖೆ ನಡೆಯಬೇಕಿದೆ. ರಾಜಕೀಯ ಬೆಂಬಲವಿಲ್ಲದೇ ₹187 ಕೋಟಿಯನ್ನು ಬೇನಾಮಿ ಖಾತೆಗಳಿಗೆ ವರ್ಗಾವಣೆ ಮಾಡಲು ಸಾಧ್ಯವೇ. ಸಚಿವರ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಿಲ್ಲ ಎಂದರೆ ಸರ್ಕಾರದ ಪಾತ್ರ ಇದೆ ಎಂದೇ ಅರ್ಥ ಎಂದು ಹೇಳಿದರು.

ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ರಾಜ್ಯ ಸರ್ಕಾರದ ಅಧಿಕಾರಿಗಳು ಈಗ ಬ್ಯಾಂಕ್ ಅಧಿಕಾರಿಗಳ ಮೇಲೆ ಆರೋಪ ಹೊರಿಸಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಸರ್ಕಾರದ ಹಣವನ್ನು ಬೇಕಾಬಿಟ್ಟಿ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಆರ್‌ಬಿಐನಲ್ಲಿ ವಿಜಿಲೆನ್ಸ್‌ ವಿಭಾಗ ಇದೆ. ಅವರೂ ತನಿಖೆ ಮಾಡುತ್ತಾರೆ. ಈ ಹಗರಣ ಅಂತರ್‌ ರಾಜ್ಯ ಮಟ್ಟದಲ್ಲಿ ನಡೆದಿರುವುದರಿಂದ ಸಿಬಿಐ ತನಿಖೆಯೇ ಸೂಕ್ತ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT