ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗೀಶ್‌ಗೌಡ ಕೊಲೆ ಕೇಸ್: ನ್ಯಾಮಗೌಡರ ವಿರುದ್ಧದ ಪ್ರಕರಣ ರದ್ದುಗೊಳಿಸಲು ನಕಾರ

ಯೋಗೀಶ್‌ಗೌಡ ಗೌಡರ್ ಕೊಲೆ
Published 18 ಅಕ್ಟೋಬರ್ 2023, 20:01 IST
Last Updated 18 ಅಕ್ಟೋಬರ್ 2023, 20:01 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರಿ ಅಧಿಕಾರಿಯಾಗಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದವರನ್ನು ರಕ್ಷಿಸಲು ಕಾನೂನಿನಲ್ಲಿ ಅವಕಾಶವಿಲ್ಲ‘ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣದ 21ನೇ ಆರೋಪಿ ಸೋಮಶೇಖರ ನ್ಯಾಮಗೌಡರ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದೆ.

ಘಟನೆ ನಡೆದಿದ್ದ ವೇಳೆ ಅಂದು ಸಚಿವರಾಗಿದ್ದ ವಿನಯ ಕುಲಕರ್ಣಿ ಆಪ್ತ ಕಾರ್ಯದರ್ಶಿ ಸೋಮಶೇಖರ ನ್ಯಾಮಗೌಡರ (ಸದ್ಯ ತಿಪಟೂರಿನ ಎಪಿಎಂಸಿ ಕಾರ್ಯದರ್ಶಿ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಅರ್ಜಿದಾರರಿಗೆ ಕೊಲೆ ಸಂಚಿನ ಬಗ್ಗೆ ಅರಿವಿತ್ತು. ಇವರು ಸುಳ್ಳು ಪ್ರವಾಸ ಕಾರ್ಯಕ್ರಮ ಸಿದ್ದಪಡಿಸಿರುವುದು ಸಂಚಿನ ಭಾಗ. ಈ ಕೆಲಸವನ್ನು ಅವರು ಪ್ರಕರಣದ ಪ್ರಮುಖ ಆರೋಪಿಯಾದ ವಿನಯ್ ಕುಲಕರ್ಣಿ ಸೂಚನೆಯಂತೆ ಪಾಲಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಾರ್ವಜನಿಕ ಸೇವಕರಾಗಿ ತಮ್ಮ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ‘ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಆರೋಪವೇನು?

‘ಕೊಲೆ ಸಂದರ್ಭದಲ್ಲಿ ವಿನಯ ಕುಲಕರ್ಣಿ ಸಚಿವರಾಗಿದ್ದರು. ಅಂದು ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಸೋಮಶೇಖರ ನ್ಯಾಮಗೌಡ 2016ರ ಜೂನ್ 12 ರಂದು ವಿನಯ ಕುಲಕರ್ಣಿ ಅವರ ಸುಳ್ಳು ಪ್ರವಾಸ ಕಾರ್ಯಕ್ರಮ ಸೃಷ್ಟಿಸಿದ್ದರು. ಅವರ ಜತೆಗೆ ಅದೇ ದಿನ ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗಲು ತೆರಳುತ್ತಿರುವುದಾಗಿ ವಿಮಾನದ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದರು‘ ಎಂದು ಸಿಬಿಐ ಆರೋಪಿಸಿತ್ತು.

‘ನವದೆಹಲಿಯಲ್ಲಿನ ಸಭೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರಿಗೆ ಯಾವುದೇ ಮನವಿ ರವಾನೆಯಾಗಿರಲಿಲ್ಲ. ಈ ಸಂದರ್ಭದಲ್ಲಿ ಕೇಂದ್ರ ಸಚಿವರು ರಾಷ್ಟ್ರಮಟ್ಟದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಅಲಹಾಬಾದ್‌ಗೆ ಭೇಟಿ ನೀಡಿದ್ದರು‘ ಎಂದು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ವಿವರಿಸಿತ್ತು.

ಪ್ರಕರಣವೇನು?

ಯೋಗೀಶ್‌ಗೌಡ ಗೌಡರ್ ಕೊಲೆ 2016ರ ಜೂನ್‌ನಲ್ಲಿ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ನವೆಂಬರ್‌ನಲ್ಲಿ ವಿನಯ ಕುಲಕರ್ಣಿ ಅವರನ್ನು ಬಂಧಿಸಿ, ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಒಂಬತ್ತು ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT