ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಒತ್ತುವರಿ: ಆನೆ ಪಥಗಳಿಗೆ ಕಂಟಕ

Last Updated 17 ಜೂನ್ 2011, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಅರಣ್ಯ ಒತ್ತುವರಿ ಹಾಗೂ ಜನವಸತಿ ಪ್ರದೇಶದ ಸಂಖ್ಯೆ ಹೆಚ್ಚಳದಿಂದಾಗಿ ಜಿಲ್ಲೆಯ ಮೂರು ಆನೆ ಪಥಗಳಿಗೆ ಕಂಟಕ ಎದುರಾಗಿದೆ.

ರಾಜ್ಯದಲ್ಲಿ ಒಟ್ಟು 9 ಆನೆ ಪಥಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಮೂರು ಪಥಗಳು ಜಿಲ್ಲೆಯ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದಲ್ಲಿವೆ. ಎಡೆಯರಹಳ್ಳಿ- ದೊಡ್ಡಸಂಪಿಗೆ, ಮೂಡಳ್ಳಿ ಹಾಗೂ ಪುಣಜನೂರು ಆನೆ ಪಥದ ಅಕ್ಕಪಕ್ಕದಲ್ಲಿ ಜನರು ಹಾಗೂ ಜಾನುವಾರು ಸಂಖ್ಯೆ ಹೆಚ್ಚುತ್ತಿದ್ದು, ಆನೆಗಳ ಮುಕ್ತ ಸಂಚಾರಕ್ಕೆ ಅಡ್ಡಿಯಾಗಿದೆ. ಅರಣ್ಯ ಒತ್ತುವರಿಯ ಪರಿಣಾಮ ಪಥಗಳ ವಿಸ್ತಾರವೂ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಇದು ಮಾನವ ಮತ್ತು ಆನೆಗಳ ನಡುವಿನ ಸಂಘರ್ಷಕ್ಕೂ ಕಾರಣವಾಗಿದೆ.

ಕಾವೇರಿ ವನ್ಯಜೀವಿಧಾಮ, ಮಲೆ ಮಹದೇಶ್ವರ ಬೆಟ್ಟ, ಬಿಆರ್‌ಟಿ ಹುಲಿ ರಕ್ಷಿತಾರಣ್ಯ, ಸತ್ಯಮಂಗಲ, ತಲಮಲೈಗೆ ಈ ಮೂರು ಪಥಗಳು ಸಂಪರ್ಕ ಕಲ್ಪಿಸುತ್ತವೆ. ಎಡೆಯರಹಳ್ಳಿ- ದೊಡ್ಡಸಂಪಿಗೆ ಆನೆ ಪಥದ ಸುತ್ತಮುತ್ತಲೂ ಸುಮಾರು 8 ಹಳ್ಳಿಗಳಿದ್ದು ಜನರು ಉರುವಲು, ಮೇವು ಇತ್ಯಾದಿಗೆ ಅರಣ್ಯದ ಅಕ್ಕಪಕ್ಕದ ಪ್ರವೇಶವನ್ನು ಒತ್ತುವರಿ ಮಾಡಿಕೊಂಡಿದ್ದಾರೆ.

ಮೂಡಳ್ಳಿ, ಪುಣಜನೂರು ಆನೆ ಪಥದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಈ ಎರಡು ಪಥಗಳ ಸುತ್ತಮುತ್ತ ಸುಮಾರು 14 ಹಳ್ಳಿಗಳಿವೆ. ಅರಣ್ಯ ಒತ್ತುವರಿಯಿಂದಾಗಿ ಆನೆಗಳ ಸಾಂಪ್ರದಾಯಿಕ ಪಥದ ಅಗಲ ಈಗ ಕೇವಲ ಒಂದೂವರೆ ಕಿ.ಮೀ.ಗೆ ಸೀಮಿತಗೊಂಡಿದೆ. ಜನರ ಮನ ಒಲಿಸುವುದರೊಂದಿಗೆ ಒತ್ತುವರಿ ಪ್ರದೇಶ ಗುರುತಿಸಿ ತೆರವುಗೊಳಿಸುವ ಮೂಲಕ ಆನೆ ಪಥ ಸಂರಕ್ಷಿಸುವ ಕಾರ್ಯಕ್ಕೆ ಅರಣ್ಯ ಇಲಾಖೆ ಇಂದಿಗೂ ಮುಂದಾಗಿಲ್ಲ ಎಂಬುದು ಜಿಲ್ಲೆಯ ಪರಿಸರವಾದಿಗಳ ಆರೋಪ.

ಅರಣ್ಯ ಇಲಾಖೆ ನಿರ್ಲಕ್ಷ್ಯ: 2007ರಲ್ಲಿ ಸ್ವಯಂಸೇವಾ ಸಂಸ್ಥೆಯಾದ ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾ ಎಡೆಯರಹಳ್ಳಿ- ದೊಡ್ಡಸಂಪಿಗೆ ಆನೆ ಪಥದ ಬಳಿ ಒತ್ತುವರಿ ಮಾಡಿಕೊಂಡಿದ್ದ 23 ಎಕರೆ ಭೂಮಿ ಖರೀದಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿತ್ತು.

ಇದರಿಂದಾಗಿ ಆನೆಗಳ ಸಂಚಾರಕ್ಕೆ ಮುಕ್ತ ಅವಕಾಶ ಸಿಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇಂದಿಗೂ ಈ ಪ್ರದೇಶದ ಪುನಶ್ಚೇತನಕ್ಕೆ ಮಾತ್ರ ಅರಣ್ಯ ಇಲಾಖೆ ಮುಂದಾಗಿಲ್ಲ. ಇದು ಆನೆ ಪ್ರಿಯರಿಗೆ ಅಸಮಾಧಾನ ತಂದಿದೆ.

ವಶಕ್ಕೆ ಪಡೆದಿರುವ ಭೂಮಿಯಲ್ಲಿ ಕಾಡು ಪ್ರಾಣಿಗಳನ್ನು ಆಕರ್ಷಿಸುವಂತಹ ಮರ ಬೆಳೆಸಿ ಅಭಿವೃದ್ಧಿಪಡಿಸುವುದು ಅರಣ್ಯ ಇಲಾಖೆಯ ಹೊಣೆ. ಪ್ರಸ್ತುತ ಅಂಥ ಯಾವುದೇ ಪ್ರಯತ್ನಕ್ಕೆ ಇಲಾಖೆ ಮುಂದಾಗಿಲ್ಲ. ಹೀಗಾಗಿ, ಆನೆ ಪಥಕ್ಕಾಗಿ ಹಸ್ತಾಂತರಿಸಿರುವ ಭೂಮಿ ಪಾಳು ಬಿದ್ದಿದೆ ಎನ್ನುವುದು ಪರಿಸರವಾದಿಗಳ ದೂರು.

`ಜಿಲ್ಲೆಯಲ್ಲಿರುವ ಆನೆ ಪಥಗಳ ಸುತ್ತಮುತ್ತ ಜನವಸತಿ ಹೆಚ್ಚುತ್ತಿದೆ. ಇದರ ಪರಿಣಾಮ ಸಾಂಪ್ರದಾಯಿಕ ಪಥಗಳು ಒತ್ತುವರಿಯಾಗಿವೆ. ಒತ್ತುವರಿ ತೆರವಿನೊಂದಿಗೆ ಅವುಗಳ ಪುನಶ್ಚೇತನಕ್ಕೆ ಮುಂದಾದರೆ ಆನೆಗಳು ಹಳ್ಳಿ ಹಾಗೂ ನಗರ ಪ್ರದೇಶಕ್ಕೆ ನುಗ್ಗುವುದನ್ನು ತಪ್ಪಿಸಲು ಸಾಧ್ಯವಾಗಲಿದೆ~ ಎನ್ನುತ್ತಾರೆ ಬಿಆರ್‌ಟಿ ಹುಲಿ ರಕ್ಷಿತಾರಣ್ಯದಲ್ಲಿ ಆನೆ ಪಥದ ಅಧ್ಯಯನ ನಡೆಸುತ್ತಿರುವ ಎಂ. ಪರಮೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT