ಬೆಂಗಳೂರು: ವಿಚ್ಛೇದನಕ್ಕೆ ಒಳಗಾದ ಮುಸ್ಲಿಂ ಮಹಿಳೆ ಜೀವನಾಂಶಕ್ಕೆ ಅರ್ಹಳು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿ ಮೂರು ದಶಕಗಳಾದವು (1985). ಇಂತಹ ತೀರ್ಪು ಬರಲು ಕಾರಣ ಮಧ್ಯಪ್ರದೇಶದ ಶಾಬಾನು ಎಂಬ ಮಹಿಳೆಯ ಹೋರಾಟ.

ಈ ತೀರ್ಪು ದೇಶದಾದ್ಯಂತ ಸಂಚಲನ ಮೂಡಿಸಿತು. ಮುಸ್ಲಿಂ ಧರ್ಮೀಯರ ವೈಯಕ್ತಿಕ ಕಾನೂನಿನಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಕ್ಕೆ ಅವಕಾಶ ಇಲ್ಲ ಎಂಬ ವಾದವನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಮುಸ್ಲಿಂ ಮೌಲ್ವಿಗಳು ಮುಂದಿಟ್ಟಿದ್ದರು. ಸುಪ್ರೀಂ ಕೋರ್ಟಿನ ತೀರ್ಪು, ಧರ್ಮದ ಮೇಲೆ ನಡೆದ ಪ್ರಹಾರ ಎಂದೇ ಬಣ್ಣಿಸಲಾಯಿತು.

1984ರಲ್ಲಿ ಇಂದಿರಾ ಗಾಂಧಿ ಹತ್ಯೆಯ ನಂತರ ಅವರ ಮಗ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದರು. ಮೌಲ್ವಿಗಳ ಒತ್ತಡಕ್ಕೆ ಮಣಿದ ಅವರು ಸುಪ್ರೀಂ ಕೋರ್ಟಿನ ತೀರ್ಪನ್ನೇ ತಲೆ ಕೆಳಗಾಗಿಸುವ ನಿರ್ಧಾರ ಮಾಡಿದರು. ಹತ್ತಿರದಲ್ಲೇ ಸಾರ್ವತ್ರಿಕ ಚುನಾವಣೆಯೂ ಇತ್ತು.

1986ರಲ್ಲಿ ಮುಸ್ಲಿಂ ಮಹಿಳೆ (ವಿಚ್ಛೇದನದ ನಂತರ ಹಕ್ಕುಗಳ ರಕ್ಷಣೆ) ಕಾಯ್ದೆಯನ್ನು ಸಂಸತ್ತು ಅಂಗೀಕರಿಸಿತು. ಸುಪ್ರೀಂ ಕೋರ್ಟ್ ಮುಸ್ಲಿಂ ಮಹಿಳೆಗೆ ನೀಡಿದ್ದ ಅವಕಾಶವನ್ನು ಸರ್ಕಾರ ಕಿತ್ತುಕೊಂಡಿತು. ಮೂರು ದಶಕಗಳ ನಂತರ ಈಗ ಮತ್ತದೇ ಪರಿಸ್ಥಿತಿ ನಿರ್ಮಾಣವಾಗಿದೆ.

ಉತ್ತರಾಖಂಡದ ಶಾಯರಾ ಬಾನು, ಗಂಡಿಗೆ ಸಮಾನವಾದ ಹಕ್ಕು ಹೆಣ್ಣಿಗೂ ಇರಬೇಕು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ದೇಶದಾದ್ಯಂತ ತಲಾಖ್ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ.

ತಲಾಖ್ ಜತೆಗೆ ಏಕರೂಪ ನಾಗರಿಕ ಸಂಹಿತೆಯೂ ಚರ್ಚೆಯಲ್ಲಿ ಸೇರಿಕೊಂಡಿದೆ. ರಾಷ್ಟ್ರೀಯ ಕಾನೂನು ಆಯೋಗವು ಏಕರೂಪದ ನಾಗರಿಕ ಸಂಹಿತೆ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸಲು ಆರಂಭಿಸಿದೆ.

ತಲಾಖ್‌ನ ಮೌಲಿಕತೆ ಬಗ್ಗೆ ಸುಪ್ರೀಂ ಕೋರ್ಟ್ ನೀಡಬಹುದಾದ ತೀರ್ಪು ಮತ್ತು ಏಕರೂಪ ನಾಗರಿಕ ಸಂಹಿತೆ ಎರಡೂ ಧರ್ಮದ ಮೇಲೆ ಸರ್ಕಾರದ ಅತಿಕ್ರಮಣ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ.

ಮಣಿಪುರದ ರಾಜ್ಯಪಾಲರಾದ ನಜ್ಮಾ ಹೆಫ್ತುಲ್ಲಾ ಸೇರಿದಂತೆ ಹಲವು ಗಣ್ಯರು ತ್ರಿವಳಿ ತಲಾಖ್ ನಿಷೇಧಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ ಎಂಬ ಸಂಘಟನೆ ಶಾಯರಾ ಅವರ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣದಲ್ಲಿ ವಾದಿಯಾಗಿ ಸೇರಿಕೊಂಡಿದೆ.

ಮುಸ್ಲಿಂ ಮಹಿಳೆಯರ ತಾರತಮ್ಯದ ಬಗೆಗಿನ ಚರ್ಚೆ ಮೂರು ದಶಕಗಳ ಅವಧಿಯಲ್ಲಿ ಒಂದು ಸುತ್ತು ಪೂರೈಸಿದೆ.

ಶಾಬಾನು ಪರ ನಿಂತ ಕೋರ್ಟ್

ಮಧ್ಯಪ್ರದೇಶದ ಇಂದೋರ್‌ನ 68 ವರ್ಷದ ಮಹಿಳೆ ಶಾಬಾನು ಅವರಿಗೆ ಅವರ ಗಂಡ ಮೊಹಮ್ಮದ್ ಅಹಮ್ಮದ್ ಖಾನ್ 1978ರಲ್ಲಿ ತಲಾಖ್ ನೀಡುತ್ತಾರೆ (ವಿಚ್ಛೇದನ).

ಜೀವನಾಂಶಕ್ಕಾಗಿ ಶಾಬಾನು ಸ್ಥಳೀಯ ನ್ಯಾಯಾಲಯದಲ್ಲಿ ದೂರು ದಾಖಲಿಸುತ್ತಾರೆ. ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ 1973ರ ಸೆಕ್ಷನ್ 125ರ ಅಡಿಯಲ್ಲಿ ಸ್ಥಳೀಯ ನ್ಯಾಯಾಲಯ ಮತ್ತು ಹೈಕೋರ್ಟ್ ಕೂಡ ಶಾಬಾನು ಅವರಿಗೆ ಅಹಮ್ಮದ್ ಖಾನ್ ಜೀವನಾಂಶ ನೀಡಬೇಕು ಎಂದು ಆದೇಶಿಸುತ್ತವೆ.

ಹೈಕೋರ್ಟ್ ತೀರ್ಪನ್ನು ಖಾನ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತಾರೆ. ಸುಪ್ರೀಂ ಕೋರ್ಟ್ ಕೂಡ ಶಾಬಾನು ಪರವಾಗಿ 1985ರಲ್ಲಿ ತೀರ್ಪು ನೀಡುತ್ತದೆ

ಅಪರಾಧ ದಂಡ ಸಂಹಿತೆ 1973ರ ಸೆಕ್ಷನ್ 125ಕ್ಕೆ ನ್ಯಾಯಾಲಯದ ವ್ಯಾಖ್ಯಾನ: ಯಾವುದೇ ವ್ಯಕ್ತಿಯು ಹೆಂಡತಿಯನ್ನು ನಿರ್ಲಕ್ಷಿಸಿದ್ದು ಖರ್ಚಿಗೆ ನೀಡುತ್ತಿಲ್ಲ ಎಂದಾದರೆ, ಅಥವಾ ಹೆಂಡತಿಗೆ ವಿಚ್ಛೇದನ ನೀಡಿದ್ದರೆ ಮತ್ತು ಆಕೆಗೆ ತನ್ನ ಖರ್ಚು ನೋಡಿಕೊಳ್ಳುವ ಶಕ್ತಿ ಇಲ್ಲದಿದ್ದರೆ (ಆಕೆ ಮರು ಮದುವೆ ಆಗುವ ತನಕ) ಅಂಥವರಿಗೆ ಪ್ರತಿ ತಿಂಗಳು ಜೀವನಾಂಶ ನೀಡುವಂತೆ ಮೊದಲ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಆದೇಶಿಸಬಹುದು.

ಇದು ಎಲ್ಲ ಧರ್ಮಕ್ಕೆ ಸೇರಿದವರಿಗೂ ಅನ್ವಯ ಆಗುತ್ತದೆ. ನಿರ್ಲಕ್ಷಿತ ಹೆಂಡತಿಯರು ಅಥವಾ ವಿಚ್ಛೇದಿತ ಹೆಂಡತಿಯರ ಆರ್ಥಿಕ ಸ್ಥಿತಿ ಸುಧಾರಣೆಗಾಗಿಯೇ ಈ ಕಾನೂನು ಇದೆ.

‘ಮುಸ್ಲಿಮನಾಗಿರುವುದರಿಂದ ಜೀವನಾಂಶ ಕೊಡಬೇಕಿಲ್ಲ’

ಮುಸ್ಲಿಮರಾಗಿರುವುದರಿಂದ ತಮಗೆ ಮುಸ್ಲಿಂ ವೈಯಕ್ತಿಕ ಕಾನೂನು ಮಾತ್ರ ಅನ್ವಯವಾಗುತ್ತದೆ. ‘ಇದ್ದತ್’ ಅವಧಿಯ (ವಿಚ್ಛೇದನದ ನಂತರದ ಮೂರು ತಿಂಗಳು) ನಂತರ ವಿಚ್ಛೇದಿತ ಹೆಂಡತಿಗೆ ಜೀವನಾಂಶ ನೀಡುವ ನಿಯಮ ವೈಯಕ್ತಿಕ ಕಾನೂನಿನಲ್ಲಿ ಇಲ್ಲ.

ಮದುವೆ ಸಂದರ್ಭದಲ್ಲಿ ನೀಡಲಾದ ‘ಮೆಹರ್’ ಎಂದು ಕರೆಯಲಾಗುವ ದಕ್ಷಿಣೆಯನ್ನು ಹಿಂದಿರುಗಿಸಲಾಗಿದೆ. ಹಾಗಾಗಿ ತಮಗೆ ಮಾಜಿ ಹೆಂಡತಿಯನ್ನು ಸಲಹುವ ಜವಾಬ್ದಾರಿ ಇಲ್ಲ. ಮುಸ್ಲಿಂ ವೈಯಕ್ತಿಕ ಕಾನೂನಿನ ಮೇಲೆ ದಂಡ ಸಂಹಿತೆಯ ಸೆಕ್ಷನ್ 125ಕ್ಕೆ ವ್ಯಾಪ್ತಿ ಇಲ್ಲ.

ಶಾಯರಾಗೆ ಕಿರುಕುಳ, ಹಿಂಸೆ, ತಲಾಖ್

ಉತ್ತರಾಖಂಡದ ಶಾಯರಾ ಬಾನು ಅವರಿಗೆ 2002ರಲ್ಲಿ ರಿಜ್ವಾನ್ ಅಹ್ಮದ್ ಜತೆ ಮದುವೆಯಾಯಿತು. ಮದುವೆಯಾದ ನಂತರ ಗಂಡನ ಜತೆಗೆ ಅವರು ಅಲಹಾಬಾದ್‌ಗೆ ಬಂದರು.

ಅಲ್ಲಿ ಬಂದಾಗ ಹೊಸ ನಗರ, ಹೊಸ ಜನರಿಗೆ ಹೊಂದಿಕೊಳ್ಳುವುದರ ಜತೆಗೆ ಸಾಯಿರಾ ಕಿರುಕುಳಕ್ಕೂ ಹೊಂದಿಕೊಳ್ಳಬೇಕಾಯಿತು. ಸುಮಾರು ಒಂದು ದಶಕದ ಕಾಲ ಗಂಡ ಮತ್ತು ಮನೆಯವರು ವರದಕ್ಷಿಣೆ ಬೇಡಿಕೆ, ದೈಹಿಕ ಮತ್ತು ಮಾನಸಿಕ ಕಿರುಕುಳದಿಂದ ಸಾಯಿರಾ ಅವರಿಗೆ ಮಾನಸಿಕ, ದೈಹಿಕ ಹಿಂಸೆ ನೀಡಿದರು. ಸಾಯಿರಾ ಅವರಿಗೆ ಮತ್ತು ಬರಿಸುವ ಔಷಧ ನೀಡುತ್ತಿದ್ದರು.

2015ರಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಸಾಯಿರಾ ಅವರನ್ನು ತವರು ಮನೆಯವರು ಬಂದು ಕರೆದುಕೊಂಡು ಹೋದರು.

ಕೆಲವು ತಿಂಗಳ ನಂತರ ಗಂಡ ಸಾಯಿರಾ ಅವರಿಗೆ ತಲಾಖ್ ಕೊಟ್ಟರು. ಕುಟುಂಬದ ಬೆಂಬಲದೊಂದಿಗೆ ಸುಪ್ರೀಂ ಕೋರ್ಟ್‌ವರೆಗೆ ತಲುಪಿದ ಸಾಯಿರಾ ಪ್ರಕರಣ ಈಗ ದೇಶದಾದ್ಯಂತ ಚರ್ಚೆಯೊಂದನ್ನು ಹುಟ್ಟು ಹಾಕಿದೆ.

ಶಾಯಿರಾ ಬೇಡಿಕೆ ಏನು: ತಲಾಖ್, ನಿಕಾಹ್ ಹಲಾಲ, ಬಹುಪತ್ನಿತ್ವ, ಧರ್ಮ, ಜಾತಿ, ಲಿಂಗದ ಆಧಾರದಲ್ಲಿ ತಾರತಮ್ಯ ಮಾಡುವುದನ್ನು ನಿಷೇಧಿಸಿ.

ದೇಶದಾದ್ಯಂತ ಚರ್ಚೆ

ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಒಮ್ಮೆಗೆ ಮೂರು ತಲಾಖ್ ಹೇಳುವುದಕ್ಕೆ ವಿರೋಧ ಇದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವೈಯಕ್ತಿಕ ಕಾನೂನಿನಲ್ಲಿ ಹಸ್ತಕ್ಷೇಪ ಸಲ್ಲದು ಎಂದು ಹೇಳಿದೆ. ದೇಶದಾದ್ಯಂತ ಮುಸ್ಲಿಂ ಮಹಿಳೆಯರು ಎದುರಿಸುತ್ತಿರುವ ತಾರತಮ್ಯದ ಬಗ್ಗೆ ಗಂಭೀರ ಚರ್ಚೆ ಆರಂಭವಾಗಿದೆ.

ವಿವಾಹ ವಿಚ್ಛೇದನದ ವಿಧಗಳು

* ತಲಾಖ್: ಗಂಡ ವಿಚ್ಛೇದನ ನೀಡುವ ಕ್ರಮ (ಇದರಲ್ಲಿ ಒಮ್ಮೆಗೆ ಮೂರು ತಲಾಖ್ ಹೇಳುವುದೂ ಸೇರಿದೆ)

* ಖುಲಾ: ಹೆಂಡತಿ ವಿಚ್ಛೇದನ ನೀಡುವ ಕ್ರಮ

* ಫಸ್ಖ್–ಎ–ನಿಕಾಹ್: ಗಂಡನಿಗೆ ವಿಚ್ಛೇದನ ಬೇಡ, ಹೆಂಡತಿಗೆ ಬೇಕು ಎಂಬ ಸಂದರ್ಭದಲ್ಲಿನ ವಿಚ್ಛೇದನ ಕ್ರಮ

* ತಫ್‌ವೀದ್–ಎ–ತಲಾಖ್: ವಿಚ್ಛೇದನ ನೀಡುವ ಹಕ್ಕನ್ನು ಹೆಂಡತಿಗೆ ನೀಡುವ ಕ್ರಮ

ವಿವಾದ ಸೃಷ್ಟಿಸಿದ ರಾಜೀವ್ ಗಾಂಧಿ ಕಾನೂನು

1986ರಲ್ಲಿ ರಾಜೀವ್ ಗಾಂಧಿ ಸರ್ಕಾರ ಮುಸ್ಲಿಂ ಮಹಿಳೆಯರ (ವಿಚ್ಛೇದನದ ನಂತರ ಹಕ್ಕುಗಳ ರಕ್ಷಣೆ) ಕಾಯ್ದೆ ಜಾರಿಗೆ ತರುತ್ತದೆ. ತಲಾಖ್ ನಂತರದ ಮೂರು ತಿಂಗಳ ಅವಧಿಗೆ ಮಾತ್ರ ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡುವ ಹೊಣೆ ತಲಾಖ್ ನೀಡಿರುವ ಗಂಡನಿಗೆ ಇರುತ್ತದೆ. ಅದಾದ ನಂತರ ಮಹಿಳೆಯನ್ನು ಕುಟುಂಬದವರೇ ನೋಡಿಕೊಳ್ಳಬೇಕು ಎಂಬುದು ಈ ಕಾಯ್ದೆಯ ಮುಖ್ಯ ಮತ್ತು ವಿವಾದಾತ್ಮಕ ಅಂಶ.

90 ದಿನದಲ್ಲಿ ಇಡೀ ಜೀವನಕ್ಕಾಗುವಷ್ಟು ಕೊಡಿ

ಮುಸ್ಲಿಂ ಮಹಿಳೆ (ವಿಚ್ಛೇದನದ ನಂತರ ಹಕ್ಕುಗಳ ರಕ್ಷಣೆ) ಕಾಯ್ದೆ 1985 ಅಂಗೀಕಾರವಾದ ನಂತರ ವಿಚ್ಛೇದನಕ್ಕೆ ಒಳಗಾದ ಮುಸ್ಲಿಂ ಮಹಿಳೆಯರಿಗೆ ಗಂಡ ಜೀವನಾಂಶ ನೀಡುವುದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ಗಳು ವಿವಿಧ ರೀತಿಯ ಆದೇಶಗಳನ್ನು ನೀಡಿವೆ.

ಆದರೆ ಡಿ. ಲತೀಫ್ ಮತ್ತು ಭಾರತ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಪೂರ್ಣ ಪೀಠ ಈ ಬಗ್ಗೆ ಸ್ಪಷ್ಟವಾದ ತೀರ್ಪು ನೀಡಿತು. ಮುಸ್ಲಿಂ ಮಹಿಳೆ ವಿಚ್ಛೇದಿತ ಗಂಡನಿಂದ ವಿಚ್ಛೇದನದ ನಂತರದ 90 ದಿನಗಳ ಕಾಲ ಮಾತ್ರ ಜೀವನಾಂಶ ಪಡೆಯುವುದಕ್ಕೆ ಅವಕಾಶ ಇದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 125 ಮತ್ತು ಮುಸ್ಲಿಂ ಮಹಿಳೆ ಕಾಯ್ದೆಯ ಸೆಕ್ಷನ್ 3 (ಎ) ಎರಡನ್ನೂ ಪರಿಶೀಲನೆಗೆ ಒಳಪಡಿಸಿದ ಪೀಠ, ವಿಚ್ಛೇದಿತ ಮಹಿಳೆಯ ಇಡೀ ಜೀವನಕ್ಕೆ ಸಾಕಾಗುವಷ್ಟು ಮೊತ್ತವನ್ನು ವಿಚ್ಛೇದನದ 90 ದಿನಗಳೊಳಗೆ ನೀಡಬೇಕು ಎಂಬ ವ್ಯಾಖ್ಯಾನ ನೀಡಿದೆ.

ಮುಸ್ಲಿಂ ವಿವಾಹ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದ ಕಾನೂನುಗಳು:

* ಶರೀಯತ್ ಕಾಯ್ದೆ 1932: ಶರೀಯತ್ ನಿಯಮಗಳ ಪ್ರಕಾರ ಮುಸ್ಲಿಂ ವೈಯಕ್ತಿಕ ವ್ಯವಹಾರಗಳನ್ನು ನಿರ್ಧರಿಸುತ್ತದೆ

* ಮುಸ್ಲಿಂ ವಿವಾಹ ವಿಚ್ಛೇದನ ಕಾಯ್ದೆ 1939

* ಮುಸ್ಲಿಂ ಮಹಿಳೆ (ವಿಚ್ಛೇದನದ ಬಳಿಕ ಹಕ್ಕುಗಳ ರಕ್ಷಣೆ) ಕಾಯ್ದೆ 1986

* ಇತ್ತೀಚೆಗೆ, ಮಧ್ಯಮ ಮತ್ತು ಮೇಲ್ವರ್ಗದ ಜನರು ಹೆಚ್ಚಾಗಿ ತಮ್ಮ ಮದುವೆಯನ್ನು ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ನೋಂದಣಿ ಮಾಡಿಸಿಕೊಳ್ಳುತ್ತಾರೆ.

ಪ್ರವಾಸ ದಾಖಲೆಗಳನ್ನು ಪಡೆಯುವುದು ಮತ್ತು ಬ್ಯಾಂಕ್ ಖಾತೆ ತೆರೆಯುವುದನ್ನು ಸುಲಭಗೊಳಿಸಲು ಈ ವಿಧಾನ ಅನುಸರಿಸಲಾಗುತ್ತಿದೆ. ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ನೋಂದಣಿ ಆಗಿರುವ ಮದುವೆಯಲ್ಲಿ ನ್ಯಾಯಾಂಗದ ಮೂಲಕವೇ ವಿಚ್ಛೇದನ ಪಡೆಯಲು ಸಾಧ್ಯ

ತಲಾಖ್ ರಾಜಕಾರಣದ ಮತ್ತೊಂದು ಮುಖ

ಪ್ರಧಾನಿ ನರೇಂದ್ರ ಮೋದಿ ಅವರೂ ತಲಾಖ್ ಚರ್ಚೆಯಲ್ಲಿ ಭಾಗಿಯಾಗಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶದ ಬುಂದೇಲ್‌ಖಂಡ ಪ್ರದೇಶದಲ್ಲಿ ಮಾತನಾಡಿದ್ದ ಅವರು ‘ಪ್ರಜಾಪ್ರಭುತ್ವದಲ್ಲಿ ಎಲ್ಲ ವಿಚಾರದಲ್ಲಿಯೂ ಚರ್ಚೆ ನಡೆಯಬೇಕು. ತಲಾಖ್ ಮೂಲಕ ಮುಸ್ಲಿಂ ಮಹಿಳೆಯರ ಬಾಳು ಹಾಳಾಗಲು ಅವಕಾಶ ಕೊಡಬಾರದು’ ಎಂದು ಹೇಳಿದ್ದರು.

ಮುಸ್ಲಿಂ ಮಹಿಳೆಯರ ಅಭ್ಯುದಯದ ಬಗ್ಗೆ ಮಾತನಾಡುವ ಮೂಲಕ ಮೋದಿ ಅವರು ತಲಾಖ್ ಸಮಸ್ಯೆಗೆ ಮತ್ತೊಂದು ಆಯಾಮವನ್ನು ಸೇರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.