ಬೆಂಗಳೂರು: ‘ಸಾವಿರಾರು ವರ್ಷಗಳಿಂದಲೂ ಸಾಮರಸ್ಯದಿಂದ ಇದ್ದ ಭಾರತವನ್ನು ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಬಿಜೆಪಿ-ಆರೆಸ್ಸೆಸ್ ಪರಿವಾರದ ಕಾರ್ಯಕರ್ತರು ಹಾಳುಗೆಡವಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಭಾರತೀಯ ಯುವ ಕಾಂಗ್ರೆಸ್ಸಿನ (ಐವೈಸಿ) ಮೂರು ದಿನಗಳ ರಾಷ್ಟ್ರೀಯ ಸಮಾವೇಶ ‘ಬೆಹ್ತರ್ ಭಾರತ್ ಕಿ ಬುನಿಯಾದ್’ (ಉತ್ತಮ ಭಾರತದ ಅಡಿಪಾಯ) ಅನ್ನು ಅರಮನೆ ಮೈದಾನದಲ್ಲಿ ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಮೋದಿ ಪ್ರಧಾನಿಯಾದ ಬಳಿಕ ಮಹಿಳೆಯರು, ದಲಿತರು, ಶೂದ್ರರು, ಅಲ್ಪಸಂಖ್ಯಾತರು, ಆದಿವಾಸಿ-ಬುಡಕಟ್ಟು ಸಮುದಾಯ ತಮ್ಮ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಮೋದಿ ಸರ್ಕಾರ ಶ್ರೀಮಂತ ಕಾರ್ಪೋರೇಟ್‌ಗಳ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡಿ, ಬಡವರು ತಿನ್ನುವ ಮಂಡಕ್ಕಿ, ಮೊಸರಿನ ಮೇಲೆ ತೆರಿಗೆ ವಿಧಿಸಿದೆ. ಇದನ್ನು ಯುವಸಮೂಹ ಬೀದಿ ಬೀದಿಯಲ್ಲಿ ಪ್ರಶ್ನಿಸಬೇಕು’ ಎಂದರು.
‘ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ. ಬೆಲೆ ಏರಿಕೆ ಕಾರಣದಿಂದ ಬಡವರು-ಮಧ್ಯಮ ವರ್ಗದವರು ಹೈರಾಣಾಗಿರುವ ಹೊತ್ತಲ್ಲೇ ಬಿಜೆಪಿಯ ದ್ವೇಷ ರಾಜಕಾರಣ ಇಡೀ ದೇಶವನ್ನು ಆವರಿಸುತ್ತಿದೆ. ನಾವು ದ್ವೇಷ ಅಳಿಸಿ ಪ್ರೀತಿಯ ಭಾರತವನ್ನು ಪುನರ್‌ನಿರ್ಮಿಸಲು ಈ ಸಮಾವೇಶ ಸಹಕಾರಿಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಪಕ್ಷದ ಭಾರತ್ ಜೋಡೊ ಘೋಷಣೆಯ ನಂತರ ಬೂತ್ ಜೋಡೊ ಕಾರ್ಯ ಆಗಬೇಕಿದೆ. ಬೂತ್ ಗೆದ್ದರೆ ಭಾರತವನ್ನು ಗೆದ್ದಂತೆ ಎಂಬುದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು. ಶಾಸಕ, ಸಂಸದ ಆಗಬೇಕು ಎನ್ನುವ ಮನೋಭಾವನೆ ಇಟ್ಟುಕೊಂಡು ಕೆಲಸ ಮಾಡಬೇಡಿ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಅಧಿಕಾರ ನಿಮ್ಮ ಬಳಿಗೇ ಬರುತ್ತದೆ’ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಸಲಹೆ ನೀಡಿದರು.
‘ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನೇತೃತ್ವದಲ್ಲಿ ‘ಇಂಡಿಯಾ’ ಒಗ್ಗಟ್ಟಾಗಿದೆ. ಈ ‘ಇಂಡಿಯಾ’ ಭಾರತವನ್ನು ರಕ್ಷಿಸಲಿದೆ. ನಾವು ಇಂಡಿಯಾವನ್ನು ರಕ್ಷಿಸುತ್ತೇವೆ. ಎಲ್ಲ ಆತಂಕಗಳಿಂದ ಹೊರಗೆ ತರುತ್ತೇವೆ ಎನ್ನುವ ವಿಶ್ವಾಸವಿದೆ’ ಎಂದರು.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ‘ಮುಂಬರುವ ಲೋಕಸಭೆ ಚುನಾವಣೆ ಬಿಜೆಪಿಯ ಸುಳ್ಳು ಮತ್ತು ಕಾಂಗ್ರೆಸ್‌ನ ಸತ್ಯದ ಮಧ್ಯದ ಯುದ್ಧ. ಯುದ್ಧದಲ್ಲಿ ಯಾವಾಗಲೂ ಸತ್ಯ ಗೆಲ್ಲುತ್ತದೆ’ ಎಂದರು.
ಸಚಿವ ಕೆ.ಜೆ. ಜಾರ್ಜ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹ್ಮದ್ ನಲಪಾಡ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜ್, ವಿವಿಧ ರಾಜ್ಯಗಳಿಂದ ಬಂದ 3 ಸಾವಿರಕ್ಕೂ ಹೆಚ್ಚು ಯುವ ಕಾಂಗ್ರೆಸ್ ಪ್ರತಿನಿಧಿಗಳು ಇದ್ದರು.
ಸಚಿನ್ ಪೈಲಟ್ ‘ಬಿಜೆಪಿಯ ಡಬಲ್ ಎಂಜಿನ್ ಒಂದೊಂದಾಗಿ ವಿಫಲಗೊಳ್ಳುತ್ತಿದೆ. ಕರ್ನಾಟಕದ ಜನ ದೇಶದ ರಾಜಕಾರಣವನ್ನೇ ಬದಲಾಯಿಸುವ ತೀರ್ಪು ನೀಡಿದ್ದಾರೆ. ಈ ತೀರ್ಪಿನಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಬಿಜೆಪಿ ಕಾರ್ಯಕರ್ತರಲ್ಲಿ ಆತಂಕ ಸೃಷ್ಟಿಯಾಗಿದೆ ಎಂದು ರಾಜಸ್ಥಾನದ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಹೇಳಿದರು. ರಾಜಸ್ಥಾನ ಛತ್ತೀಸಗಢ ಮಧ್ಯಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಲೋಕಸಭೆ ಚುನಾವಣೆಯಲ್ಲಿಯೂ ಜಯಭೇರಿ ಬಾರಿಸಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.