ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜತೆಯಾಗಿ ಹಾಡಿದ ಗೆಳೆಯ ಇನ್ನಿಲ್ಲ...

Last Updated 6 ಜನವರಿ 2017, 19:30 IST
ಅಕ್ಷರ ಗಾತ್ರ
ಆತನದು ಮಗುವಿನಂತಹ ಅಪ್ಪಟ ನೈಜ ಮನಸು. ಮುಖದಲ್ಲಿನ ಗಾಂಭೀರ್ಯ, ಸಿಡುಕುತನವನ್ನು ಆರೋಪಿಸುವ ಲಕ್ಷಣದಾಚೆ ಆತನಿಗಿದ್ದದ್ದು ತನ್ನ ಸುತ್ತಲಿನವರಿಗೆ ಸ್ಪಂದಿಸುವ ಹೆಂಗರುಳು. ಶಿಸ್ತು ಮತ್ತು ಸಮಯ ಪರಿಪಾಲನೆ ಬಳುವಳಿಯಾಗಿ ಬಂದಿದ್ದವು. ಬದುಕನ್ನು ಹೇಗೆ ಸ್ವೀಕರಿಸಬೇಕು ಮತ್ತು ಎದುರಿಸಬೇಕು ಎನ್ನುವುದಕ್ಕೆ ಮಾದರಿಯಾಗಿದ್ದವನು. ನಟನಾಗಿ ಆತ ಮೇರು ಪ್ರತಿಭೆ. ಅತಿ ಸೂಕ್ಷ್ಮ ಸಂವೇದನೆಯ ಕಲಾವಿದ. ನಾನು, ಜ್ಯೋತಿ ದೇಶಪಾಂಡೆ ಇಬ್ಬರೂ ಆತನ ಜತೆ ಕುಳಿತು ಹರಟುತ್ತಾ, ಜೋರಾಗಿ ಹಾಡುತ್ತಿದ್ದೆವು. ಇನ್ನು ಅವನಿಲ್ಲ. ನಾನು ಜ್ಯೋತಿ ಇಬ್ಬರೇ ಹಾಡಬೇಕು...
 
1973ನೇ ಇಸವಿ ಅದು. ಆಗತಾನೆ ರಾಷ್ಟ್ರೀಯ ನಾಟಕ ಶಾಲೆಗೆ (ಎನ್‌ಎಸ್‌ಡಿ) ಕಾಲಿಟ್ಟಿದ್ದೆವು. ನಾನು ಕನ್ನಡತಿ. ಹಿಂದಿ ಬರುತ್ತಿರಲಿಲ್ಲ. ಮರಾಠಿ ಮೂಲದ ಜ್ಯೋತಿ ದೇಶಪಾಂಡೆಗೂ ಹಿಂದಿ ಅಷ್ಟಕಷ್ಟೆ. ಪಂಜಾಬ್‌ನಿಂದ ಬಂದಿದ್ದವನು ಓಂ ಪುರಿ. ಆತನಿಗೆ ಇಂಗ್ಲಿಷ್‌ ಭಾಷೆಯ ಜ್ಞಾನ ಇರಲಿಲ್ಲ. ನಮ್ಮ ನಡುವೆ ನಾಸಿರುದ್ದಿನ್ ಷಾ ಅವರಂತಹ ಮೇರು ಪ್ರತಿಭೆಯೂ ಇತ್ತು. ಆಶಾ ಕಸ್ಬೇಕರ್‌, ಛಾಯಾ ಆನಂದ್‌, ಬನ್ಸಿ ಕೌಲ್‌, ರಾಜನ್ ಸಬರ್‌ವಾಲ್‌, ಭಾನು ಭಾರತಿ ಮುಂತಾದವರು ನಮ್ಮೊಂದಿಗೆ ಎನ್‌ಎಸ್‌ಡಿ ಒಳಕ್ಕೆ ಕಾಲಿಟ್ಟವರು.
 
ಭಾಷೆಯ ತೊಡಕು ನಮಗಿದ್ದ ದೊಡ್ಡ ಸವಾಲು. ಆ ಪರಿಸರವೂ ಹೊಸತು.  ತಿಳಿವಳಿಕೆ ಇಲ್ಲದಿದ್ದರೂ ಕಲಿಯಬೇಕೆಂಬ ಹಠ ನಮ್ಮಲ್ಲಿತ್ತು. ನನಗೆ, ನಳಿನಿಗೆ ಹಿಂದಿ ಕಲಿಸಿದ್ದೇ ಓಂ ಪುರಿ ಮತ್ತು ನಾಸಿರುದ್ದಿನ್. ಹಿಂದಿ ಪತ್ರಿಕೆಗಳನ್ನು ಓದಿ ಎಂದು ನಮ್ಮೆದುರು ಇರಿಸುತ್ತಿದ್ದರು. 
 
ಅಪರೂಪದ ಪ್ರತಿಭೆಗಳ ಸಂಗಮವದು. ನಮ್ಮ ಬ್ಯಾಚ್‌ನ ಬಹುತೇಕರಲ್ಲಿ ಆಗ ಹಿಂಜರಿಕೆ ಇತ್ತು. ಮುನ್ನುಗ್ಗುವ ಧೈರ್ಯವಿರಲಿಲ್ಲ. ಓಂ ಪುರಿಯನ್ನು ಸಹ ಕೀಳರಿಮೆ ಕಾಡುತ್ತಿತ್ತು. ಆದರೆ, ಸಾಧಿಸುವ ಛಲವಿತ್ತು. ಓದು, ಕಲಿಕೆ, ಅಭ್ಯಾಸ, ಹರಟೆ, ತಮಾಷೆ... ಎಷ್ಟು ಅದ್ಭುತವಾಗಿದ್ದವು ಆ ದಿನಗಳು? ಅವರೆಲ್ಲರೂ ವಿಶಿಷ್ಟ ಗೆಳೆಯರು. 
ಎನ್‌ಎಸ್‌ಡಿ ಸೇರಿದ ಕೆಲವು ದಿನಗಳ ಬಳಿಕ ಓಂ ಮತ್ತು ನಾಸಿರುದ್ದಿನ್ ಅವರು ಪುಣೆಯ ಫಿಲಂ ಇನ್‌ಸ್ಟಿಟ್ಯೂಟ್‌ನತ್ತ ಮುಖ ಮಾಡಿದರು. ನಾಸಿರುದ್ದಿನ್ ಗೆ ನಿರ್ದೇಶಕನಾಗುವ ಆಸೆ. ಓಂಗೆ ಉತ್ತಮ ನಟನಾಗುವ ಬಯಕೆ. ಆದರೆ, ಅಲ್ಲಿನ ಪರಿಸರ ಅವರಿಗೆ ರುಚಿಸಲಿಲ್ಲ. ಮತ್ತೆ ಎನ್‌ಎಸ್‌ಡಿಗೆ ಮರಳಿದರು. ಆಗ ನಾವೆಲ್ಲಾ ಅವರನ್ನು ‘ಎಕ್ಸ್‌ ಡೈರೆಕ್ಟರ್‌’, ‘ಎಕ್ಸ್‌ ಆ್ಯಕ್ಟರ್‌’ ಎಂದು ರೇಗಿಸುತ್ತಿದ್ದೆವು.
 
ನಾಟಕವೊಂದರಲ್ಲಿ ಅದ್ಭುತವಾಗಿ ನಟಿಸಿದ್ದ ಆತನನ್ನು ಎಲ್ಲರೂ ‘ಹೀರೊ’ ಎಂದು ಕರೆಯತೊಡಗಿದರು. ‘ನಾನ್ಯಾವ ಹೀರೊ. ನಾನು ನಟ ಅಷ್ಟೇ’ ಎಂದು ತನ್ನನ್ನು ಸೀಮಿತಗೊಳಿಸಿಕೊಳ್ಳುತ್ತಿದ್ದ. ನಿಜ. ಆತನಿಗೆ ತನ್ನ ಮುಖದಲ್ಲಿನ ಕಲೆಗಳ ಬಗ್ಗೆ ಬೇಸರವಿತ್ತು. ಅದು ಬಾಲ್ಯದಲ್ಲಿ ಉಂಟಾಗಿದ್ದ ದಡಾರದ ಕೊಡುಗೆ. ತನ್ನ ಮುಖಕ್ಕೆ ಯಾರು ನಟಿಸುವ ಅವಕಾಶ ನೀಡುತ್ತಾರೆ ಎಂಬ ಕೀಳರಿಮೆ ಇತ್ತು. ಆದರೆ ನಟಿಸುವ ಉತ್ಸಾಹ ಮತ್ತು ಪ್ರತಿಭೆಯೂ ಇತ್ತಲ್ಲ. ಸತ್ಯಜಿತ್‌ ರೇ ಅವರಂತಹ ನಿರ್ದೇಶಕರೇ ಮೆಚ್ಚಿಕೊಳ್ಳುವ ಅಭಿನಯ ನೀಡಿದನಲ್ಲ. ಎಲ್ಲರೂ ಆ ಪ್ರತಿಭೆಯನ್ನು  ಬೆಳೆಸಿದರು. 
 
ಯಾವ ರೀತಿಯ ಪಾತ್ರವನ್ನಾದರೂ ಪರಕಾಯ ಪ್ರವೇಶ ಮಾಡುವ ಸಾಮರ್ಥ್ಯ ಆತನಲ್ಲಿತ್ತು. ದೊಡ್ಡ ಸನ್ನಿವೇಶವನ್ನು ಒಂದೇ ಶಾಟ್‌ನಲ್ಲಿ ಮುಗಿಸುವ ಅಗಾಧ ಶಕ್ತಿಯಿತ್ತು. ವಿಭಿನ್ನ ಬಗೆಯ ಪಾತ್ರಗಳನ್ನು ಅಷ್ಟೇ ತಾದಾತ್ಮದಿಂದ ಮಾಡುತ್ತಿದ್ದ. ಆತನಿಗೆ ಅಭಿನಯವೇ ಬದುಕಾಗಿತ್ತು. ಅಹಂಕಾರ ಎನ್ನುವುದು ಆತನ ಹತ್ತಿರವೂ ಸುಳಿಯಲಿಲ್ಲ. ಸೇನೆಗೂ ಸಿನಿಮಾಕ್ಕೂ ಸಂಬಂಧವೇ ಇಲ್ಲ. ಆದರೂ ಆತ ಕಲಾವಿದನಾದ. ನಟನಾಗಿ ಆತನ ಗ್ರಾಫ್‌ ಏರುತ್ತಲೇ ಹೋಯಿತು. ಎಷ್ಟೊಂದು ವೈವಿಧ್ಯಮಯ ಪಾತ್ರಗಳು... ಆದರೂ ನಟನೆಯ ಹಸಿವು ತಣಿದಿರಲಿಲ್ಲ. ಒಂದು ಕಾಲದಲ್ಲಿ ಇಂಗ್ಲಿಷ್‌ ಕಲಿಯಲು ಹೆಣಗಾಡುತ್ತಿದ್ದ ಆತನನ್ನು ಮುಂದೆ ಹಾಲಿವುಡ್‌ ಕರೆಸಿಕೊಂಡಿತು. ಆತನಲ್ಲಿದ್ದ ಛಲಕ್ಕೆ ಸಾಕ್ಷಿ ಇದು. 
 
ಅಮೋಲ್ ಪಾಲೇಕರ್‌ ಒಮ್ಮೆ ನಮ್ಮ ಬ್ಯಾಚ್‌ನ ಎಲ್ಲರನ್ನೂ ಕರೆಸಿದ್ದರು.  ನಾವೆಲ್ಲರೂ ನಮ್ಮದೇ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವಷ್ಟು ಸಾಧನೆ ಮಾಡಿದ ಹೆಮ್ಮೆ ನಮ್ಮಲ್ಲಿತ್ತು. ಎನ್‌ಎಸ್‌ಡಿ ಸದಾ ನೆನಪಿನಲ್ಲಿ ಉಳಿಸಿಕೊಳ್ಳುವ ತಂಡವದು. ಇತ್ತೀಚೆಗೆ ಮುಂಬೈ ಸಿನಿಮೋತ್ಸವಕ್ಕೆ ಹೋಗಿದ್ದಾಗ ನಾವೊಂದಿಷ್ಟು ಮಂದಿ ಸೇರಿಕೊಂಡು ಎಪ್ಪತ್ತರ ದಶಕದ ನಮ್ಮ ಹುಡುಕಾಟ, ಒಡನಾಟದ ಮೆಲುಕು ಹಾಕಿದ್ದೆವು. 
 
ಒಂದಷ್ಟು ಸಮಯ ನಮ್ಮ ಸಂಪರ್ಕ ತಪ್ಪಿ ಹೋಗಿತ್ತು. ಆ ಕಾಲದಲ್ಲಿ ಈಗಿನಂತೆ ಮೊಬೈಲ್‌ ಫೋನ್‌ ಇರಲಿಲ್ಲ. ‘ಎಕೆ 47’ ಚಿತ್ರದಲ್ಲಿ ನಟಿಸಲು ಬೆಂಗಳೂರಿಗೆ ಬಂದಿದ್ದಾಗ ‘ಜಯಶ್ರೀಯನ್ನು ಭೇಟಿ ಮಾಡಬೇಕು’ ಎಂದು ಚಿತ್ರತಂಡದ ಬಳಿ ಕೇಳಿಕೊಂಡ. ಯಾವ ಜಯಶ್ರೀ ಎನ್ನುವುದು ಯಾರಿಗೂ ಗೊತ್ತಾಗಲಿಲ್ಲ. ‘ಬಿ. ಜಯಶ್ರೀ ಅವರಾ?’ ಎಂದು ಕೆಲವರು ಕೇಳಿದರು. ‘ನನಗೆ ಇನ್ಷಿಯಲ್‌ ಗೊತ್ತಿಲ್ಲ’ ಎಂದ. ಚಿತ್ರತಂಡದವರು ಟೆಲಿಫೋನ್‌ ಡೈರೆಕ್ಟರಿಯಲ್ಲಿದ್ದ ಜಯಶ್ರೀ ಎಂಬ ಹೆಸರಿರುವ ಎಲ್ಲ ಸಂಖ್ಯೆಗೂ ಕರೆ ಮಾಡಿದರು. ಕೊನೆಗೂ ನಾನು ಸಿಕ್ಕಾಗ ಭೇಟಿ ಮಾಡಿ ಖುಷಿಯಿಂದ ಹರಟಿದ್ದ. ಈಗ ಮತ್ತೆ ಹರಟಲು ಸಿಗಲಾರ. ಆ ದುಃಖ ತಡೆಯಲಾಗುತ್ತಿಲ್ಲ. ಕಳೆದ ಬಾರಿ ಬೆಂಗಳೂರಿನ ಸಿನಿಮೋತ್ಸವಕ್ಕೆ ಬಂದಾಗ ನನ್ನ ಮನೆಗೆ ಬಂದಿದ್ದ. ನನ್ನೊಟ್ಟಿಗೆ ಊಟ, ಸುತ್ತಾಟ. 
 
ರಾಜಕೀಯದಿಂದ ಆತ ಬಲು ದೂರ. ಆತನದ್ದೇನಿದ್ದರೂ, ಸಿನಿಮಾ, ನಾಟಕ, ಪುಸ್ತಕ ಪ್ರಪಂಚ. ಕೆಂಪು ದೀಪದ ಕಾರಿನಿಂದ ನಾನು ದೂರ ಎನ್ನುತ್ತಿದ್ದ. ಈ ವಿಚಾರದಲ್ಲಿ ಆತ ಡಿಟ್ಟೋ ನನ್ನಂತೆ. ನನಗೂ ರಾಜಕೀಯ ಒಗ್ಗಲಿಲ್ಲ.  
 
ಎಎಸ್‌ಡಿಯಲ್ಲಿ ಕಲಿಯುವಾಗ ಆತ ನನಗೆ ಪರಮಾಪ್ತನಾಗಿದ್ದ. ನಮ್ಮಿಬ್ಬರಿಗೂ ಮದುವೆಯಾಗುವ ಆಸೆ ಇತ್ತು. ಜ್ಯೋತಿಗೂ ಆತನನ್ನು ಕಂಡರೆ ಇಷ್ಟವಿತ್ತು. ಅವರಿಬ್ಬರ ಮದುವೆ ಪ್ರಸ್ತಾಪ ಮುಂದುವರಿಯಲಿಲ್ಲ. 
 
ನನ್ನನ್ನು ಮದುವೆಯಾಗುವ ಸಲುವಾಗಿ ಎರಡು ಬಾರಿ ತಾತನನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದ. ಆದರೆ, ಅದು ಕೂಡ ನೆರವೇರಲಿಲ್ಲ. ಕೊನೆಗೆ ಆತ್ಮೀಯ ಸ್ನೇಹಿತರಾಗಿ ಉಳಿದೆವು. ದೂರದ ಊರಿನಲ್ಲಿ ಬಿಡುವಿಲ್ಲದ ಕೆಲಸದಲ್ಲಿದ್ದರೂ ನನ್ನ ಮದುವೆಗೆ ಬಂದು ‘ಮಗುವಿನ ಪಾಲನೆ ಮಾಡುವುದು ಹೇಗೆ’ ಎಂಬ ಪುಸ್ತಕ ಕೊಟ್ಟು ಹರಸಿದ್ದ. ಇದೊಂದು ಕೆಟ್ಟ ಆಘಾತ. ನನ್ನದೂ, ಅವನದೂ ಒಂದೇ ವಯಸ್ಸು. ಅಂತಿಮ ದಿನಗಳಲ್ಲಿ ಅತಿಯಾದ ನೋವನ್ನನುಭವಿಸಿದ್ದ. ಈಗ ಮರೆಯಲಾಗದ ನೆನಪುಗಳನ್ನು ಉಳಿಸಿ ಹೋಗಿದ್ದಾನೆ...
(ಲೇಖಕಿ: ನಟಿ, ರಂಗಕರ್ಮಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT