ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಭ ಮೆರವಣಿಗೆಗೆ ಕಪ್ಪುಪಟ್ಟಿ ವಿರೋಧ: ಪೊಲೀಸರ ಸಂಧಾನ!

Last Updated 4 ಜನವರಿ 2019, 20:23 IST
ಅಕ್ಷರ ಗಾತ್ರ

ಧಾರವಾಡ: ಪ್ರಗತಿರರ ವಿರೋಧದ ನಡುವೆಯೂ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆ ನಡೆಯಿತು.

ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಪೂರ್ಣಕುಂಭ ಮೆರವಣಿಗೆ ವಿರೋಧಿಸಿ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನು ಬಳಿಗಾರ ಅವರಿಗೆ ಪತ್ರ ಬರೆದು, ಪೂರ್ಣಕುಂಭ ಮೆರವಣಿಗೆ ಕೈಬಿಡಬೇಕೆಂದು ಕೋರಿತ್ತು.

ಸಮ್ಮೇಳನದಲ್ಲಿ ಪೂರ್ಣಕುಂಭ ಮೆರವಣಿಗೆ ನಡೆಸಿದ್ದನ್ನು ವಿರೋಧಿಸಿ ಒಕ್ಕೂಟದ ಕಾರ್ಯಕರ್ತೆಯರು ಕೈಗಳಿಗೆ ಕಪ್ಪುಪಟ್ಟಿ ಧರಿಸಿ ವಿರೋಧ ವ್ಯಕ್ತಪಡಿಸಿದರು. ಈ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಒಕ್ಕೂಟದ ಪುಸ್ತಕ ಮಳಿಗೆಗೆ ಧಾವಿಸಿ, ಕಪ್ಪುಪಟ್ಟಿ ಧರಿಸಿರುವುದನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸುನಂದಾ, ‘ಕನಿಷ್ಠ ಮುಂದಿನ ಸಮ್ಮೇಳನದಲ್ಲಾದರೂ ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆ ಆಗದಿರಲಿ. ಸಾಹಿತ್ಯ ಸಮ್ಮೇಳನ ಯಾವುದೇ ಒಂದು ಜಾತಿ, ಧರ್ಮದ ಸಮ್ಮೇಳನವಲ್ಲ. ಇದು ಎಲ್ಲಾ ಜಾತಿ, ಧರ್ಮದವರಿಗೆ ಸೇರಿದ್ದು. ಈ ಬಗ್ಗೆ ಮೊದಲೇ ಗಮನಕ್ಕೆ ತಂದಿದ್ದರೂ ಕಂಬಾರರು ಲಕ್ಷ್ಯಕೊಡಲಿಲ್ಲ. ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಡಿ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ಇದು ಪರಿಷತ್ತಿನ ಅಸೂಕ್ಷ್ಮತೆಯನ್ನು ತೋರಿಸುತ್ತದೆ’ ಎಂದರು.

ಒಕ್ಕೂಟದ ಕಾರ್ಯಕರ್ತೆ ಶಾರದಾ ಗೋಪಾಲ ಪ್ರತಿಕ್ರಿಯಿಸಿ, ‘ಪೂರ್ಣಕುಂಭ ಮೆರವಣಿಗೆ ಅರ್ಥವಿಲ್ಲದ್ದು’ ಎಂದರು.

ಸಾಹಿತಿ ಡಾ.ವಿನಯಾ ಒಕ್ಕುಂದ ಮಾತನಾಡಿ, ‘ಈ ಹಿಂದೆ ಕುವೆಂಪು, ಶಾಂತರಸರು ಪೂರ್ಣಕುಂಭ ಮೆರವಣಿಗೆ ಬೇಡವೆಂದಿದ್ದರು. ಕಂಬಾರರು ಅದನ್ನು ಪಾಲಿಸಬಹುದಿತ್ತು. ಸ್ಕಂದ ಪುರಾಣದಲ್ಲಿ ಪೂರ್ಣಕುಂಭದ ಉಲ್ಲೇಖವಿದೆಯೆಂದು ಸಂಸ್ಕೃತ ವಿದ್ವಾಂಸರಾದ ಜಿ.ರಾಮಕೃಷ್ಣ ಮತ್ತು ಬಿ.ಎನ್.ಸುಮಿತ್ರಾ ಬಾಯಿ ಹೇಳಿದ್ದಾರೆ. ವೈದಿಕಷಾಹಿಯ ಆಚರಣೆಯಾಗಿ ಇಂದಿಗೂ ಇಂಥ ಮೆರವಣಿಗೆ ಉಳಿಸಿಕೊಂಡು ಬರಲಾಗಿದೆ. ವಿಧವೆಯರನ್ನು, ತೃತೀಯಲಿಂಗಿಗಳನ್ನು ಸೇರಿಸಿಕೊಂಡಾಕ್ಷಣ ಈ ತಪ್ಪು ಸರಿಪಡಿಸಲಾಗದು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಲೀ, ಸಮ್ಮೇಳನಾಧ್ಯಕ್ಷರಾಗಲೀ ನಿರ್ಣಯ ಕೈಗೊಂಡು ಇದನ್ನು ತಡೆಬಹುದಿತ್ತು’ ಎಂದು ಅಭಿಪ್ರಾಯಪಟ್ಟರು.

ವಿರೋಧಿಸಿದ್ದು ಗೊತ್ತೇ ಇಲ್ಲ!

ಪೂರ್ಣಕುಂಭ ಮೆರವಣಿಗೆಗೆ ವಿರೋಧ ವ್ಯಕ್ತಪಡಿಸಿದ್ದು ನಮಗೆ ಗೊತ್ತೇ ಇಲ್ಲ ಎಂದು ಮೆರವಣಿಗೆರೆಯಲ್ಲಿ ಭಾಗವಹಿಸಿದ್ದ ಮಹಿಳೆಯರಾದ ಕವಿತಾ, ಮಂಜುಳಾ ಮತ್ತು ಗೌರಮ್ಮ ತಿಳಿಸಿದರು.

‘ನಾವು ಸ್ವಂತ ವಿಚಾರದಿಂದಲೇ ಇಲ್ಲಿಗೆ ಬಂದಿದ್ದೇವೆ. ನಮ್ಮೂರಿಗೆ ಎಷ್ಟೋ ವರ್ಷಗಳ ನಂತರ ಸಮ್ಮೇಳನ ಬಂದಿದೆ ಅನ್ನೋ ಕಾರಣಕ್ಕೆ ಪೂರ್ಣಕುಂಭ ಮೆರವಣಿಗೆಯಲ್ಲಿ ಭಾಗವಹಿಸಿದೆವು. ಬೆಳಿಗ್ಗೆ 6.15ರಿಂದಲೇ ಸಿದ್ಧತೆ ನಡೆಸಿದೆವು. 11.45ರ ತನಕ ಮೆರವಣಿಗೆಯಲ್ಲಿ ಪಾಲ್ಗೊಂಡೆವು. ಅವರೇ ಸೀರೆ, ಮಣ್ಣಿನ ಮಡಿಕೆ, ಅಕ್ಕಿ, ತೆಂಗಿನಕಾಯಿ, ಎಲೆ ಅಡಿಕೆ ಕೊಟ್ಟಿದ್ದಾರೆ’ ಎಂದು ವಿವರಿಸಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT