ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು: ಬಿಜೆಪಿ ನಾಯಕನ ಮಗನಿಗೆ ಸೋಲು

Last Updated 14 ಡಿಸೆಂಬರ್ 2021, 5:46 IST
ಅಕ್ಷರ ಗಾತ್ರ

ಬೆಂಗಳೂರು: ಕೊಡಗು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ಸದಸ್ಯತ್ವಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಸುಜಾ ಕುಶಾಲಪ್ಪ ಅವರಿಗೆ ಗೆಲುವು ಲಭಿಸಿದೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ, ಪ್ರಮುಖ ಬಿಜೆಪಿ ನಾಯಕರೊಬ್ಬರ ಮಗ ಮಂಥರ್‌ ಗೌಡ ಅವರು ಸೋಲು ಕಂಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಸುಜಾ 705 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್‌ಗೌಡ ಅವರು 603 ಮತಗಳನ್ನು ಪಡೆದರು. 102 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಗೆದ್ದಿದ್ದಾರೆ. ಇನ್ನು ಚಲಾವಣೆಗೊಂಡಿದ್ದ 1,325 ಮತಗಳ ಪೈಕಿ 17 ಮತಗಳು ತಿರಸ್ಕೃತಗೊಂಡಿವೆ.

ಚುನಾವಣೆಯಲ್ಲಿ ಸೋಲುಂಡಿರುವ ಮಂಥರ್‌ ಗೌಡ ಅವರು ಹಾಸನದ ಪ್ರಮುಖ ಬಿಜೆಪಿ ನಾಯಕ, ಮಾಜಿ ಸಚಿವ ಎ. ಮಂಜು ಅವರ ಪುತ್ರ!

ಎ. ಮಂಜು ಅವರು ಈ ಮೊದಲು ಕಾಂಗ್ರೆಸ್‌ನಲ್ಲೇ ಇದ್ದರಾದರೂ, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೇರಿ ಹಾಸನದಿಂದ ಸ್ಪರ್ಧೆ ಮಾಡಿದ್ದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌–ಜೆಡಿಎಸ್‌ ನಡುವೆ ಚುನಾವಣಾ ಮೈತ್ರಿ ಏರ್ಪಟ್ಟಿದ್ದರಿಂದ ಹಾಸನ ಲೋಕಸಭೆ ಕ್ಷೇತ್ರ ಜೆಡಿಎಸ್‌ ತೆಕ್ಕೆಗೆ ಜಾರಿತ್ತು. ಹೀಗಾಗಿ ಹಾಸನದಲ್ಲಿ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಆದರೆ, ಲೋಕಸಭೆ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದ ಎ. ಮಂಜು ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ ಸ್ಪರ್ಧೆ ಮಾಡಿದ್ದರು. ಆ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರ ಎದುರು ಎ ಮಂಜು ಸೋಲುಂಡಿದ್ದರು.

ಹಾಸನ ಜಿಲ್ಲಾ ಪಂಚಾಯಿತಿಯ ಕಾಂಗ್ರೆಸ್‌ ಸದಸ್ಯರಾದ ಮಂಥರ್‌ ಗೌಡ ಅವರನ್ನು ಕೊಡುಗು ಕ್ಷೇತ್ರಕ್ಕೆ ಕಾಂಗ್ರೆಸ್‌‌

ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದ ನಂತರ ಬಿಜೆಪಿ ಎ.ಮಂಜು ಅವರಿಗೆ ಪಕ್ಷದಲ್ಲಿ ನೀಡಿದ್ದ ಸ್ಥಾನಮಾನಗಳನ್ನು ಹಿಂದಕ್ಕೆ ಪಡೆದಿತ್ತು.

ಈ ಬಗ್ಗೆ ಸಭೆಯೊಂದರಲ್ಲಿ ಮಾತನಾಡಿದ್ದ ಎ. ಮಂಜು, ‘ನಾನು ಬಿಜೆಪಿ ಸೇರಿದರೂ ನನ್ನ ಮಗ ಮಂಥರ್‌ಗೌಡ ಕಾಂಗ್ರೆಸ್‌ನಲ್ಲಿ ಉಳಿದಿದ್ದ. ಹೀಗಾಗಿ ಪಕ್ಷ ಈಗ ಟಿಕೆಟ್ ನೀಡಿದೆ. ಆದರೆ ಏಕಾಏಕಿ ನನಗೆ ವಹಿಸಿದ್ದ ಜವಾಬ್ದಾರಿಗಳನ್ನು ಪಕ್ಷ ವಾಪಸ್‌ ಪಡೆದಿದೆ. ನಾನು ಮಗನ ಪ್ರಚಾರಕ್ಕೆ ಬರಲ್ಲ ಎಂದೂ ಹೇಳಿದ್ದೆ. ಅವನು ನಾಮಪತ್ರ ಸಲ್ಲಿಸಬೇಕಾದರೆ ನಾನು ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಜೊತೆ ಇದ್ದೆ. ಈಗ ಅವರೇ ಒಂದು ರೀತಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈಗಲೂ ನಾನು ಬಿಜೆಪಿಯಲ್ಲೇ ಇದ್ದೇನೆ,’ ಎಂದಿದ್ದರು.

ಚುನಾವಣೆಯಲ್ಲಿ ಎ.ಮಂಜು ಅವರು ಪರೋಕ್ಷವಾಗಿ ಮಗನ ಪರವಾಗಿ ಕೆಲಸ ಮಾಡಿದ್ದರು. ಅಂತಿಮವಾಗಿ ಮಂಥರ್‌ ಗೌಡ ಸೋಲು ಕಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT