ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದ್ರೋಳಿ ಕಸಾಯಿಖಾನೆ ಅಭಿವೃದ್ಧಿ ವಿವಾದ: ಪ್ರಧಾನಿ ಸಲಹೆ ಕೋರಿದ ಖಾದರ್‌

Last Updated 16 ಅಕ್ಟೋಬರ್ 2018, 13:46 IST
ಅಕ್ಷರ ಗಾತ್ರ

ಮಂಗಳೂರು: ಸ್ಮಾರ್ಟ್‌ ಸಿಟಿ ಯೋಜನೆಯಡಿ ಕುದ್ರೋಳಿ ಕಸಾಯಿಖಾನೆ ಆಧುನೀಕರಣಗೊಳಿಸುವ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಹೇಗೆ ಮುಂದುವರಿಯಬೇಕೆಂದು ಸಲಹೆ ಕೋರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್‌ದೀಪ್‌ ಸಿಂಗ್ ಪುರಿ ಅವರಿಗೆ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಪತ್ರ ಬರೆದಿದ್ದಾರೆ.

ಸ್ಮಾರ್ಟ್‌ ಸಿಟಿ ಮಾರ್ಗಸೂಚಿಗಳ ಅಡಿಯಲ್ಲಿ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನ ಕೂಡ ಈ ಪ್ರಸ್ತಾವಕ್ಕೆ ಮುಖ್ಯ ಕಾರಣ. ಮಂಗಳೂರು ಬಹುಸಂಸ್ಕೃತಿಯ ಜನರು ವಾಸಿಸುತ್ತಿರುವ ನಗರ. ಇಲ್ಲಿನ ಜನರಿಗೆ ಶುಚಿಯಾದ ಮಾಂಸ ಲಭ್ಯವಾಗಬೇಕಿದೆ. ಕಸಾಯಿಖಾನೆಯಿಂದ ನಗರದ ನದಿ ಮತ್ತು ಸಮುದ್ರ ಮಲಿನವಾಗದಂತೆ ತಡೆಯುವ ಉದ್ದೇಶವೂ ಈ ಪ್ರಸ್ತಾವದ ಹಿಂದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಈ ಪ್ರಸ್ತಾವಕ್ಕೆ ಮಂಗಳೂರು ಸ್ಮಾರ್ಟ್‌ ಸಿಟಿ ವಿಶೇಷ ವಾಹಕ ಒಪ್ಪಿಗೆ ನೀಡಿದೆ. ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತಮಟ್ಟದ ಸಮಿತಿಯೂ ಅನುಮೋದನೆ ನೀಡಿದೆ. ಆ ಬಳಿಕ ಒಂದು ಗುಂಪಿನ ಜನರು ಮತ್ತು ಕೆಲವು ಸಂಘಟನೆಗಳಿಂದ ತಪ್ಪು ಮಾಹಿತಿ ಪ್ರಸಾರವಾಗುತ್ತಿದೆ. ಈಗಾಗಲೇ ಅನುಮೋದನೆಗೊಂಡಿರುವ ಕಾಮಗಾರಿಯನ್ನು ವಿರೋಧಿಸುತ್ತಿರುವ ಈ ಗುಂಪು, ಸ್ಮಾರ್ಟ್‌ ಸಿಟಿ ಯೋಜನೆಯಡಿ ಗೋಶಾಲೆ ತೆರೆಯುವಂತೆ ಒತ್ತಾಯಿಸುತ್ತಿದೆ. ಇದರಿಂದ ಬಿಕ್ಕಟ್ಟು ಸೃಷ್ಟಿಯಾಗುತ್ತಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

‘ರಾಜ್ಯದ ನಗರಾಭಿವೃದ್ಧಿ ಸಚಿವ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವನಾಗಿರುವ ನಾನು ಈ ವಿಚಾರದಲ್ಲಿ ಕೆಲವು ಸಂಘಟನೆಗಳ ವಿರೋಧದಿಂದ ಮುಜುಗರ ಎದುರಿಸುವಂತಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವುದಕ್ಕೂ ಅಡಚಣೆ ಉಂಟಾಗಿದೆ’ ಎಂದಿದ್ದಾರೆ.

‘ಸ್ಮಾರ್ಟ್‌ ಸಿಟಿ ಯೋಜನೆಯಡಿ ಗೋಶಾಲೆ ತೆರೆಯುವಂತೆ ಕೆಲವು ಚುನಾಯಿತ ಪ್ರತಿನಿಧಿಗಳೂ ಒತ್ತಾಯಿಸುತ್ತಿದ್ದಾರೆ. ಈ ವಿಚಾರದಲ್ಲಿ ನಿಮ್ಮ ಅಭಿಪ್ರಾಯ ಅತ್ಯಮೂಲ್ಯವಾದುದು. ನಿಮ್ಮ ಸಲಹೆಯಂತೆ ಮುನ್ನಡೆಯಲು ನಾನು ಸಿದ್ಧ. ಈ ವಿಚಾರದಲ್ಲಿ ಯಾವುದೇ ತಕರಾರು ಇಲ್ಲ. ಆದಷ್ಟು ಬೇಗನೆ ನಿಮ್ಮ ಸಲಹೆ ಮತ್ತು ಮಾರ್ಗದರ್ಶನ ನೀಡಿದರೆ ಈಗ ಎದುರಾಗಿರುವ ಗೊಂದಲಕ್ಕೆ ತೆರೆ ಎಳೆಯಬಹುದು’ ಎಂದು ಖಾದರ್‌ ಅವರು ಪ್ರಧಾನಿಗೆ ಮನವಿ ಮಾಡಿದ್ದಾರೆ.

ಆ ಬಳಿಕ ಕೆಲವು ಚುನಾಯಿತ ಪ್ರತಿನಿಧಿಗಳೇ ವಿರೋಧ ಮಾಡುತ್ತಿದ್ದಾರೆ. ಈ ಕಾರಣದಿಂದ ಹೇಗೆ ಮುಂದುವರಿಯಬೇಕು ಎಂಬುದಾಗಿ ಸಲಹೆ ನೀಡುವಂತೆ ಪ್ರಧಾನಿ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವರನ್ನು ಕೋರಲಾಗಿದೆ. ಅವರ ಸಲಹೆಯಂತೆ ಮುಂದಿನ ‍ಪ್ರಕ್ರಿಯೆ ನಡೆಸಲಾಗುವುದು ಎಂದು ಹೇಳಿದರು.

ಪತ್ರ ಬರೆದಿರುವ ವಿಚಾರವನ್ನು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಸಚಿವರು, ಕಸಾಯಿಖಾನೆ ಆಧುನೀಕರಣ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಅದನ್ನು ವಿರೋಧಿಸುವವರು ಯಾವುದೇ ಆರೋಪ ಮಾಡಿದರೆ ಯಾರೂ ಪ್ರತಿಕ್ರಿಯಿಸಬಾರದು. ಈ ವಿಚಾರವನ್ನು ಮುಂದಿಟ್ಟುಕೊಂಡು ಜಿಲ್ಲೆಯ ಜನರ ನಡುವೆ ದ್ವೇಷ ಬಿತ್ತುವುದನ್ನು ತಾವು ಬಯಸುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT