ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಂಗಭದ್ರಾದ ಗೇಟ್‌ ಕೊಚ್ಚಿ ಹೋಗಲು ಚೈನ್‌ನ ಪಿನ್‌ ಕಾರಣವೇ?

Published : 14 ಆಗಸ್ಟ್ 2024, 14:08 IST
Last Updated : 14 ಆಗಸ್ಟ್ 2024, 14:08 IST
ಫಾಲೋ ಮಾಡಿ
Comments

ಬೆಂಗಳೂರು: ತುಂಗಭದ್ರಾ ಅಣೆಕಟ್ಟಿನ 19ನೇ ಕ್ರಸ್ಟ್‌ ಗೇಟ್‌ ಚೈನ್‌ನ ಕೊಂಡಿಯ ಕೊನೆಯಲ್ಲಿ ಇರುವ ಒಂದು ಚಿಕ್ಕ ಪಿನ್‌ ನೀರಿನ ಒತ್ತಡಕ್ಕೆ ಸಿಲುಕಿ ಮುರಿದಿರುವುದು ಕ್ರಸ್ಟ್‌ಗೇಟ್‌ ಕೊಚ್ಚಿ ಹೋಗಲು ಕಾರಣ ಇರಬಹುದು ಎಂದು ತಜ್ಞರು ಪ್ರಾಥಮಿಕವಾಗಿ ಅಂದಾಜು ಮಾಡಿದ್ದಾರೆ.

‘ನೀರು ಖಾಲಿ ಮಾಡಿ ಅದನ್ನು ಕಣ್ಣಾರೆ ನೋಡಿದಾಗಲೇ ನಿಖರ ಕಾರಣ ತಿಳಿಯುತ್ತದೆ’ ಎಂದು ಹೆಸರು ಬಹಿರಂಗಪಡಿಸಲು ಒಪ್ಪದ ಅಣೆಕಟ್ಟೆ ಸುರಕ್ಷತೆ ಮತ್ತು ಅಣೆಕಟ್ಟೆ ಸುಧಾರಣಾ ಯೋಜನೆಗಳ (ಡಿಆರ್‌ಪಿಐ) ಸಂಸ್ಥೆಯ ಹಿರಿಯ ಎಂಜಿನಿಯರ್‌ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಕಾಲ ಕಾಲಕ್ಕೆ ಗೇಟ್‌ಗಳ ನಿರ್ವಹಣೆ ಮಾಡಿದ್ದರೆ, ಈ ಅನಾಹುತ ಆಗುತ್ತಿರಲಿಲ್ಲ’ ಎಂದೂ ಅವರು ಹೇಳಿದರು.

ತುಂಗಭದ್ರಾ ಸೇರಿ ಎಲ್ಲ ಅಣೆಕಟ್ಟೆಗಳ ಕ್ರಸ್ಟ್‌ ಗೇಟ್‌ ಮತ್ತಿತರ ನಿರ್ವಹಣೆಗಾಗಿ ಪ್ರತ್ಯೇಕ ಅನುದಾನ ಮೀಸಲಿಡಬೇಕು. ಸದ್ಯಕ್ಕೆ ಅಂತಹ ವ್ಯವಸ್ಥೆ ರಾಜ್ಯದಲ್ಲಿ ಇಲ್ಲ. ಜಲಸಂಪನ್ಮೂಲ ಇಲಾಖೆಗೆ ಒದಗಿಸಲಾಗುವ ಅನುದಾನವನ್ನೇ ಈ ಉದ್ದೇಶಕ್ಕೂ ಬಳಸಬೇಕು. ಆದರೆ, ಸರ್ಕಾರ ಇತರ ಬಾಬ್ತುಗಳಿಗೆ ಆದ್ಯತೆ ನೀಡುತ್ತದೆಯೇ ಹೊರತು ನಿರ್ವಹಣೆಯತ್ತ ಗಮನ ಹರಿಸುವುದಿಲ್ಲ. ಈ ಧೋರಣೆ ಸರಿ ಆಗಬೇಕು. ಕ್ರಸ್ಟ್‌ಗೇಟ್‌ ಕೊಚ್ಚಿ ಹೋಗಿರುವುದು ಸರ್ಕಾರ ಸೇರಿ ಎಲ್ಲರಿಗೂ ಒಂದು ಪಾಠ ಎಂದು ಅವರು ಪ್ರತಿಪಾದಿಸಿದರು.

ಕೇಂದ್ರ ಸರ್ಕಾರ ಪ್ರಕಟಿಸಿರುವ ಅಣೆಕಟ್ಟೆ ನಿರ್ವಹಣೆ ಮಾರ್ಗಸೂಚಿ ಅನ್ವಯ ಕಾಲ ಕಾಲಕ್ಕೆ ನಿರ್ವಹಣೆ ಮಾಡಲೇಬೇಕು. ಇದಕ್ಕೆ ಅನುದಾನ ನಿಗದಿ ಮಾಡದೇ ಇದ್ದರೆ ಸಾಧ್ಯವಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

‘ತಮಿಳುನಾಡಿನ ಮೆಟಲರ್ಜಿ ಎಂಜನಿಯರಿಂಗ್‌ ಕಾಲೇಜು ತುಂಗಭದ್ರಾ ಅಣೆಕಟ್ಟೆಯ ಎಲ್ಲ ಗೇಟ್‌ಗಳನ್ನು ಪರೀಕ್ಷೆಗೆ ಒಳಪಡಿಸಿ ವರದಿ ನೀಡಿತ್ತು. ಆ ವರದಿಯ ಪ್ರಕಾರ, ಗೇಟ್‌ಗಳ ಬಾಳಿಕೆ ಇನ್ನೂ 15 ರಿಂದ 20 ವರ್ಷಗಳವರೆಗೆ ತೊಂದರೆ ಇಲ್ಲ. ಆದರೆ, ಹೊಸ ಗೇಟ್‌ಗಳನ್ನು ಅಳವಡಿಸಬೇಕಾಗುತ್ತದೆ. ಕೆಆರ್‌ಎಸ್‌ನಲ್ಲಿ ವಿಶ್ವ ಬ್ಯಾಂಕ್‌ ನೆರವಿನಿಂದ 148 ಗೇಟ್‌ಗಳನ್ನು ಐದು ವರ್ಷಗಳಲ್ಲಿ ಹಂತ ಹಂತವಾಗಿ ಬದಲಾವಣೆ ಮಾಡಲಾಯಿತು. ಕೆಲವು ಕಡೆ ಸೋರಿಕೆ ಆಗುತ್ತಿತ್ತು. ಆ ಸೋರಿಕೆಯನ್ನು ತಡೆಯುವ ಕೆಲಸ ಆಗಿದೆ. ಇದಲ್ಲದೇ ಇನ್ನೂ ಹಲವು ಅಣೆಕಟ್ಟೆಗಳಲ್ಲಿ ಬಿರುಕುಗಳನ್ನು ಮುಚ್ಚುವ ಕೆಲಸ ಮಾಡಿದ್ದೇವೆ’ ಎಂದು ಅವರು ವಿವರಿಸಿದರು.

ಎಲ್ಲ ಅಣೆಕಟ್ಟುಗಳ ಸಮಗ್ರ ಪರಿಶೀಲನೆ:

ರಾಜ್ಯದಲ್ಲಿ ಬಹುತೇಕ ಅಣೆಕಟ್ಟು ಹಳೆಯದಾಗಿವೆ. ಅದರಲ್ಲೂ ತುಂಗಭದ್ರಾ ಅಣೆಕಟ್ಟೆಯನ್ನು ಸುಣ್ಣ ಮತ್ತು ಗಾರೆಯನ್ನು ಬಳಸಿ ಮಾಡಿದ್ದು. ಇದರ ಬಾಳಿಕೆ ಇನ್ನು ಎಷ್ಟು ವರ್ಷಗಳು ಎಂಬುದನ್ನು ಅಧ್ಯಯನಕ್ಕೆ ಒಳಪಡಿಸಬೇಕು. ಕೆಆರ್‌ಎಸ್‌ ಕೂಡ ಗಾರೆ ಮತ್ತು ಸುಣ್ಣ ಬಳಸಿ ನಿರ್ಮಿಸಿದ್ದು. ಆಲಮಟ್ಟಿಗೆ ಸಿಮೆಂಟ್‌ ಬಳಸಲಾಗಿದೆ. ಇದಕ್ಕಾಗಿ ಎಲ್ಲ ಅಣೆಕಟ್ಟೆಗಳನ್ನು ಸಮಗ್ರ ಪರಿಶೀಲನೆಗೆ ಒಳಪಡಿಸಲೇಬೇಕು ಎಂದು ಡಿಆರ್‌ಪಿಐನ ಮತ್ತೊಬ್ಬ ತಜ್ಞರು ಹೇಳಿದರು.

ಇಲ್ಲಿಯವರೆಗೆ ಯಾರೂ ಅಣೆಕಟ್ಟೆಗಳ ನಿರ್ವಹಣೆಯ ಬಗ್ಗೆ ಗಂಭೀರ ಚಿಂತನೆ ನಡೆಸಿರಲಿಲ್ಲ. ಕೆಲವು ಅಣೆಕಟ್ಟುಗಳ ಬಾಳಿಕೆ ಅವಧಿ ಮುಗಿಯುತ್ತಾ ಬಂದಿದೆ. ಹೀಗಾಗಿ ಅವುಗಳನ್ನು ಪರಿಶೀಲನೆಗೆ ಒಳಪಡಿಸಿ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇದಕ್ಕೆ ಅಗತ್ಯ ಅನುದಾನವನ್ನೂ ಒದಗಿಸಬೇಕು.

ತುಂಗಭದ್ರಾದಲ್ಲಿ ಎಲ್ಲ ಗೇಟ್‌ಗಳನ್ನೂ ಬದಲಿಸಬೇಕು. ಒಂದೊಂದು ಗೇಟ್‌ಗೆ ಸುಮಾರು ₹10 ಕೋಟಿ ಆಗುತ್ತದೆ. ಇದಕ್ಕಾಗಿ ಒಂದು ಯೋಜನೆ ರೂಪಿಸಿ, ಹಂತ ಹಂತವಾಗಿ ಬದಲಿಸಬೇಕು. ಸುಮಾರು ₹500 ಕೋಟಿಗೂ ಹೆಚ್ಚು ಮೊತ್ತ ಬೇಕಾಗುತ್ತದೆ. ಸದ್ಯಕ್ಕೆ ಅಣೆಕಟ್ಟು ನಿರ್ವಹಣೆಗೆ ಕೊಡುವ ಹಣ ಅತ್ಯಲ್ಪ ಎಂದು ಅವರು ಹೇಳಿದರು.

ಗೇಟ್‌ ಸಮಸ್ಯೆಗೆ ನೀರಿನ ಒತ್ತಡ ಕಾರಣ

‘ಕ್ರಸ್ಟ್‌ಗೇಟ್‌ಗಳು ಎಷ್ಟೇ ಬಲವಾಗಿದ್ದರೂ ಅದಕ್ಕೆ ಅಳವಡಿಸಿದ ಚೈನ್‌ ಮತ್ತು ಇತರ ಬಿಡಿಭಾಗಗಳು ಕಳಚಿ ಹೋಗಲು ನೀರಿನ ಒತ್ತಡವೇ ಕಾರಣ. ನೀರಿನ ಒತ್ತಡದಲ್ಲಿ ಸಮತೋಲನ ಸದಾ ಕಾಲ ಇರುವುದಿಲ್ಲ. ಪ್ರವಾಹದ ಸಂದರ್ಭದಲ್ಲಿ ಸಮತೋಲನ ತಪ್ಪಿ ಹೋಗುತ್ತದೆ. ಅಧಿಕ ಒತ್ತಡ ಸೃಷ್ಟಿ ಆಗುತ್ತದೆ. ಇದರಿಂದ ಕ್ರಸ್ಟ್‌ಗೇಟ್‌ಗಳಲ್ಲಿ ಏರುಪೇರಾಗುತ್ತದೆ. ಹೀಗಾಗಿ ನಮ್ಮ ನಿರೀಕ್ಷೆಗೂ ಮೀರಿ ಇಂತಹ ಘಟನೆಗಳು ನಡೆಯುತ್ತವೆ’ ಎನ್ನುತ್ತಾರೆ ತಜ್ಞರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT