ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬಲ್ ಎಂಜಿನ್ ಸರ್ಕಾರ ಗುಜರಿಗೆ ಹಾಕಿ: ದೇವನೂರ

Published 25 ಏಪ್ರಿಲ್ 2023, 21:30 IST
Last Updated 25 ಏಪ್ರಿಲ್ 2023, 21:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂಘ ಪರಿವಾರದ ಡಬಲ್‌ ಎಂಜಿನ್ ಸರ್ಕಾರಗಳು ಜನವಿರೋಧಿಯಾಗಿವೆ. ಒಂದು ಎಂಜಿನ್‌ನಲ್ಲಿ ದ್ವೇಷ ತುಂಬಿಕೊಂಡಿದ್ದು, ಮತ್ತೊಂದು ಎಂಜಿನ್‌ ಶೇ 40ರಷ್ಟು ಕಮಿಷನ್‌ ದಂದೆಯಲ್ಲಿ ತೊಡಗಿದೆ. ಹೀಗಾಗಿ, ರೈಲು ಮುಂದಕ್ಕೆ ಚಲಿಸುತ್ತಿಲ್ಲ’ ಎಂದು ಸಾಹಿತಿ ದೇವನೂರ ಮಹಾದೇವ ಹೇಳಿದರು.

‘ಎದ್ದೇಳು ಕರ್ನಾಟಕ ಅಭಿಯಾನ’ದ ತಂಡ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಡಬಲ್‌ ಎಂಜಿನ್‌ ಸರ್ಕಾರಗಳನ್ನು ಗುಜರಿಗೆ ಹಾಕಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಇದ್ದರೆ ಮಾತ್ರ ಅಭಿವೃದ್ಧಿಯೇ? ಇಂತಹ ಮಾತುಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೇಳುವುದು ಎಷ್ಟು ಸರಿ? ಡಬಲ್‌ ಎಂಜಿನ್‌ ಸರ್ಕಾರ ಇದ್ದಲ್ಲಿ ಮಾತ್ರ ಹೆಚ್ಚು ಅಭಿವೃದ್ಧಿ ಎನ್ನುವುದು ಒಕ್ಕೂಟ ವ್ಯವಸ್ಥೆಯ ಬುಡ ಅಲ್ಲಾಡಿಸಿದಂತಾಗುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘ಡಬಲ್‌ ಎಂಜಿನ್‌ ಸರ್ಕಾರಗಳ ಅವಧಿಯಲ್ಲೇ ಅತಿ ಹೆಚ್ಚು ಬೆಲೆ ಏರಿಕೆಯಾಗಿದ್ದು, ನಿರುದ್ಯೋಗ ಪ್ರಮಾಣವು ಸಹ ಹೆಚ್ಚಾಗಿದೆ. ಬಡವರು–ಶ್ರೀಮಂತರ ನಡುವೆ ಅಂತರ ಹೆಚ್ಚಾಗಿದೆ. ಇದು ಸಂಘ ಪರಿವಾರ ಮತ್ತು ಬಿಜೆಪಿ ಸರ್ಕಾರದ ದುರಂತ ಕಥೆ’ ಎಂದು ದೂರಿದರು.

‘ಮತದಾರರು ಇಂದು ಹೆಚ್ಚು ಜಾಗೃತರಾಗಿದ್ದಾರೆ. ಮತಯಾಚಿಸಲು ಬಂದ ಅಭ್ಯರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಿ ಬೆವರಿಳಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುತ್ತದೆ ಎಂಬುದಕ್ಕಿಂತ ಈ ಸುಲಿಗೆ ಸರ್ಕಾರವನ್ನು ಮೊದಲು ಸೋಲಿಸಬೇಕು. ನಂತರ, ಗೆದ್ದವರ ಜೊತೆ ಜನಹಿತದ ಮರುಸ್ಥಾಪನೆಗಾಗಿ ಗುದ್ದಾಡಬೇಕು. ಇದೇ ಪ್ರಜಾಪ್ರಭುತ್ವ ಉಳಿಸಿಕೊಳ್ಳುವ ಪ್ರಕ್ರಿಯೆ’ ಎಂದು ಪ್ರತಿಪಾದಿಸಿದರು.

‘ಭಾರತ್‌ ಜೋಡೊ ಯಾತ್ರೆಯ ನಂತರ ಕಾಂಗ್ರೆಸ್‌ ಮರುಹುಟ್ಟು ಪಡೆದಿದೆ. ಆದ್ದರಿಂದ, ಕಾಂಗ್ರೆಸ್‌ಗೆ ಮತ ನೀಡಬೇಕು. ಪ್ರಗತಿಪರ ಪಕ್ಷಗಳು ಎಲ್ಲಿ ಸ್ಪರ್ಧೆ ನೀಡುತ್ತಿವೆ ಎಂಬ ಭರವಸೆ ಇರುತ್ತದೋ ಅಲ್ಲಿ ಅವುಗಳನ್ನು ಬೆಂಬಲಿಸಬೇಕು. ಕಾಂಗ್ರೆಸ್‌ ಮೂರನೇ ಸ್ಥಾನದಲ್ಲಿ ಇರುವ ಕಡೆ, ಜೆಡಿಎಸ್‌ ಬೆಂಬಲಿಸಬೇಕು. ಒಟ್ಟಿನಲ್ಲಿ ಸಂಘ ಪರಿವಾರದ ಬಿಜೆಪಿಯನ್ನು ಕಿತ್ತೊಗೆಯುವ ಕಾರ್ಯದಲ್ಲಿ ತೊಡಗಬೇಕು’ ಎಂದು ಕರೆ ನೀಡಿದರು.

ಚಿಂತಕರಾದ ಯೋಗೇಂದ್ರ ಯಾದವ್, ತಾರಾ ರಾವ್, ತ್ರಿಲೋಚನ್ ಶಾಸ್ತ್ರಿ, ಯೂಸುಫ್ ಕನ್ನಿ, ವೀರಸಂಗಯ್ಯ ಮತ್ತು ಜಾಫೆಟ್ ಇದ್ದರು.

ಸದ್ಯ ಕರ್ನಾಟಕ ಕುರುಕ್ಷೇತ್ರವಾಗಿದ್ದು ಮೇ 10ರಂದು ನಡೆಯುವ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿಯನ್ನು ಸೋಲಿಸುವ ಮೂಲಕ ಭಾರತದ ಆತ್ಮವನ್ನು ಉಳಿಸಬೇಕು. ಯೋಗೇಂದ್ರ ಯಾದವ್ –––––

–ಸ್ವರಾಜ್‌ ಇಂಡಿಯಾದ ಮುಖಂಡ

Cut-off box - ‘ಬಿಜೆಪಿಗೆ ಪ್ರಾದೇಶಿಕ ಚಹರೆಗಳ ಬಗ್ಗೆ ತಿರಸ್ಕಾರ’ ‘ಬಿಜೆಪಿ ಮತೀಯ ರಾಷ್ಟ್ರೀಯವಾದ ಯಾವತ್ತು ಕೂಡ ಪ್ರಾದೇಶಿಕ ಚಹರೆಗಳನ್ನು ರಾಷ್ಟ್ರಕ್ಕೆ ತೊಂದರೆ ಎಂದೇ ಭಾವಿಸುತ್ತದೆ. ಆ ಪ್ರಾದೇಶಿಕ ಚಹರೆಗಳನ್ನು ಮಾನ್ಯ ಮಾಡುತ್ತಿಲ್ಲ. ಈ ಪಕ್ಷದ ಸಿದ್ಧಾಂತಕ್ಕೆ ಎಲ್ಲ ಪ್ರಾದೇಶಿಕ ಚಹರೆಗಳ ಬಗ್ಗೆ ತಿರಸ್ಕಾರವಿದೆ’ ಎಂದು ಸಾಹಿತಿ ರಹಮತ್‌ ತರೀಕೆರೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT