ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲ್ಮೀಕಿ ನಿಗಮ ಹಗರಣ: 8 ದಿನ ಇ.ಡಿ ವಶಕ್ಕೆ ಸತ್ಯನಾರಾಯಣ ವರ್ಮಾ

Published : 14 ಆಗಸ್ಟ್ 2024, 2:14 IST
Last Updated : 14 ಆಗಸ್ಟ್ 2024, 2:14 IST
ಫಾಲೋ ಮಾಡಿ
Comments

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಗರಣದ ಎರಡನೇ ಆರೋಪಿ ಹೈದರಾಬಾದ್‌ನ ಸತ್ಯನಾರಾಯಣ ವರ್ಮಾ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 8 ದಿನ ಜಾರಿ ನಿರ್ದೇಶನಾಲಯದ (ಇ.ಡಿ) ಕಸ್ಟಡಿಗೆ ನೀಡಿ ಆದೇಶಿದೆ.

ಆರೋಪಿ ಸತ್ಯನಾರಾಯಣ ವರ್ಮಾ ಅವರನ್ನು‌ ಮಂಗಳವಾರ, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರ ಮುಂದೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳು ಹಾಜರುಪಡಿಸಿದರು.

ವಿಚಾರಣೆ ವೇಳೆ ಆರೋಪಿ ಸತ್ಯನಾರಾಯಣ ವರ್ಮಾ ಪರ ಹಾಜರಿದ್ದ ವಕೀಲ ಸತ್ಯನಾರಾಯಣ ಚಾಲ್ಕೆ, ‘ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿ ಅರ್ಜಿದಾರರ ವಿಚಾರಣೆ ನಡೆಸಲಾಗಿದೆ. ಈಗ ಇ.ಡಿ ತನ್ನ ಕಸ್ಟಡಿಯಲ್ಲಿ ಇರಿಸಿಕೊಂಡು ವಿಚಾರಣೆ ನಡೆಸುವ ಅಗತ್ಯವಿಲ್ಲ. ಹಾಗಾಗಿ, ಕಸ್ಟಡಿಗೆ ನೀಡಬಾರದು’ ಎಂದು ಮನವಿ ಮಾಡಿದರು.

ಆದರೆ, ಇದನ್ನು ಅಲ್ಲಗಳೆದ ಇ.ಡಿ ಪರ ಹಾಜರಿದ್ದ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್, ‘ಆರೋಪಿಯು 18 ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಹಣ ಡ್ರಾ ಮಾಡಿಕೊಂಡಿದ್ದಾರೆ. ಈ ಪ್ರಕರಣದ ಹಿಂದೆ ಬಹುದೊಡ್ಡ ಪಿತೂರಿ ಇದ್ದು, ಅದನ್ನು ಪತ್ತೆ ಮಾಡುವ ಸಲುವಾಗಿ ಇ.ಡಿ ಕಸ್ಟಡಿ ವಿಚಾರಣೆಯ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು. ಅಂತೆಯೇ, ಸತ್ಯನಾರಾಯಣ ವರ್ಮಾ ಅವರನ್ನು ಇ.ಡಿ ಕಸ್ಟಡಿಗೆ ನೀಡುವಂತೆ ಹೈಕೋರ್ಟ್ ನೀಡಿರುವ ಆದೇಶವನ್ನು ನ್ಯಾಯಾಧೀಶರ ಗಮನಕ್ಕೆ ತಂದರು.

ಪ್ರಾಸಿಕ್ಯೂಷನ್ ವಾದವನ್ನು ಮಾನ್ಯ‌ಮಾಡಿದ ನ್ಯಾಯಾಧೀಶರು ವರ್ಮಾ ಅವರನ್ನು 8 ದಿನಗಳ ಇ.ಡಿ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದರು.

ಹೈಕೋರ್ಟ್ ಆದೇಶ: ಹೈಕೋರ್ಟ್‌ನಲ್ಲಿ ಇ.ಡಿ. ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಮಾನ್ಯ ಮಾಡಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು; ಸತ್ಯನಾರಾಯಣ ವರ್ಮಾ ಅವರನ್ನು  ಜಾರಿ ನಿರ್ದೇಶನಾಲಯದ (ಇಡಿ) ಕಸ್ಟಡಿಗೆ ನೀಡುವಂತೆ ಇತ್ತೀಚೆಗಷ್ಟೇ ಎಸ್‌ಐಟಿಗೆ ಆದೇಶಿಸಿತ್ತು. ಸತ್ಯನಾರಾಯಣ ವರ್ಮಾ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಇಸಿಐಆರ್‌ (ಎನ್‌ಫೋರ್ಸ್‌ಮೆಂಟ್‌ ಕೇಸ್‌ ಇನ್‌ಫಾರ್ಮೇಶನ್‌ ರಿಪೋರ್ಟ್‌) ದಾಖಲಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT