ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ 'ದಾರಿಗಳ್ಳನಾಗಿದ್ದ' ಎಂದು ಅಪಮಾನ: ಪಠ್ಯ ವಾಪಸ್‌ಗೆ ತೀವ್ರಗೊಂಡ ಒತ್ತಾಯ

Last Updated 9 ಜೂನ್ 2022, 14:38 IST
ಅಕ್ಷರ ಗಾತ್ರ

ಬೆಂಗಳೂರು: ವಾಲ್ಮೀಕಿ ಮಹರ್ಶಿ ಅವರನ್ನು 'ದಾರಿಗಳ್ಳನಾಗಿದ್ದ' ಎಂದು ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಸುರಪುರ ದೊರೆಗಳು ಮತ್ತು ಆದಿವಾಸಿ ಸಮುದಾಯದ ಪರಂಪರೆಯನ್ನು ಅಪಮೌಲ್ಯಗೊಳಿಸಿರುವ ಪರಿಷ್ಕೃತ ಶಾಲಾ ಪಠ್ಯಗಳನ್ನು ವಾಪಸು ಪಡೆಯಬೇಕು. ಇದಕ್ಕೆ ಕಾರಣರಾದ ವ್ಯಕ್ತಿಯು ಕ್ಷಮೆ ಕೇಳಬೇಕು ಎಂದು ಪ್ರಸನ್ನಾನಂದ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಹತ್ತನೇಯ ತರಗತಿಯ 7ನೇ ಪಾಠ 'ವೀರಲವ'ದಲ್ಲಿ ವಾಲ್ಮೀಕಿ ಕುರಿತು 'ಯೌವನಾವಸ್ಥೆಯಲ್ಲಿ ಬೇಡರ ಸಂಗಡ ಸೇರಿ ದಾರಿಗಳ್ಳನಾಗಿದ್ದ' ಎಂದು ನಮೂದಿಸಲಾಗಿದೆ. ದೇಶದ ಮೂಲನಿವಾಸಿ ಬುಡಕಟ್ಟು ಸಮುದಾಯವಾಗಿರುವ ಬೇಡ ಸಮುದಾಯವನ್ನು 'ಕಳ್ಳರಾಗಿದ್ದರು' ಎಂಬಂತೆ ಬಿಂಬಿಸುವ ಮೂಲಕ ಇಡೀ ಬೇಡ, ವಾಲ್ಮೀಕಿ ಸಮುದಾಯಕ್ಕೆ ಅವಮಾನ ಮಾಡಲಾಗಿದೆ. ವಾಲ್ಮೀಕಿ ಸಮುದಾಯದ ಭಾವನೆಯನ್ನು ಕೆಣಕಲಾಗಿದೆ ಎಂದು ಪತ್ರದಲ್ಲಿ ದೂರಲಾಗಿದೆ.

ಕಳೆದ ಸಾಲಿನಲ್ಲಿ ಪಠ್ಯವಾಗಿದ್ದ 6ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದ ಭಾಗ-2ರ ಪುಟ ಸಂಖ್ಯೆ 82 ರಲ್ಲಿ 'ಸುರಪುರದ ನಾಯಕರು' ಎಂಬ ಶಿರ್ಷಿಕೆಯಡಿ ದೊರೆ ಸಂಸ್ಥಾನದ ಕೊಡುಗೆಗಳನ್ನು ಪರಿಚಯಿಸಿದ್ದ ಪಾಠವನ್ನು ಈ ಬಾರಿ ಕೈಬಿಡಲಾಗಿದೆ. ರಾಜ್ಯದ ನಾಲ್ಕನೆಯ ಅತಿದೊಡ್ಡ ಸಮುದಾಯದ ಚರಿತ್ರೆ ಮತ್ತು ಪರಂಪರೆಯನ್ನು ಕಡೆಗಣಿಸಲಾಗಿದೆ ಎಂದು ಪ್ರಸನ್ನಾನಂದ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

10ನೇ ತರಗತಿಯ ಕನ್ನಡ ಪಠ್ಯದಲ್ಲಿ 'ಸ್ವಾಮಿ ವಿವೇಕಾನಂದ ಅವರ ಚಿಂತನೆಗಳು' ಎಂಬ ಶೀರ್ಷಿಕೆಯಡಿ 'ಸಂಸ್ಕೃತಿಯು ರಕ್ತದಲ್ಲಿ ಹರಿಯಬೇಕು. ಆದರೆ ಅದರಿಂದ ಏನು ಪ್ರಯೋಜನ? ಅವರು ಕಾಡುಜನರಂತೆ ಇರುವವರು. ಅವರಲ್ಲಿ ಸಂಸ್ಕೃತಿ ಇಲ್ಲ' ಎಂದು ಬರೆಯಲಾಗಿದೆ. ಕಾಡಿನ ಮಾಲಿಕರಂತಿದ್ದ ಆದಿವಾಸಿಗಳು ತಮ್ಮದೇ ಶ್ರೀಮಂತ ಸಂಸ್ಕೃತಿ ವಾರಸುದಾರರು. ಈ ಆದಿವಾಸಿ ಬುಡಕಟ್ಟು ಸಮುದಾಯಗಳಿಗೆ 'ಸಂಸ್ಕೃತಿ ಇಲ್ಲ' ಎಂದು ಅಪಮಾನ ಮಾಡಿರುವುದು ಸಮರ್ಥನೀಯವಲ್ಲ. ನಮ್ಮ ಬುಡಕಟ್ಟು ಸಮುದಾಯಗಳನ್ನು ಅನಾಗರಿಕರೆಂದು ಬಿಂಬಿಸುವ ಈ ಪಠ್ಯ ಒಪ್ಪಿತವಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT