ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಷ್ಟಪಟ್ಟು ತೃತೀಯಲಿಂಗಿಯಾದೆ’

‌ಪೊಲೀಸರು ನನ್ನ ಮಾತು ಕೇಳುತ್ತಿಲ್ಲ, ನನ್ನ ಭಾವನೆಯನ್ನು ಯಾರ ಬಳಿ ಹೇಳಿಕೊಳ್ಳಲಿ?
Last Updated 22 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಮಂಡ್ಯ: ‘ನಾನು ಇಷ್ಟಪಟ್ಟು ತೃತೀಯಲಿಂಗಿಯಾಗಿದ್ದೇನೆ. ಹೋಟೆಲ್‌ನಲ್ಲಿ ದುಡಿದು ಹಣ ಸಂಪಾದಿಸಿ ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ಆದರೆ ಪೊಲೀಸರು ವಿನಾಕಾರಣ ನನಗೆ ಕಿರುಕುಳ ಕೊಡುತ್ತಿದ್ದಾರೆ, ನನ್ನ ಮಾತು ಕೇಳುತ್ತಿಲ್ಲ. ನನ್ನ ಭಾವನೆಗಳನ್ನು ಯಾರ ಬಳಿ ಹೇಳಿಕೊಳ್ಳಲಿ’ ಎಂದು ಲೇಖನಾ ಅಳುತ್ತಾ ಪ್ರಶ್ನಿಸಿದರು.

ಕೆ.ಆರ್‌.ಪೇಟೆ ತಾಲ್ಲೂಕು ಅಕ್ಕಿಮಂಚನಹಳ್ಳಿ ಗ್ರಾಮದ ಬಾಲಕ ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ‘ಲೇಖನಾ’ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ‘ಪ್ರಜಾವಾಣಿ’ ಜೊತೆ ತಮ್ಮ ಮನಸ್ಸಿನ ಭಾವನೆ ಹಂಚಿಕೊಂಡಿದ್ದಾರೆ.

‘ಚಿಕ್ಕಂದಿನಿಂದಲೂ ಹುಡುಗಿಯಂತೆಯೇ ನಡೆಯುತ್ತಿದ್ದೆ. ಹೆಣ್ಣುಮಕ್ಕಳ ಜೊತೆಯಲ್ಲೇ ಇರುತ್ತಿದ್ದೆ. ಇದು ನಮ್ಮ ಊರಿನ ಎಲ್ಲರಿಗೂ ಗೊತ್ತು. ಶಾಲೆಯಲ್ಲಿದ್ದಾಗ ಶಿಕ್ಷಕಿಯರ ಬಳಿಯೂ ಹೇಳಿಕೊಂಡಿದ್ದೆ. ತಾಯಿ ಇಲ್ಲದ ಕಾರಣ ನನ್ನ ಭಾವನೆಗಳನ್ನು ಚಿಕ್ಕಮ್ಮನ ಬಳಿ ಹಂಚಿಕೊಳ್ಳುತ್ತಿದ್ದೆ’ ಎಂದು ತಿಳಿಸಿದರು.

‘ಮುಖಕ್ಕೆ ಕ್ರೀಂ, ಪೌಡರ್‌, ಲಿಪ್‌ಸ್ಟಿಕ್‌ ಹಾಕಿಕೊಂಡು ಕನ್ನಡಿ ಮುಂದೆ ನೋಡಿಕೊಳ್ಳುತ್ತಿದ್ದೆ. ಮಧ್ಯರಾತ್ರಿ ಸೀರೆ ಉಟ್ಟು ಹೊರಗೆ ಓಡಾಡುತ್ತಿದ್ದೆ. ಎಷ್ಟು ಬೇಗ ಹೆಣ್ಣಾಗುತ್ತೀನಿ ಎಂದು ಕನಸು ಕಾಣುತ್ತಿದ್ದೆ. ಬೆಂಗಳೂರಿಗೆ ತೆರಳಿದ ನಂತರ ತೃತೀಯಲಿಂಗಿಯರನ್ನು ಪರಿಚಯಿಸಿಕೊಂಡೆ. ಆದರೆ ಅವರು ನನಗೆ ಶಸ್ತ್ರಚಿಕಿತ್ಸೆ ಮಾಡಿಸಲು ನಿರಾಕರಿಸಿದರು. ಅವರು ಮಾತನಾಡುವಾಗ ಬೆಂಗಳೂರಿನ ಶಿವಂ ವಿಶ್ವ ಆಸ್ಪತ್ರೆಯ ಹೆಸರು ಕೇಳಿದ್ದೆ. ನಂತರ ಇಂಟರ್‌ನೆಟ್‌ನಲ್ಲಿ ಆಸ್ಪತ್ರೆಯ ಮಾಹಿತಿ ಪಡೆದು ಅಲ್ಲಿಗೆ ತೆರಳಿ, ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಒಂದು ವರ್ಷ ಹೋಟೆಲ್‌ನಲ್ಲಿ ಎರಡು ಪಾಳಿಯಲ್ಲಿ ಕೆಲಸ ಮಾಡಿ ಸಂಪಾದಿಸಿದ ಹಣವನ್ನು ಶಸ್ತ್ರ ಚಿಕಿತ್ಸೆಗೆ ಬಳಸಿದೆ’ ಎಂದು ಹೇಳಿದರು.

‘ನಾನು ಮಂಡ್ಯದಲ್ಲೇ ಇದ್ದೇನೆ. ಎಲ್ಲೂ ಓಡಿ ಹೋಗಿಲ್ಲ. ನನ್ನ ಭಾವನೆಗಳನ್ನು ಗೌರವಿಸಿ. ನಮ್ಮ ಪಾಡಿಗೆ ಬದುಕಲು ಬಿಡಿ. ತಾಯಿ ಇಲ್ಲ, ತಂಗಿಯ ಮದುವೆ ಮಾಡಬೇಕು. ಬುದ್ಧಿಮಾಂದ್ಯ ತಂದೆಗೆ ಚಿಕಿತ್ಸೆ ಕೊಡಿಸಿ, ಅಜ್ಜಿಯನ್ನು ನೋಡಿಕೊಳ್ಳಬೇಕು. ನಾನು ತೃತೀಯಲಿಂಗಿಯಾಗಿಯೇ ಅವರ ಕಷ್ಟಸುಖ ನೋಡಿಕೊಳ್ಳುತ್ತೇನೆ’ ಎಂದರು.

ವೈದ್ಯೆಗಾಗಿ ಹುಡುಕಾಟ

ಬಾಲಕನಿಗೆ ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿದ ಆರೋಪದ ಮೇಲೆ ಪೊಲೀಸರು ಬೆಂಗಳೂರಿನ ಶಿವಂ ವಿಶ್ವ ಆಸ್ಪತ್ರೆ ವೈದ್ಯೆ ಅನಿತಾ ಪಾಟೀಲ್‌ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ.

‘16 ವರ್ಷ ವಯಸ್ಸಿನ ಬಾಲಕನಿಗೆ ಲಿಂಗಪರಿವರ್ತನೆ ಮಾಡಿರುವುದು ವೈದ್ಯೆಯ ತಪ್ಪು. ವಯಸ್ಸಿನ ದಾಖಲೆ ಇಲ್ಲದೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ನೂರಾರು ಮಂದಿಗೆ ಹೀಗೆಯೇ ಮಾಡಿದ್ದಾರೆ ಎಂಬ ಆರೋಪ ಇರುವುದರಿಂದ ಬಂಧಿಸಿ ವಿಚಾರಣೆ ನಡೆಸಬೇಕಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT