ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಸಿಲ್ಕ್ಸ್ ರಿಯಾಯಿತಿ ದರದ ಮಾರಾಟ: ಸೀರೆಗಾಗಿ ನೀರೆಯರ ಜಟಾಪಟಿ

Last Updated 11 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎಲ್ಲರೂ ಸೇರಿದ್ದು ರೇಷ್ಮೆ ಸೀರೆಗಾಗಿ...

ರಿಯಾಯಿತಿ ದರದಲ್ಲಿ ಸಿಗುವ ಮೈಸೂರು ಸಿಲ್ಕ್‌ ಸೀರೆಗೆ ಸಾವಿರಾರು ಮಹಿಳೆಯರು ಮಾರಾಟ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಂತರು. ಕೆಲವರಿಗೆ ಸಿಕ್ಕರೆ, ಉಳಿದವರು ಬೆಳಿಗ್ಗೆಯಿಂದ ಸಂಜೆವರೆಗೆ ಕಾದು, ಅಧಿಕಾರಿಗಳಿಗೆ ಒಂದಿಷ್ಟು ಬೈದು, ಆಕ್ರೋಶ, ಹತಾಶೆ ವ್ಯಕ್ತಪಡಿಸಿದರು.

ಈ ನಾಟಕೀಯ ವಿದ್ಯಮಾನಕ್ಕೆ ಬೆಂಗಳೂರಿನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಆವರಣ, ಮೈಸೂರಿನ ಮೈಸೂರು ಸಿಲ್ಕ್ಸ್‌ ಮಳಿಗೆ ಸಾಕ್ಷಿಯಾಯಿತು.

ಎರಡೂ ಕಡೆ (ಬೆಂಗಳೂರು, ಮೈಸೂರು) ಮಹಿಳೆಯರ ಆಧಾರ್‌ ಕಾರ್ಡ್‌ನ ಝೆರಾಕ್ಸ್‌ ಪ್ರತಿ ಪಡೆದ ಅಧಿಕಾರಿಗಳು ಅವರ ಹೆಸರು ನೋಂದಾಯಿಸಿಕೊಂಡರು.

ಕೊನೆಗೂ ಸಿಕ್ಕಿತು ಸೀರೆ: ನಗರದಲ್ಲಿ ಸುಮಾರು 800 ಮಂದಿ ಹೆಸರು ನೋಂದಾಯಿಸಿದ್ದರು. ಎಲ್ಲರಿಗೂ ಸೀರೆ ವಿತರಣೆ ನಡೆದಿದೆ.

ಮೈಸೂರು ವರದಿ: ಮೃಗಾಲಯದ ಎದುರು ಇರುವ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ (ಕೆಎಸ್‌ಐಸಿ) ಮಳಿಗೆಯಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಿ ಸೀರೆ ವಿತರಿಸಲಾಗುವುದು ಎಂದು ಅಧಿಕಾರಿಗಳು ಪ್ರಕಟಿಸಿದಾಗ ಭಾರೀ ಜಟಾಪಟಿಯೇ ನಡೆಯಿತು. ಕೊನೆಗೂ ಅಧಿಕಾರಿಗಳು ಜನರನ್ನು ಒಪ್ಪಿಸಿದರು.

‘ಬಂದಿರುವುದು ಕೇವಲ 1,500 ಸೀರೆಗಳು. 3 ಸಾವಿರಕ್ಕೂ ಅಧಿಕ ಮಂದಿ ಸೇರಿದ್ದಾರೆ. ಮಧ್ಯಾಹ್ನ ಲಾಟರಿ ಮೂಲಕ ಆಯ್ಕೆಯಾದವರಿಗೆ ಸೀರೆ ವಿತರಿಸಲಾಗುವುದು’ ಎಂದರು.

ಮಹಿಳೆಯರು ಕಿಲೋಮೀಟರ್‌ಗಟ್ಟಲೆ ಉದ್ದದ ಸಾಲಿನಲ್ಲಿ ಬೆಳಿಗ್ಗೆಯಿಂದಲೇ ನಿಂತಿದ್ದರು. ಮಧ್ಯಾಹ್ನದ ವೇಳೆಗೆ ಬಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಂಕೇತಿಕವಾಗಿ ನಾಲ್ಕು ಮಂದಿಗೆ ಸೀರೆ ವಿತರಿಸಿದರು. ಈ ವೇಳೆ ಮಾತನಾಡಿದ ಸಚಿವ ಸಾ.ರಾ.ಮಹೇಶ್, ‘ಸರತಿ ಸಾಲಿನಲ್ಲಿ ನಿಂತಿರುವ ಎಲ್ಲರಿಗೂ ಸೀರೆ ವಿತರಿಸಲಾಗುವುದು’ ಎಂದು ಪ್ರಕಟಿಸಿದರು.

ಗದ್ದಲ ಉಂಟಾಗಿದ್ದು ಏಕೆ?

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ವತಿಯಿಂದ ಗೌರಿ ಹಬ್ಬದ ಅಂಗವಾಗಿ ರಿಯಾಯಿತಿ ದರದಲ್ಲಿ ಸೀರೆ ಮಾರಾಟ ಆಯೋಜಿಸಲಾಗಿತ್ತು. ₹ 14 ಸಾವಿರ ಮೌಲ್ಯದ ಸೀರೆಯನ್ನು ₹ 4,500 (+ ಜಿಎಸ್‌ಟಿ)ಕ್ಕೆ ಮಾರುವ ಯೋಜನೆಯಿದು. ಬೆಂಗಳೂರು, ಮೈಸೂರು, ದಾವಣಗೆರೆ, ಬೆಳಗಾವಿ, ಚನ್ನಪಟ್ಟಣ‌ದಲ್ಲಿ ಮಾರಾಟ ಹಮ್ಮಿಕೊಳ್ಳಲಾಗಿದೆ. 1,500 ಸೀರೆಗಳು ಇಲ್ಲಿವೆ ಎಂದು ನಿಗಮದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಭಾನುಪ್ರಕಾಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT