ಸತ್ತೂರು (ಧಾರವಾಡ): ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಸ್ಥಾಪನೆಯಾಗಿ ನೂರು ವರ್ಷ ತುಂಬಿದ ಅಂಗವಾಗಿ ವರ್ಷಪೂರ್ತಿ ನಡೆಯಲಿರುವ ಕಾರ್ಯಕ್ರಮಕ್ಕೆ ಭಾನುವಾರ ಇಲ್ಲಿನ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ವಿಧ್ಯುಕ್ತ ಚಾಲನೆ ನೀಡಲಾಯಿತು.

ರಾಜ್ಯದ ಮೂಲೆ ಮೂಲೆಗಳಿಂದ ಮತ್ತು ಹೊರರಾಜ್ಯಗಳಿಂದಲೂ ಬಂದಿದ್ದ ಸಾಹಿತ್ಯಾಸಕ್ತರು ಉತ್ತರ ಕರ್ನಾಟಕದ ಕರಡಿ ಮಜಲಿನ ಝೇಂಕಾರಕ್ಕೆ ಮನಸೋತರು. ನಾಡಗೀತೆಯ ಮಾಧುರ್ಯ ಅವರ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು. ಹೀಗಾಗಿ ಸುಂದರ ಸಭಾಂಗಣದಲ್ಲಿ ಕನ್ನಡಾಭಿಮಾನಿಗಳ ಜಯಘೋಷ ಮುಗಿಲು ಮುಟ್ಟಿತ್ತು. ಇಂಥ ಸಡಗರದ ವಾತಾವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಕಾರ್ಯಕ್ರಮ ಉದ್ಘಾಟಿಸಿದರು.

25 ಕೃತಿಗಳ ಲೋಕಾರ್ಪಣೆ, ದ್ರಾವಿಡ ಭಾಷಾ ಜ್ಞಾತಿಪದ ಕೋಶ, ಪರಿಷತ್ತಿನ ಸಾಕ್ಷ್ಯಚಿತ್ರ, ಅಂಚೆಚೀಟಿ–ಲಕೋಟೆ ಬಿಡುಗಡೆ, ಭಾಷೆ–ಸಂಸ್ಕೃತಿಗಾಗಿ ದುಡಿದವರಿಗೆ ಸನ್ಮಾನ ಉದ್ಘಾಟನಾ ಸಮಾರಂಭದ ಮೆರುಗು ಹೆಚ್ಚಿಸಿತು.

‘ಕನ್ನಡದ ಕೆಲಸಕ್ಕಾಗಿ ಕಸಾಪ ಯಾರ ಮುಂದೆಯೂ ಕೈಚಾಚುವ ಪರಿಸ್ಥಿತಿ ಇರಬಾರದು. ಹೀಗಾಗಿ ನೂರು ವರ್ಷ ತುಂಬಿದ ನೆನಪಿಗಾಗಿ ಸ್ಥಾಪಿಸುವ ಶಾಶ್ವತ ನಿಧಿಗೆ ಉದಾರ ದೇಣಿಗೆ ನೀಡಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯನ್ನು ಆರ್ಥಿಕವಾಗಿ ಗಟ್ಟಿಗೊಳಿಸಬೇಕು’ ಎಂದು ಮನವಿ ಮಾಡಿದ ಉಮಾಶ್ರೀ, ‘ಕನ್ನಡದ ಕೆಲಸಕ್ಕೆ ಕೈ ಜೋಡಿಸಲು ಸರ್ಕಾರ ಸದಾ ಬದ್ಧವಾಗಿದೆ’ ಎಂದು ಭರವಸೆ ನೀಡಿದರು.

ಕೃತಿಗಳ ಲೋಕಾರ್ಪಣೆ ಮಾಡಿದ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ‘ಕನ್ನಡಿಗರು ಹೃದಯ ವೈಶಾಲ್ಯ ಮೆರೆದು ನಾಡಿನ ಹಿರಿಮೆಯನ್ನು ಪ್ರದರ್ಶಿಸಬೇಕು’ ಎಂದರು. ‘ರಾಜ್ಯದಲ್ಲಿ ಪುಸ್ತಕ ಸಂಸ್ಕೃತಿ ಬೆಳೆಯಬೇಕಾಗಿದೆ’ ಎಂದು ಆಶಿಸಿದ ಅವರು ‘ಪ್ರಾಚೀನತೆಯ ಜ್ಞಾನ, ಮಧ್ಯಕಾಲೀನ ಮಾಹಿತಿ, ಆಧುನಿಕ ವಿಜ್ಞಾನವನ್ನು ತಿಳಿದುಕೊಂಡು ಕನ್ನಡಿಗರು ಚತುರಮತಿಗಳಾಗಬೇಕು, ಗುಣವಂತರಾಗಬೇಕು’ ಎಂದರು.

ದ್ರಾವಿಡ ಭಾಷಾ ಜ್ಞಾತಿಪದ ಕೋಶ ಬಿಡುಗಡೆ ಮಾಡಿದ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ, ‘ಸಂಸ್ಕೃತದ ವ್ಯಾಮೋಹದಿಂದಾಗಿ ದ್ರಾವಿಡ ಪದಗಳ ನಡುವಣ ಸಂಬಂಧ ಮರೆಯಲಾಗುತ್ತಿದೆ. ದ್ರಾವಿಡ ಭಾಷೆಯ ಪದಗಳನ್ನು ಬಳಸಿಕೊಂಡು ಹೊಸ ಶಬ್ದಗಳ ಸೃಷ್ಟಿಗೆ ಕನ್ನಡಿಗರು ಮುಂದಾಗಬೇಕು. ಶಾಸ್ತ್ರೀಯ ಭಾಷಾ ಕೇಂದ್ರ ಸ್ಥಾಪಿಸಲು ಸರ್ಕಾರ ಬೇಗ ಕಾರ್ಯಕ್ರಮ ಹಮ್ಮಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ಕನ್ನಡ ಬೆಳೆದು ಬಂದ ಬಗೆಯನ್ನು ವರ್ಣಿಸುವ ಸಾಕ್ಷ್ಯಚಿತ್ರವನ್ನು ಕವಿ ಚೆನ್ನವೀರ ಕಣವಿ ಬಿಡುಗಡೆ ಮಾಡಿದರು. ‘ಕಸಾಪ ಶತಮಾನೋತ್ಸವ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಶಾಲೆಗಳಲ್ಲಿ ಆಚರಿಸುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಬೇಕು’ ಎಂದು ಆಗ್ರಹಿಸಿದ ಅವರು ಗಡಿ ಸಮಸ್ಯೆ ಕುರಿತು ಕಾಳಜಿ ವಹಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದರು.

ಗಡಿಗಳಲ್ಲಿ ವಿಚಾರಗೋಷ್ಠಿ: ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ, ‘ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಗಡಿ ಜಿಲ್ಲೆಗಳಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುವುದು’ ಎಂದರು.

‘ವಚನ ಸಾಹಿತ್ಯ ಕುರಿತು ಬೀದರ್‌ನಲ್ಲಿ, ಕರಾವಳಿ ಕನ್ನಡ ಕುರಿತು ಕಾರವಾರದಲ್ಲಿ, ದಲಿತ ಸಾಹಿತ್ಯದ ಕುರಿತು ಚಾಮರಾಜನಗರದಲ್ಲಿ, ಗಡಿನಾಡ ಕನ್ನಡ ಕುರಿತು ಕೋಲಾರದಲ್ಲಿ ಮತ್ತು ಮಹಿಳಾ ಸಾಹಿತ್ಯ ಕುರಿತು ಬೆಳಗಾವಿಯಲ್ಲಿ ತಲಾ ಎರಡು ದಿನಗಳ ವಿಚಾರ ಸಂಕಿರಣ ನಡೆಸಲಾಗುವುದು’ ಎಂದು ಅವರು ವಿವರಿಸಿದರು.

ಚನ್ನವೀರ ಕಣವಿ, ಸಾಹಿತಿಗಳಾದ ಮಾಲತಿ ಪಟ್ಟಣಶೆಟ್ಟಿ, ವೀಣಾ ಶಾಂತೇಶ್ವರ, ಸುಕನ್ಯಾ ಮಾರುತಿ, ಪ್ರಹ್ಲಾದ ಅಗಸನಕಟ್ಟೆ, ಪ್ರೊ.ಐ.ಜಿ. ಸನದಿ, ಸಾಮಾಜಿಕ ಕಾರ್ಯಕರ್ತ ಡಾ.ಸಂಜೀವ ಕುಲಕರ್ಣಿ ಹಾಗೂ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ನ.ವಜ್ರಕುಮಾರ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.