ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರಾಹ್ಮಣರ ಬಗ್ಗೆ ದ್ವೇಷ, ಅಸಹನೆ ಏಕೆ : ಅಶೋಕ್ ಹಾರನಹಳ್ಳಿ ಪ್ರಶ್ನೆ

Last Updated 10 ಡಿಸೆಂಬರ್ 2022, 14:02 IST
ಅಕ್ಷರ ಗಾತ್ರ

ಶಿವಮೊಗ್ಗ: 'ಸಾಮಾಜಿಕ ಪರಿಸರದಲ್ಲಿ ಬ್ರಾಹ್ಮಣರ ಬಗ್ಗೆ ಈ ದ್ವೇಷ, ಅಸಹನೆ ಏಕೆ ಎಂದೇ ಅರ್ಥವಾಗುತ್ತಿಲ್ಲ' ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಹೇಳಿದರು.

ನಗರದಲ್ಲಿ ಶನಿವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಶಿವಮೊಗ್ಗ ಜಿಲ್ಲಾ ಮಹಿಳಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಾಹ್ಮಣರ ಬಗ್ಗೆ ಕೆಲವರು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ದ್ವೇಷ ಸಾಧಿಸುತ್ತಿದ್ದಾರೆ. ಅಸಹನೆ ಉಂಟು ಮಾಡುತ್ತಿದ್ದಾರೆ. ಅದು ಏಕೆ ಎಂದೇ ಅರ್ಥವಾಗುತ್ತಿಲ್ಲ. ನಾವು ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು. ಬೀದಿಯಲ್ಲಿ ನಿಂತು ಹೊಡೆದಾಡುವುದೂ ತರವಲ್ಲ. ಸಾಮರಸ್ಯದ ಮೂಲಕವೇ ವಿರೋಧಿಗಳ ಮನಸ್ಸನ್ನು ಗೆಲ್ಲಬೇಕು ಎಂದು ಕಿವಿಮಾತು ಹೇಳಿದರು.

'ನಮಗೆ (ಬ್ರಾಹ್ಮಣರಿಗೆ)ಹಣ ಬಲ ಇಲ್ಲ, ತೋಳ್ಬಲವಿಲ್ಲ, ಜನಬಲವಿಲ್ಲ. ಆದರೆ, ಅದಕ್ಕಾಗಿ ಯೋಚಿಸುವುದೂ ಬೇಡ. ಬೇರೆಯವರಿಂದ ಮಾರ್ಗ ಕಲಿಯುವ ಬದಲು ನಾವೇ ಬೇರೆಯವರಿಗೆ ಮಾರ್ಗದರ್ಶಕರಾಗಬೇಕು. ಆದರ್ಶರಾಗಬೇಕು. ಆದರೆ, ಸಂದಿಗ್ಧ ಪರಿಸ್ಥಿತಿಯಲ್ಲಿ ವಿಪ್ರರು ಒಂದು ರೀತಿಯಲ್ಲಿ ಕಳೆದು ಹೋಗುತ್ತಿದ್ದಾರೆ ಎಂದರು.

ನಮ್ಮನ್ನು ಟೀಕಿಸಿದವರೊಂದಿಗೆ ನಾವು ಜಗಳ ಮಾಡಬಾರದು. ಅಕಾಡೆಮಿಕ್ ವಲಯದಲ್ಲಿ ಲೇಖಕಿ ಮಲ್ಲಿಕಾ ಘಂಟಿ ಅವರು ಬ್ರಾಹ್ಮಣರ ಕುರಿತು ಏನೇನೋ ಮಾತನಾಡಿದ್ದಾರೆ. ಅದಕ್ಕಾಗಿ ನಾವೇಕೆ ತಲೆ ಕೆಡಿಸಿಕೊಳ್ಳಬೇಕು. ಅದು ಅವರ ಮನೋಭಾವನೆಯ ಪ್ರತೀಕವಷ್ಟೇ ಎಂದರು.

ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪೂಜ್ಯ ಸ್ಥಾನವಿದೆ. ನಾವು ಇಂದು ಗಟ್ಟಿಯಾಗಿ ಇದ್ದೇವೆಂದರೆ ಅದಕ್ಕೆ ನಮ್ಮ ಮನೆಯ ಮಹಿಳೆಯರೇ ಕಾರಣ. ಇಡೀ ಕುಟುಂಬದ ಜವಾಬ್ದಾರಿ, ನಮ್ಮ ಆಗುಹೋಗುಗಳನ್ನು ಅವರೇ ನೋಡಿಕೊಳ್ಳುತ್ತಾರೆ. ಅಷ್ಟೇಕೆ ಧರ್ಮ ಉಳಿಸಿ ಬೆಳೆಸಲು ಅವರೇ ಕಾರಣರಾಗಿದ್ದಾರೆ. ಆದರೆ ಕುಟುಂಬದ ವ್ಯವಸ್ಥೆ ಇಂದು ಬುಡಮೇಲಾಗುತ್ತಿದೆ. ನಮ್ಮ ಮಹಿಳೆಯರು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ನಮ್ಮ ಸಂಸ್ಕೃತಿ ಮರೆಯುತ್ತಿದ್ದಾರೆ. ನಾವು ಮೊದಲು ನಮ್ಮ ಕುಟುಂಬ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು ಎಂದು ಸಲಹೆ ನೀಡಿದರು.

ಸರ್ಕಾರದ ಸವಲತ್ತುಗಳಿಗೆ ಕಾಯುವುದಕ್ಕಿಂತ ನಾವೇ ಆರ್ಥಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಹಿಳಾ ಘಟಕದ ರಾಜ್ಯ ಸಂಚಾಲಕಿ ಶುಭಮಂಗಳ ದಿಕ್ಸೂಚಿ ಭಾಷಣ ಮಾಡಿದರು.

ಕಾರ್ಯಕಾರಿ ಸಮಿತಿ ರಾಜ್ಯ ಸಹ ಸಂಚಾಲಕಿ ಭಾರತಿ ಸತೀಶ್, ಜಿಲ್ಲಾ ಸಂಚಾಲಕಿ ಪವಿತ್ರಾ ಆದರ್ಶ ಇದ್ದರು.

ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಸಿ. ನಟರಾಜ ಭಾಗವತ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕಾರಿ ಸಮಿತಿ ಸದಸ್ಯೆ ಉಷಾ ವೆಂಕಟೇಶ್ ಸ್ವಾಗತಿಸಿದರು. ಸರಳಾ ಹೆಗ್ಡೆ, ಪಾರ್ವತಿ ಅತಿಥಿಗಳ ಪರಿಚಯಿಸಿದರು.

'ಅತಂತ್ರದ ನಡುವೆಯೂ ಭರವಸೆಯ ಹೆಜ್ಜೆ ಇಡೋಣ'

'ನಾವು (ಬ್ರಾಹ್ಮಣರು) ಏನೆಲ್ಲಾ ಕಳೆದುಕೊಂಡಿದ್ದೇವೆ. ನಮ್ಮ ಹಿರಿಯರು ಭೂಮಿ ಕಳೆದುಕೊಂಡರು. ನಾವು ಉಳುತ್ತಿದ್ದ ಭೂಮಿ ಯಾವ್ಯಾವುದೋ ನೆಪದಲ್ಲಿ ಬೇರೆಯವರ ಪಾಲಾಯಿತು. ಮೀಸಲಾತಿಯೂ ಇಲ್ಲವಾಯಿತು. ಈಗ ಶೇ.10 ಷ್ಟು ಮೀಸಲಾತಿ ಬಂದರೂ ಅದಿನ್ನೂ ಸ್ಪಷ್ಟವಾಗಿ ತೀರ್ಮಾನವಾಗಿಲ್ಲ. ಅದಕ್ಕೆ ಇನ್ನೇನೋ ಸಮಿತಿಗಳು ಬೇಕು ಎಂದು ಹೇಳುತ್ತಿದ್ದಾರೆ. ಒಟ್ಟಾರೆ ಬ್ರಾಹ್ಮಣರು ಒಂದು ರೀತಿಯಲ್ಲಿ ಅತಂತ್ರರಾಗಿದ್ದಾರೆ. ಹಾಗೆಂದು ನಾವು ತಲೆಕೆಡಿಸಿಕೊಂಡು ಕೂರದೇ ನಮ್ಮ ಕೆಲಸವನ್ನು ನಾವು ಮಾಡುತ್ತಾ ನಮ್ಮ ಆದರ್ಶ, ಸಂಸ್ಕೃತಿ ಎತ್ತಿ ಹಿಡಿಯುತ್ತಾ, ವಿರೋಧಿಗಳ ಮನಸ್ಸು ಒಲಿಸಿಕೊಳ್ಳುತ್ತಾ ಮುನ್ನಡೆಯೋಣ' ಎಂದು ಅಶೋಕ ಹಾರನಹಳ್ಳಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT