ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಟಿಪಿಯಲ್ಲಿ ಸ್ಫೋಟ: ಮನೆಗಳಿಗೆ ಹಾನಿ

Last Updated 18 ಡಿಸೆಂಬರ್ 2018, 13:21 IST
ಅಕ್ಷರ ಗಾತ್ರ

ಮುಧೋಳ: ಇಲ್ಲಿನ ನಿರಾಣಿ ಶುಗರ್ಸ್‌ನ ಡಿಸ್ಟಿಲರಿ ಘಟಕದ ಎಫ್ಲ್ಯುಯೆಂಟ್ ಟ್ರೀಟ್‌ಮೆಂಟ್ ಪ್ಲಾಂಟ್‌ನಲ್ಲಿ (ಇಟಿಪಿ) ಭಾನುವಾರ ನಡೆದ ಸ್ಫೋಟದಿಂದಾಗಿ ಸಮೀಪದ ವಾಜಪೇಯಿ ಆಶ್ರಯ ಕಾಲೊನಿ 100ಕ್ಕೂ ಹೆಚ್ಚು ಮನೆಗಳ ಗೋಡೆ ಹಾಗೂ ಮೇಲ್ಛಾವಣಿಗಳು ಬಿರುಕುಬಿಟ್ಟಿವೆ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.

ಸ್ಫೋಟ ನಡೆದ ಸ್ಥಳದ ಅನತಿ ದೂರದಲ್ಲಿರುವ ವಾಜಪೇಯಿ ಆಶ್ರಯ ಕಾಲೊನಿಯ 350 ಮನೆಗಳಿವೆ. ಇದರಲ್ಲಿ ಸುಮಾರು ನೂರಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ ಹಾಗೂ ಗೋಡೆಗಳು ಹಾನಿಗೊಳಗಾಗಿವೆ. ಕೂಡಲೇ ಅವುಗಳನ್ನು ದುರಸ್ತಿ ಮಾಡಿಕೊಡಿ ಎಂದು ಅಲ್ಲಿನ ನಿವಾಸಿಗಳು ಸೇರಿ ನಗರಸಭೆ ವ್ಯವಸ್ಥಾಪಕಿ ಭಾರತಿ ಜೋಶಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಮೇಲಧಿಕಾರಿಗಳ ಗಮನಕ್ಕೆ ತಂದು ನೆರವಾಗುವುದಾಗಿ ಜೋಶಿ ಅವರಿಗೆ ಭರವಸೆ ನೀಡಿದರು.

ಈ ವೇಳೆ ಮಾತನಾಡಿದ ಕಾಲೊನಿಯ ನಿವಾಸಿ ಪೂಜಾ ಪತಂಗೆ, ‘ಅಂದು ಭಾರೀ ಸದ್ದಿನೊಂದಿಗೆ ಸ್ಫೋಟ ಸಂಭವಿಸಿತು. ಮನೆಗಳು ಕಂಪಿಸಿದವು. ನಾವು ಹೆದರಿ ಹೊರಗೆ ಓಡಿಬಂದೆವು. ಅದು ಕಾರ್ಖಾನೆಯಲ್ಲಿ ನಡೆದ ಸ್ಫೋಟ ಎಂದು ನಂತರ ಗೊತ್ತಾಯಿತು. ಆ ವೇಳೆ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಸ್ಲ್ಯಾಬ್, ಛಾವಣಿಗಳು ಹಾನಿಯಾಗಿವೆ. ಮೊದಲೇ ಅಷ್ಟೊಂದು ಗುಣಮಟ್ಟ ಇಲ್ಲದ ಮನೆಗಳು ಯಾವ ಗಳಿಗೆಯಲ್ಲಿ ಕುಸಿದು ಬೀಳುತ್ತವೆಯೋ ಎಂಬ ಭಯದಲ್ಲಿ ಜೀವ ಕೈಯಲ್ಲಿಡಿದು ಬದುಕುತ್ತಿದ್ದೇವೆ’ ಎಂದು ಆತಂಕ ತೋಡಿಕೊಂಡರು.

‘ಇಲ್ಲಿ ಕಡುಬಡವರೇ ವಾಸಿಸುತ್ತಿದ್ದೇವೆ. ನಗರಸಭೆಯವರು ಮನೆಗಳನ್ನು ದುರಸ್ತಿ ಮಾಡಿಕೊಟ್ಟು ಮುಂದಾಗುವ ಅನಾಹುತ ಈಗಲೇ ತಪ್ಪಿಸಲಿ’ ಎಂದು ಶೋಭಾ ಬಂಡಿವಡ್ಡರ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗಂಗವ್ವ ಚವ್ಹಾಣ, ಜೈರಾಬಿ ಬಾಗವಾನ, ಶಬಾನಾ ಮುಧೋಳ, ಮಹಾದೇವಿ ಬಂಡಿವಡ್ಡರ, ನೀಲಾಕ್ಷಿ ತಿಮ್ಮಾಪುರ, ದ್ರಾಕ್ಷಾಯಣಿ ಯರಗಟ್ಟಿ, ಗೀತಾ ಮಡಿವಾಳರ, ಜಾನವ್ವ ಚನ್ನದಾಸರ, ಮಹಾದೇವಿ ಸಾರವಾಡ, ಶಾಂತಾ ಮ್ಯಾಗೇರಿ, ಚಂದ್ರವ್ವ ಮಾಂಗ, ಮಹಾದೇವಿ ಗೌಳಿ, ಗಂಗೂಬಾಯಿ ಪಾಲನಕರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತನಿಖೆ ಮುಂದುವರಿಕೆ..

ಇಟಿಪಿಯಲ್ಲಿ ನಡೆದ ಸ್ಫೋಟ ಘಟನೆಯ ತನಿಖೆಯನ್ನು ಬೆಳಗಾವಿ ವಿಭಾಗದ ಬಾಯ್ಲರ್‌ಗಳ ಉಪನಿರ್ದೇಶಕ ರವೀಂದ್ರನಾಥ ರಾಥೋಡ್ ನೇತೃತ್ವದಲ್ಲಿ ತನಿಖೆ ನಡೆದಿದೆ. ’ಸ್ಫೋಟ ಘಟನೆಯ ಬಗ್ಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿರುವ ಕಾರಣ 24 ಗಂಟೆಯಲ್ಲಿ ಪ್ರಾಥಮಿಕ ವರದಿ ನೀಡಲು ಆಗುವುದಿಲ್ಲ. ಹೆಚ್ಚಿನ ಕಾಲಾವಧಿಗೆ ಅನುಮತಿ ಪಡೆದಿದ್ದೇವೆ. ಶೀಘ್ರ ಜಿಲ್ಲಾಡಳಿತಕ್ಕೆ ವರದಿ ನೀಡುವುದಾಗಿ’ ರವೀಂದ್ರನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT