ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲ್ಮೀಕಿ ನಿಗಮದಲ್ಲಿ ಅಕ್ರಮ: ಬ್ಯಾಂಕ್‌ನಿಂದ ₹94 ಕೋಟಿ ದುರ್ಬಳಕೆ ಆರೋಪ

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಎಂ.ಡಿ. ಸೇರಿ ಆರು ಮಂದಿ ವಿರುದ್ಧ ಎಫ್‌ಐಆರ್‌ ‌
Published 30 ಮೇ 2024, 0:04 IST
Last Updated 30 ಮೇ 2024, 0:04 IST
ಅಕ್ಷರ ಗಾತ್ರ

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಬೇರೆ ಬೇರೆ ಬ್ಯಾಂಕ್‌ ಖಾತೆಗಳಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ₹94 ಕೋಟಿ ಹಣ ವರ್ಗಾವಣೆ ಮಾಡಿಕೊಂಡಿರುವ ಆರೋಪದ ಮೇಲೆ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸಿಇಒ ಸೇರಿದಂತೆ ಬ್ಯಾಂಕ್‌ನ ಆರು ಮಂದಿ ವಿರುದ್ಧ ಹೈಗ್ರೌಂಡ್ಸ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮಣಿಮೇಖಲೈ, ಕಾರ್ಯನಿರ್ವಾಹಕ ನಿರ್ದೇಶಕ ನಿತೇಶ್ ರಂಜನ್, ರಾಮಸುಬ್ರಮಣ್ಯಂ, ಸಂಜಯ್‌ರುದ್ರ, ಪಂಕಜ್ ದ್ವಿವೇದಿ ಹಾಗೂ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕಿ ಸುಶಿಚಿತಾ ರಾವ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ನಿಗಮದ ಪ್ರಧಾನ ವ್ಯವಸ್ಥಾಪಕ ಎ.ರಾಜಶೇಖರ್ ಅವರು ನೀಡಿದ ದೂರು ಆಧರಿಸಿ, ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ವಾಲ್ಮೀಕಿ ಅಭಿವೃದ್ಧಿ ನಿಗಮವು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ವಸಂತನಗರದ ಶಾಖೆಯಲ್ಲಿ ಖಾತೆ ತೆರೆದಿತ್ತು. ಇದೇ ಬ್ಯಾಂಕ್‌ನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಶಾಖೆಗೆ ಫೆಬ್ರುವರಿ 2ರಂದು ಖಾತೆಯನ್ನು ವರ್ಗಾವಣೆ ಮಾಡಿಕೊಳ್ಳಲಾಗಿತ್ತು. ಖಾತೆ ನಿರ್ವಹಣೆ ಮಾಡುವ ಸಂಬಂಧ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಲೆಕ್ಕಾಧಿಕಾರಿಯಿಂದ ಬ್ಯಾಂಕ್‌ ಸಿಬ್ಬಂದಿ ಸಹಿ ಪಡೆದುಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಅದಾದ ಮೇಲೆ ಮಾರ್ಚ್ 4ರಂದು ₹25 ಕೋಟಿ, ಮಾರ್ಚ್ 6ರಂದು ₹25 ಕೋಟಿ, ಮಾರ್ಚ್‌ 21ರಂದು ₹44 ಕೋಟಿ, ಮೇ 21ರಂದು ₹50 ಕೋಟಿ ಹಾಗೂ ಮೇ 22ರಂದು ₹33 ಕೋಟಿ ಸೇರಿ ಒಟ್ಟು ನಿಗಮದ ಬ್ಯಾಂಕ್ ಖಾತೆ ಯಿಂದ ₹187.33 ಕೋಟಿ ಹಣ ವರ್ಗಾ ವಣೆ ಮಾಡಲಾಗಿತ್ತು. ಈ ನಡುವೆ ಚುನಾ ವಣಾ ನೀತಿ ಸಂಹಿತೆ ಜಾರಿ ಆಗಿದ್ದರಿಂದ ಬ್ಯಾಂಕ್‌ ಜೊತೆ ನಿಗಮ ಯಾವುದೇ ಪತ್ರ ವ್ಯವಹಾರ ನಡೆಸಿರಲಿಲ್ಲ. ನಿಗಮದ ಅಧಿ ಕೃತ ವಿಳಾಸಕ್ಕೆ ಪಾಸ್‌ಬುಕ್, ಚೆಕ್‌ಬುಕ್‌ ಸೇರಿ ಯಾವುದೇ ದಾಖಲೆಗಳು ಬ್ಯಾಂಕ್‌ನಿಂದ ಬಂದಿರಲಿಲ್ಲ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ನಿಗಮದ ಯಾವುದೇ ಸಿಬ್ಬಂದಿ ಹಣವನ್ನು ವಿದ್‌ಡ್ರಾ ಮಾಡಿಲ್ಲ. ಆದರೆ, ನಕಲಿ ದಾಖಲೆ ಸೃಷ್ಟಿಸಿ ₹94.73 ಕೋಟಿ ಯನ್ನು ಅನಧಿಕೃತವಾಗಿ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಮೇ 23ಕ್ಕೆ ಅಧಿಕಾರಿಗಳು ₹5 ಕೋಟಿ ಮಾತ್ರ ವಾಪಸ್‌ ಹಾಕಿದ್ದಾರೆ. ಹಣ ವರ್ಗಾ ವಣೆ ಆಗಿರುವ ಸಂಬಂಧ ಮಾಹಿತಿ ಕೇಳಿ ದರೂ ಅವರು ಪ್ರತಿಕ್ರಿಯಿಸಿಲ್ಲ. ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಾವಳಿ ಒದಗಿಸಿಲ್ಲ. ನಿಗಮದ ಇ–ಮೇಲ್‌ಗೆ ಸಂದೇಶ ಕಳುಹಿಸಿಲ್ಲ. ಹಣ ಎಲ್ಲಿಗೆ ವರ್ಗಾವಣೆ ಆಗಿದೆ ಎಂಬುದಕ್ಕೆ ಮೊಬೈಲ್‌ ಸಂಖ್ಯೆ ದಾಖಲಿಸಿಲ್ಲ’ ಎಂದು ನಿಗಮದ ಪ್ರಧಾನ ವ್ಯವಸ್ಥಾಪಕರು ದೂರಿನಲ್ಲಿ ತಿಳಿಸಿದ್ದಾರೆ.

‘ದೂರು ಆಧರಿಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಹಣ ವರ್ಗಾವಣೆ ಆಗಿರುವುದಕ್ಕೆ ಸಂಬಂಧಿಸಿದಂತೆ ದಾಖಲೆ ಗಳ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪರಿಶೀಲನೆ ವೇಳೆ ಅಕ್ರಮ ಪತ್ತೆ

ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡ ನಿಗಮದ ಲೆಕ್ಕ ವಿಭಾಗದ ಅಧೀಕ್ಷಕ ಪಿ.ಚಂದ್ರಶೇಖರನ್‌ ಅವರಿಗೆ ನಿಗಮದ ಬ್ಯಾಂಕ್‌ ಖಾತೆಯ ದೃಢೀಕರಣದ ಚೆಕ್‌, ಆರ್‌ಟಿಜಿಎಸ್‌, ಬ್ಯಾಂಕ್‌ ದಾಖಲೆಗಳ ಸಮನ್ವಯ ಮಾಡುವ ಹೊಣೆ ನೀಡಲಾಗಿತ್ತು. ಎಲ್ಲ ದಾಖಲೆಗಳನ್ನು ಪರಿಶೀಲನೆ ನಡೆಸುವ ವೇಳೆ ನಿಗಮದ ಬ್ಯಾಂಕ್‌ ಖಾತೆಯಿಂದ ₹94 ಕೋಟಿ ಹಣವು ದುರ್ಬಳಕೆ ಆಗಿರುವುದು ಕಂಡುಬಂದಿತ್ತು’ ಎಂದು ಮೂಲಗಳು ಹೇಳಿವೆ.

₹88.62 ಕೋಟಿ ಅಕ್ರಮ: ಎಂಡಿ, ಲೆಕ್ಕಾಧಿಕಾರಿ ಅಮಾನತು

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅವ್ಯವಹಾರ ಆರೋಪಗಳ ಕಾರಣ ನಿಗಮದ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಜೆ.ಜಿ. ಪದ್ಮನಾಭ ಮತ್ತು ಲೆಕ್ಕಾಧಿಕಾರಿ ಪರುಶುರಾಮ್‌ ಜಿ. ದುರ್ಗಣ್ಣನವರ್‌ ಅವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ. ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ‌ಪ್ರಭಾರಿಯಾಗಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೆ.ಆರ್. ರಾಜ್‌ಕುಮಾರ್‌ ಅವರನ್ನು ನೇಮಿಸಿ ಆದೇಶಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT