ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅತೃಪ್ತರ ಮನವೊಲಿಕೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಯತ್ನ

ಜಾರಕಿಹೊಳಿ, ಮುನೇನಕೊಪ್ಪ, ಚಿಕ್ಕನಗೌಡರ ಭೇಟಿ
Published 23 ನವೆಂಬರ್ 2023, 16:12 IST
Last Updated 23 ನವೆಂಬರ್ 2023, 16:12 IST
ಅಕ್ಷರ ಗಾತ್ರ

ಬೆಂಗಳೂರು: ಪಕ್ಷದ ಬಗ್ಗೆ ಅಸಮಾಧಾನಗೊಂಡಿದ್ದ, ಕಾಂಗ್ರೆಸ್‌ನತ್ತ ಮುಖ ಮಾಡಿದ್ದ ಅತೃಪ್ತರನ್ನು ಸಮಾಧಾನ ಪಡಿಸುವ ಯತ್ನವನ್ನು ಮುಂದುವರಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಗುರುವಾರ ಮತ್ತೊಂದು ಸುತ್ತಿನ ಕಾರ್ಯಾಚರಣೆ ನಡೆಸಿದರು.

ವಿರೋಧ ಪಕ್ಷದ ನಾಯಕನ ಆಯ್ಕೆಗಾಗಿ ಇತ್ತೀಚೆಗೆ ನಡೆದಿದ್ದ ಶಾಸಕಾಂಗ ಪಕ್ಷದ ಸಭೆಯಿಂದ ಹೊರ ನಡೆದು ತಮ್ಮ ಪ್ರತಿಭಟನೆ ಪ್ರದರ್ಶಿಸಿದ್ದ ರಮೇಶ ಜಾರಕಿಹೊಳಿ ಮನೆಗೆ ಭೇಟಿ ನೀಡಿದ ವಿಜಯೇಂದ್ರ 30 ನಿಮಿಷ ಸಮಾಲೋಚನೆ ನಡೆಸಿದರು. ಪಕ್ಷದ ಕೆಲವರಿಂದ ತಮಗಾಗಿರುವ ಅವಮಾನ ಹಾಗೂ ಅದರಿಂದಾದ ನಷ್ಟದ ಕುರಿತು ಜಾರಕಿಹೊಳಿ ಅವರು ನಿಷ್ಠುರವಾಗಿಯೇ ತಮ್ಮ ಅಭಿಪ್ರಾಯ ಹೇಳಿದರು. ಎಲ್ಲವನ್ನೂ ಸಮಾಧಾನದಿಂದ ಆಲಿಸಿದ ವಿಜಯೇಂದ್ರ, ‘ಎಲ್ಲ ತಪ್ಪನ್ನು ಸರಿ ಮಾಡೋಣ. ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರ ಕೈ ಬಲಪಡಿಸಲು ಸಹಕಾರ ನೀಡಿ’ ಎಂದು ಕೋರಿದ್ದಾಗಿ ಗೊತ್ತಾಗಿದೆ.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ವಿಜಯೇಂದ್ರ, ‘ಅವರು ಕೆಲವು ನೋವು ತೋಡಿಕೊಂಡಿದ್ದಾರೆ. ಸಣ್ಣ ಪುಟ್ಟ ಸಮಸ್ಯೆಗಳ ಬಗ್ಗೆಯೂ ಹೇಳಿದ್ದಾರೆ. ನನ್ನ ಮಾತುಗಳಿಂದ ಅವರಿಗೆ ಸಮಾಧಾನವಾಗಿದೆ ಎಂದುಕೊಂಡಿರುವೆ’ ಎಂದರು. 

‘ಹೊಂದಾಣಿಕೆ ರಾಜಕಾರಣದ ಕಾರಣಕ್ಕೆ ವಿಜಯೇಂದ್ರ, ಅಶೋಕಗೆ ಸ್ಥಾನ ಸಿಕ್ಕಿದೆ’ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು,  ‘ಪಕ್ಷದ ಹಿರಿಯರು ಏನೇ ಮಾತನಾಡಿದರೂ ಅದನ್ನು ಆಶೀರ್ವಾದ ಎಂದುಕೊಳ್ಳುವೆ. ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ’ ಎಂದರು.

‘ರಮೇಶ ಜಾರಕಿಹೊಳಿ, ಅರವಿಂದ ಲಿಂಬಾವಳಿ, ವಿ.ಸೋಮಣ್ಣ, ಅರವಿಂದ ಬೆಲ್ಲದ, ಬಸನಗೌಡ ಪಾಟೀಲ ಯತ್ನಾಳ್‌ ಸೇರಿದಂತೆ ತಮ್ಮ ಅಭಿಪ್ರಾಯಗಳನ್ನು ಭಿನ್ನವಾಗಿ ವ್ಯಕ್ತಪಡಿಸಿರಬಹುದು. ಅಭಿಪ್ರಾಯ ಹೇಳಲು ಅವರದ್ದೇ ಧಾಟಿ ಇದೆ.  ಅದನ್ನು ತಪ್ಪಾಗಿ ತಿಳಿದುಕೊಳ್ಳುವುದಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೈಕಮಾಂಡ್‌ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವೆ’ ಎಂದು ಹೇಳಿದರು.

‘ಯಡಿಯೂರಪ್ಪ ಅವರು ನನ್ನನ್ನು ನೇಮಕಮಾಡಿಲ್ಲ. ಎಲ್ಲ ವರಿಷ್ಠರೂ ಸೇರಿ ನನ್ನನ್ನು ನೇಮಕ ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ನನ್ನನ್ನು ವಿರೋಧಿಸಿದರೆ ಮೋದಿ ಅವರನ್ನು ವಿರೋಧಿಸಿದಂತೆ ಎಂಬ ಹೇಳಿಕೆ ನೀಡಿದ್ದೆ. ದೇಶದ ಹಿತದೃಷ್ಟಿಯಿಂದ ಎಲ್ಲರೂ ಭಿನ್ನಭಿಪ್ರಾಯ ಮರೆತು ಒಟ್ಟಿಗೆ ಸಾಗಬೇಕಿದೆ’ ಎಂದರು.

ಅತೃಪ್ತರ ಭೇಟಿ: ಪಕ್ಷದ ಕೆಲವು ನಿಲುವುಗಳಿಂದ ಬೇಸರಗೊಂಡಿದ್ದ ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ ಅವರು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನು ಭೇಟಿಯಾದರು. ಕಾಂಗ್ರೆಸ್ ನಾಯಕರು ನಡೆಸುತ್ತಿರುವ ‘ಆಪರೇಷನ್ ಹಸ್ತ’ದಲ್ಲಿ ಇವರ ಹೆಸರುಗಳೂ ಇದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT