ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪ್ತ ಬಣ ಕಟ್ಟಿದ ವಿಜಯೇಂದ್ರ: ಬಿಎಸ್‌ವೈ ವಿರೋಧಿಗಳು ಹೊರಕ್ಕೆ

Published 23 ಡಿಸೆಂಬರ್ 2023, 23:30 IST
Last Updated 23 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ 40 ದಿನಗಳಲ್ಲೇ ಬಿ.ವೈ. ವಿಜಯೇಂದ್ರ ಅವರು ಪಕ್ಷದ ರಾಜ್ಯ ಘಟಕವನ್ನು ಪುನರ್‌ ರಚನೆ ಮಾಡಿದ್ದಾರೆ. ನೂತನ ಪದಾಧಿಕಾರಿಗಳ ಪಟ್ಟಿಯಲ್ಲಿ ಬಿ.ಎಸ್‌.ಯಡಿಯೂರಪ್ಪ ಹಾಗೂ ವಿಜಯೇಂದ್ರ ಬೆಂಬಲಿಗರಿಗೆ ಆದ್ಯತೆ ಸಿಕ್ಕಿದೆ. 

ಕಳೆದ ಮೂರು ದಿನಗಳಿಂದ ನವದೆಹಲಿಯಲ್ಲಿರುವ ವಿಜಯೇಂದ್ರ ಅವರು ಪಕ್ಷದ ವರಿಷ್ಠರೊಂದಿಗೆ ಸಮಾಲೋಚಿಸಿ ನೂತನ ಪಟ್ಟಿಗೆ ಒಪ್ಪಿಗೆ ಪಡೆದಿದ್ದಾರೆ. ರಾಜ್ಯ ಉಪಾಧ್ಯಕ್ಷರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಕಾರ್ಯದರ್ಶಿಗಳು ಹಾಗೂ ರಾಜ್ಯ ಖಜಾಂಚಿ ಹುದ್ದೆಗೆ ಹೊಸ ತಂಡವನ್ನು ನೇಮಿಸಲಾಗಿದೆ. ಮೋರ್ಚಾಗಳಿಗೆ ನೂತನ ಅಧ್ಯಕ್ಷರ ಹೆಸರುಗಳನ್ನೂ ಶನಿವಾರ ರಾತ್ರಿ ಪ್ರಕಟಿಸಲಾಗಿದೆ. 

ವಿಜಯೇಂದ್ರ ನೇಮಕಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿ ವಾಗ್ದಾಳಿ ನಡೆಸಿದ್ದರು. ಅಧ್ಯಕ್ಷ ಸ್ಥಾನ ಸಿಗದಿರುವುದಕ್ಕೆ ವಿ.ಸೋಮಣ್ಣ ಅತೃಪ್ತಿ ವ್ಯಕ್ತಪಡಿಸಿದ್ದರು. ಮಾಜಿ ಸಚಿವ ಅರವಿಂದ ಲಿಂಬಾವಳಿ ಸಹ ಮುನಿಸು ತೋರಿದ್ದರು. ಪಕ್ಷದ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ‘ನಾನು ಇನ್ನು ಸಾಮಾನ್ಯ ಕಾರ್ಯಕರ್ತ’ ಎಂದು ಮಾರ್ಮಿಕವಾಗಿ ಹೇಳಿದ್ದರು. ಶಾಸಕ ಅರವಿಂದ ಬೆಲ್ಲದ ಅವರು ಬಹಿರಂಗವಾಗಿ ಏನೂ ಹೇಳದಿದ್ದರೂ ಅಂತರ ಕಾಯ್ದುಕೊಂಡಿದ್ದರು. ವಿಜಯೇಂದ್ರ ನೇಮಕದ ವಿರುದ್ಧ ಒಡಕು ಧ್ವನಿ ಎತ್ತಿದವರಿಗೆ ಹಾಗೂ ಅವರ ಪಾಳಯದಲ್ಲಿ ಗುರುತಿಸಿಕೊಂಡವರಿಗೆ ಈ ಪಟ್ಟಿಯಲ್ಲಿ ಜಾಗ ಸಿಕ್ಕಿಲ್ಲ. ಈ ವಿಷಯದಲ್ಲೂ ವಿಜಯೇಂದ್ರ ಮೇಲುಗೈ ಸಾಧಿಸಿದ್ದಾರೆ. 

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಥವಾ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕಾಗಿ ಆಸೆ ಕಂಗಳಲ್ಲಿ ಕಾಯುತ್ತಿದ್ದ ಶಾಸಕ ವಿ.ಸುನೀಲ್‌ ಕುಮಾರ್ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿ ಸಮಾಧಾನಪಡಿಸಲಾಗಿದೆ. ಅವರು ಬಿಜೆ‍ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್‌ ಗುಂಪಿನಲ್ಲಿ ಗುರುತಿಸಿಕೊಂಡವರು. 

ನಳಿನ್ ಕುಮಾರ್ ಕಟೀಲ್‌ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಬಹುತೇಕ ಮೋರ್ಚಾಗಳು ನಿಷ್ಕ್ರಿಯವಾಗಿದ್ದವು. ಲೆಟರ್ ಹೆಡ್‌ಗಷ್ಟೇ ಅಧ್ಯಕ್ಷರು ಇದ್ದರು ಎಂದು ಬಿಜೆಪಿ ವಲಯದಲ್ಲೇ ಟೀಕೆ ವ್ಯಕ್ತವಾಗಿತ್ತು. ಈ ಮೋರ್ಚಾಗಳಿಗೆ ಹೊಸ ಮುಖಗಳನ್ನು ನೇಮಕ ಮಾಡಲಾಗಿದೆ. ಕಟೀಲ್ ತಂಡದಲ್ಲಿದ್ದ ಯಾರಿಗೂ ಹೊಸ ಪದಾಧಿಕಾರಿಗಳ ಪಟ್ಟಿಯಲ್ಲಿ ಜಾಗ ಸಿಕ್ಕಿಲ್ಲ. 

ಯುವ ಮುಖಗಳಾದ ಪಿ.ರಾಜೀವ್‌, ಜೆ.ಪ್ರೀತಮ್‌ ಗೌಡ, ಡಿ.ಎಸ್‌.ಅರುಣ್‌, ವಿನಯ್‌ ಬಿದರೆ, ಕ್ಯಾಪ್ಟನ್‌ ಬ್ರಿಜೇಶ್ ಚೌಟ ಮತ್ತಿತರ ಕಟ್ಟಾಳುಗಳಿಗೆ ಭಾರಿ ಬಡ್ತಿ ನೀಡಲಾಗಿದೆ.  ವಿಜಯೇಂದ್ರ ಅವರೇ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬಂದಿದ್ದ ಧೀರಜ್ ಮುನಿರಾಜು, ಶೈಲೇಂದ್ರ ಬೆಲ್ದಾಳೆ, ಸಿಮೆಂಟ್ ಮಂಜು ಅವರಿಗೆ ಅವಕಾಶಗಳನ್ನು ಕಲ್ಪಿಸಲಾಗಿದೆ.

‘ಆಪರೇಷನ್‌ ಕಮಲ’ದ ಮೂಲಕ ಪಕ್ಷಕ್ಕೆ ಸೇರ್ಪಡೆಯಾದ ಬೈರತಿ ಬಸವರಾಜ್‌, ಎನ್‌. ಮಹೇಶ್‌, ವರ್ಷದ ಹಿಂದೆಯಷ್ಟೇ ಕಮಲ ಪಾಳಯಕ್ಕೆ ಸೇರಿಕೊಂಡಿದ್ದ ಮಂಡ್ಯದ ಲಕ್ಷ್ಮಿ ಅಶ್ವಿನಿ ಗೌಡ ಅವರೂ ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 

ವಿಧಾನಸಭಾ ಚುನಾವಣೆಯಲ್ಲಿ ಸೋತ ಮುರುಗೇಶ ನಿರಾಣಿ, ರಾಜುಗೌಡ ನಾಯಕ, ಹರತಾಳು ಹಾಲಪ್ಪ, ರೂಪಾಲಿ ನಾಯಕ್‌, ಎ.ಎಸ್‌.ಪಾಟೀಲ ನಡಹಳ್ಳಿ ಸೇರಿದಂತೆ ಒಂಬತ್ತು ಮುಖಂಡರನ್ನು ಪದಾಧಿಕಾರಿಗಳನ್ನಾಗಿ ಮಾಡಿ ಪಕ್ಷ ಸಂಘಟಿಸುವ ಹೊಣೆ ನೀಡಲಾಗಿದೆ. 

ಯಾರಿಗೆ ಯಾವ ಸ್ಥಾನ

ರಾಜ್ಯ ಉಪಾಧ್ಯಕ್ಷರು: ಮುರುಗೇಶ ನಿರಾಣಿ, ಬೈರತಿ ಬಸವರಾಜ್‌, ರಾಜುಗೌಡ ನಾಯಕ್‌, ಎನ್‌.ಮಹೇಶ್‌, ಅನಿಲ್‌ ಬೆನಕೆ, ಹರತಾಳು ಹಾಲಪ್ಪ, ರೂಪಾಲಿ ನಾಯಕ್‌, ಡಾ.ಬಸವರಾಜ ಕೇಲಗಾರ, ಮಾಳವಿಕಾ ಅವಿನಾಶ್‌, ಎಂ. ರಾಜೇಂದ್ರ. 

ರಾಜ್ಯ ಕಾರ್ಯದರ್ಶಿಗಳು: ಶೈಲೇಂದ್ರ ಬೆಲ್ದಾಳೆ, ಡಿ.ಎಸ್‌.ಅರುಣ್‌, ಬಸವರಾಜ ಮತ್ತಿಮಾಡ, ಸಿ.ಮುನಿರಾಜು, ವಿನಯ್‌ ಬಿದರೆ, ಕ್ಯಾಪ್ಟನ್‌ ಬ್ರಿಜೇಶ್‌ ಚೌಟ, ಶರಣು ತಳ್ಳಿಕೇರಿ, ಲಲಿತಾ ಅನಾಪುರ, ಲಕ್ಷ್ಮಿ ಅಶ್ವಿನ್‌ ಗೌಡ, ಅಂಬಿಕಾ ಹುಲಿನಾ‌ಯ್ಕರ್‌. 

ರಾಜ್ಯ ಖಜಾಂಚಿ: ಸುಬ್ಬನರಸಿಂಹ

ಮೋರ್ಚಾಗಳ ರಾಜ್ಯಾಧ್ಯಕ್ಷರು: 

ಮಹಿಳಾ ಮೋರ್ಚಾ: ಸಿ.ಮಂಜುಳಾ

ಯುವ ಮೋರ್ಚಾ: ಧೀರಜ್ ಮುನಿರಾಜು

ಎಸ್‌ಟಿ ಮೋರ್ಚಾ: ಬಂಗಾರು ಹನುಮಂತು

ಎಸ್‌ಸಿ ಮೋರ್ಚಾ: ಎಸ್‌.ಮಂಜುನಾಥ್ (ಸಿಮೆಂಟ್ ಮಂಜು)

ಹಿಂದುಳಿದ ವರ್ಗಗಳ ಮೋರ್ಚಾ: ರಘು ಕೌಟಿಲ್ಯ

ರೈತ ಮೋರ್ಚಾ: ಎ.ಎಸ್.ಪಾಟೀಲ್ ನಡಹಳ್ಳಿ

ಅಲ್ಪಸಂಖ್ಯಾತ ಮೋರ್ಚಾ: ಅನಿಲ್ ಥಾಮಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT