ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಮಂದಿರ ನಿರ್ಮಾಣ ಒಳ್ಳೆಯದು, ರಾಮ ರಾಜ್ಯ ಯಾವಾಗ: ಪ್ರಿಯಾಂಕ್ ಖರ್ಗೆ ಪ್ರಶ್ನೆ

ಹೆಣದ‌ ಮೇಲೆ‌ ಹಣ ಮಾಡಿದ ಬಿಜೆಪಿ
Published 27 ಡಿಸೆಂಬರ್ 2023, 6:21 IST
Last Updated 27 ಡಿಸೆಂಬರ್ 2023, 6:21 IST
ಅಕ್ಷರ ಗಾತ್ರ

ಬಾಗಲಕೋಟೆ: ರಾಮ ಮಂದಿರ ನಿರ್ಮಾಣ ಮಾಡಿರುವುದು ಒಳ್ಳೆಯದು. ಆದರೆ, ಎಲ್ಲರನ್ನೂ ಸಾಮಾಜಿಕ, ಆರ್ಥಿಕ ಸಮಾನತೆಯಿಂದ ಕಾಣುವ ರಾಮ ರಾಜ್ಯ ನಿರ್ಮಾಣ ಯಾವಾಗ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರುದ್ಯೋಗ ರಹಿತ, ಬೆಲೆ ಏರಿಕೆ ನಿಯಂತ್ರಿಸುವ, ಆರ್ಥಿಕ ಸಬಲತೆಯ ಆಡಳಿತದ ಜನರ‌ ನಿರೀಕ್ಷೆ‌ ಹುಸಿಯಾಗಿದೆ ಎಂದು ಟೀಕಿಸಿದರು.

ಜನರಿಗೆ ಬಿಜೆಪಿ ಉಚಿತ ಯೋಜನೆ ಘೋಷಿಸಿದರೆ ಜನ ಕಲ್ಯಾಣಕ್ಕಾಗಿ, ಕಾಂಗ್ರೆಸ್ ಕೊಟ್ಟರೆ ಆರ್ಥಿಕ ದಿವಾಳಿಯಾಗುತ್ತದೆ ಎಂಬ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅಯುಷ್ಮಾನ್,‌ ನರೇಗಾ ಯೋಜನೆಗಳಲ್ಲಿ ರಾಜ್ಯದ ಪಾಲು ಶೇ 50ರಷ್ಟಿದ್ದರೂ, ಕೇಂದ್ರದ್ದೇ ಎನ್ನುವಂತೆ ಪ್ರಚಾರ ಪಡೆಯುತ್ತಿದ್ದಾರೆ ಎಂದು ಟೀಕಿಸಿದರು.

ದಾಖಲೆ‌ ಬಿಡುಗಡೆ ಮಾಡಲಿ: ರಾಜ್ಯದ ಹಿತಾಸಕ್ತಿ, ಜನರಿಗೆ ಸತ್ಯ ತಿಳಿಸುವುದಕ್ಕಾಗಿ ಕೋವಿಡ್ ಸಂದರ್ಭದಲ್ಲಿ ನಡೆದ‌ ₹ 40 ಸಾವಿರ ಕೋಟಿ ಮೊತ್ತ‌ ಹಗರಣದ ದಾಖಲೆಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಆರೋಪ ಮಾಡಿದಾಗ ಸುಳ್ಳು ಎಂದು ಹೇಳುತಿದ್ದ ಬಿಜೆಪಿ ನಾಯಕರು ಎಲ್ಲಿದ್ದಾರೆ? ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಜನರಿಗೆ ಉತ್ತರಿಸಬೇಕು ಎಂದು ಒತ್ತಾಯಿಸಿದರು.

ತಮ್ಮ ಮೇಲೆ ಕ್ರಮ ಕೈಗೊಂಡರೆ ದಾಖಲೆ ಬಿಡುಗಡೆ ಮಾಡುವುದಾಗಿ ಯತ್ನಾಳ ಹೇಳಿದ್ದಾರೆ. ಬಹಿರಂಗವಾಗಿ ದಾಖಲೆ ಬಿಡುಗಡೆ ಮಾಡಲಾಗದಿದ್ದರೆ, ಈ ಬಗ್ಗೆ ತನಿಖೆ ನಡೆಸುತ್ತಿರುವ ಆಯೋಗದ ಮುಂದೆ ದಾಖಲೆ ನೀಡಬೇಕು ಎಂದರು.

ಕೋವಿಡ್ ಸಂದರ್ಭದಲ್ಲಿ ನಡೆದ ಖರೀದಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಹಾಗೆಯೇ ಜಲಜೀವನ್ ಮಷಿನ್‌ನಲ್ಲಿ ನಡೆದಿರುವ ಅವ್ಯವಹಾರದ ತನಿಖೆಯೂ ನಡೆದಿದೆ. ನಾಲ್ಕು ತಿಂಗಳಲ್ಲಿ ವರದಿ ಬರುವ ನಿರೀಕ್ಷೆ ಇದೆ ಎಂದರು.

ದೇಶ, ರಾಜ್ಯದಲ್ಲಿ ಆಡಳಿತ ಯಾವುದೇ ಧರ್ಮಗ್ರಂಥದ ಆಧಾರದ ಮೇಲೆ ನಡೆಯುತ್ತಿಲ್ಲ. ಬಸವ, ಬುದ್ಧನ ತತ್ವ ಹಾಗೂ ಅಂಬೇಡ್ಕರ್ ಸಂವಿಧಾನದ ಮೇಲೆ ನಡೆಯುತ್ತಿದೆ. ಸಮಾನ ಅವಕಾಶ ನೀಡದ ಧರ್ಮ ನಂಬುವ ಪ್ರಶ್ನೆಯೇ ಇಲ್ಲ ಎಂದರು.

ಸಚಿವ ಆರ್.ಬಿ. ತಿಮ್ಮಾಪುರ, ಶಾಸಕರಾದ ಎಚ್.ವೈ. ಮೇಟಿ, ಜೆ.ಟಿ. ಪಾಟೀಲ, ಮಾಜಿ ಸಚಿವ ಅಜಯಕುಮಾರ ಸರನಾಯಕ, ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT