ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಮೀರಿ ಬಡ್ತಿ

ಅನುಮಾನಕ್ಕೆ ಎಡೆ ಮಾಡಿಕೊಟ್ಟ ಹಣಕಾಸು ಇಲಾಖೆ ಒಪ್ಪಿಗೆ
Last Updated 25 ಜುಲೈ 2015, 20:23 IST
ಅಕ್ಷರ ಗಾತ್ರ

ಬೆಂಗಳೂರು: ವೃಂದ ಮತ್ತು ನೇಮಕಾತಿ ನಿಯಮಗಳಿಗೆ ವಿರುದ್ಧವಾಗಿ 12 ಮಂದಿ ಆಪ್ತ ಕಾರ್ಯದರ್ಶಿಗಳಿಗೆ ಬಡ್ತಿ ನೀಡಿರುವುದು ರಾಜ್ಯ ಸರ್ಕಾರದ ಸಚಿವಾಲಯ ಮಟ್ಟದಲ್ಲಿ ವಿವಾದಕ್ಕೆ ಕಾರಣವಾಗಿದೆ. ಆಪ್ತ ಕಾರ್ಯದರ್ಶಿ (ಉಪ ಕಾರ್ಯದರ್ಶಿ ದರ್ಜೆ) ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಬಡ್ತಿ ಪಡೆಯಲು ಕನಿಷ್ಠ ಐದು ವರ್ಷ ಆ ಹುದ್ದೆಯಲ್ಲಿ ಸೇವೆ ಸಲ್ಲಿಸಿರಬೇಕು. ಒಂದು ವೇಳೆ ಈ ಸೇವಾ ಹಿರಿತನದ ಅಧಿಕಾರಿಗಳು ಲಭ್ಯ ಇಲ್ಲದಿದ್ದಾಗ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿದ್ದವರನ್ನು ಮಾತ್ರ ಹಿರಿಯ ಆಪ್ತ ಕಾರ್ಯದರ್ಶಿ (ಜಂಟಿ ಕಾರ್ಯದರ್ಶಿ) ಹುದ್ದೆಗೆ ಬಡ್ತಿ ನೀಡಲು ಪರಿಗಣಿಸಬೇಕು. ಇದು ನಿಯಮ.
 
ಆದರೆ, ಈ ನಿಯಮಗಳನ್ನು ಗಾಳಿಗೆ ತೂರಿ, ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿದ್ದವರನ್ನೂ ಬಡ್ತಿಗೆ ಪರಿಗಣಿಸಬಹುದೆಂದು ನಿರ್ಧರಿಸಲಾಗಿದೆ. ಅದೂ, ಈಗ ಬಡ್ತಿ ಪಡೆದಿರುವ ಅಧಿಕಾರಿಗಳು ನಿವೃತ್ತಿಯಾದ ನಂತರ ಆ ಹುದ್ದೆಗಳು ಇರುವುದಿಲ್ಲ. ಬದಲಿಗೆ, ಅವೆಲ್ಲವೂ ಪುನಃ ಈ ಹಿಂದೆ ಇದ್ದ ಹಾಗೆ ಕೇವಲ ಆಪ್ತ ಕಾರ್ಯದರ್ಶಿ ದರ್ಜೆ ಹುದ್ದೆಗಳಾಗಿ ಉಳಿಯುತ್ತವೆ ಎಂದೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಒಂದೇ ವರ್ಷ ಸೇವೆಗೆ ಸೇರಿದ 12 ಮಂದಿಯಲ್ಲಿ ಎಂಟು  ಅಧಿಕಾರಿಗಳು ಮಾತ್ರ ಕನಿಷ್ಠ ಅರ್ಹತೆಯಾದ ಮೂರು ವರ್ಷ ಸೇವೆ ಪೂರೈಸಿದ್ದಾರೆ. ಉಳಿದವರು ಆಪ್ತ ಕಾರ್ಯದರ್ಶಿಯಾಗಿ ಇನ್ನೂ ಕನಿಷ್ಠ ಸೇವೆಯನ್ನು ಪೂರೈಸಿಲ್ಲ ಎನ್ನಲಾಗಿದೆ. ಕೇವಲ ಕಾರ್ಯಕಾರಿ ಆದೇಶದ (ಎಕ್ಸಿಕ್ಯೂಟಿವ್ ಆರ್ಡರ್) ಪ್ರಕಾರ, ಕರ್ನಾಟಕ ಸಚಿವಾಲಯ ಸೇವೆಗಳು (ನೇಮಕಾತಿ) ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ.

ಇದಾದ ಆರು ತಿಂಗಳ ಒಳಗೆ ನಿಯಮಗಳಿಗೆ ತಿದ್ದುಪಡಿ ತಂದು ಅದನ್ನು ಅಳವಡಿಸಿಕೊಳ್ಳಬೇಕು ಎಂದೂ ಆದೇಶದಲ್ಲಿ ವಿವರಿಸಲಾಗಿದೆ. ಅಲ್ಲಿಯವರೆಗೂ 12 ಮಂದಿಗೆ ತಾತ್ಕಾಲಿಕ ಬಡ್ತಿ ನೀಡಲು ಶನಿವಾರ ನಡೆದ ಪದೋನ್ನತಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. 12 ಮಂದಿ ಜತೆಗೆ ತಮಗೂ ಬಡ್ತಿ ನೀಡಬೇಕೆಂದು ಇದೇ ದರ್ಜೆಯ ಮೂವರು ಅಧಿಕಾರಿಗಳು ಒತ್ತಡ ಹೇರಿದ ನಂತರ ಅವರಿಗೂ ಬಡ್ತಿ ನೀಡಲು ಈ ಸಮಿತಿ ಒಪ್ಪಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಏಕೆ ಹೀಗಾಯಿತು: ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರ ಆಪ್ತ ಕಾರ್ಯದರ್ಶಿ  ವೈ.ರಾಜು ಇದೇ ತಿಂಗಳ 31ರಂದು ನಿವೃತ್ತಿಯಾಗಲಿದ್ದಾರೆ.  ಅವರಿಗೆ ಬಡ್ತಿ ನೀಡುವ ಸಲುವಾಗಿ ಅವರಿಗಿಂತ ಹಿರಿಯರಾದ ಒಂಬತ್ತು ಮಂದಿ ಮತ್ತು ಕಿರಿಯರಾದ ಇಬ್ಬರಿಗೆ ನಿಯಮ ಬಾಹಿರವಾಗಿ ಬಡ್ತಿ ನೀಡುವ ತೀರ್ಮಾನಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹುದ್ದೆಗಳೇ ಖಾಲಿ ಇಲ್ಲ: ಬಡ್ತಿ ನೀಡುವುದಕ್ಕೆ ಮೊದಲು ಹುದ್ದೆಗಳು ಖಾಲಿ ಇರಬೇಕು.  ಆದರೆ, ಈ ಪ್ರಕರಣದಲ್ಲಿ ಆ ರೀತಿ ಆಗಿಲ್ಲ ಎನ್ನಲಾಗಿದೆ. ಹುದ್ದೆಗಳು ಖಾಲಿ ಇಲ್ಲದಿದ್ದರೂ ಅವುಗಳನ್ನು ಸೃಷ್ಟಿಸಿ, ತಾತ್ಕಾಲಿಕವಾಗಿ ಬಡ್ತಿ ನೀಡುವ ತೀರ್ಮಾನ ಮಾಡಲಾಗಿದೆ. ಈ ರೀತಿ ಆಗಿರುವುದು ಸಚಿವಾಲಯದ ಇತಿಹಾಸದಲ್ಲೇ ಮೊದಲು ಎನ್ನಲಾಗಿದೆ.

ಇದರಿಂದ ಲಾಭ ಏನು?: ಉನ್ನತ ಹುದ್ದೆಯಲ್ಲಿದ್ದಾಗ ನಿವೃತ್ತಿಯಾದರೆ ಹೆಚ್ಚು ಅನುಕೂಲಗಳು ಇರುತ್ತವೆ.  ಉಪ ಕಾರ್ಯದರ್ಶಿ ಹುದ್ದೆಗಿಂತ ಜಂಟಿ ಕಾರ್ಯದರ್ಶಿ ಹುದ್ದೆಯಲ್ಲಿದ್ದಾಗ ನಿವೃತ್ತಿಯಾದರೆ ನಿವೃತ್ತಿ ಸೌಲಭ್ಯಗಳು ಹೆಚ್ಚು.  ಕನಿಷ್ಠ ತಿಂಗಳಿಗೆ ₨ 5 ಸಾವಿರ ವೇತನ ಹೆಚ್ಚಳವೂ ಆಗುತ್ತದೆ. ಹೀಗಾಗಿಯೇ ನಿವೃತ್ತಿಗೆ ಐದು ದಿನ ಇರುವಾಗ ಪದೋನ್ನತಿ ಸಮಿತಿ ಸಭೆ ಸೇರಿ ಬಡ್ತಿ ನೀಡುವ ತೀರ್ಮಾನ ಮಾಡಿದೆ. ಅದೂ ಈ 12 ಮಂದಿಗೆ ಮಾತ್ರ ಅನ್ವಯ ಆಗುವ ಹಾಗೆ ತೀರ್ಮಾನ ಮಾಡಲಾಗಿದೆ.

ಹಣಕಾಸು ಇಲಾಖೆಯೂ ಒಪ್ಪಿಗೆ: ಎಲ್ಲದಕ್ಕೂ  ಕೊಕ್ಕೆ ಹಾಕುವ ಹಣಕಾಸು ಇಲಾಖೆ ಒಮ್ಮೆಗೇ 12 ಹುದ್ದೆಗಳನ್ನು ಸೃಷ್ಟಿಸಲು ಒಪ್ಪಿಗೆ ನೀಡಿರುವುದು ಕೂಡ ಅನುಮಾನಕ್ಕೆ ಕಾರಣವಾಗಿದೆ ಎನ್ನುತ್ತಾರೆ ಸಚಿವಾಲಯ ಸಿಬ್ಬಂದಿ. ಬಡ್ತಿ ಪಡೆದ ಅಧಿಕಾರಿಗಳು ಆಯಕಟ್ಟಿನ ಹುದ್ದೆಗಳಲ್ಲಿ ಇದ್ದು, ಒತ್ತಡದ ಕಾರಣಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ ಎಂದೂ ಅವರು ದೂರುತ್ತಾರೆ.
*
ಬಡ್ತಿ ಪಡೆದ ಕೆಲ ಅಧಿಕಾರಿಗಳು
*ವೈ.ರಾಜು  ಆಪ್ತ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿ
*ಮಂಜುನಾಥ  ಆಪ್ತ ಕಾರ್ಯದರ್ಶಿ, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
*ಎ.ಆರ್.ರಾಯ್ಕರ್  ಆಪ್ತ ಕಾರ್ಯದರ್ಶಿ, ಆಹಾರ ಇಲಾಖೆ ಕಾರ್ಯದರ್ಶಿ
*ಮಂಜುನಾಥ  ಆಪ್ತ ಕಾರ್ಯದರ್ಶಿ, ರಾಜಭವನ ಕಚೇರಿ
*ಎ.ಕೆ.ಪಟ್ವೇಗರ್ ವಿಶೇಷ ಕರ್ತವ್ಯಾಧಿಕಾರಿ, ಮುಖ್ಯಮಂತ್ರಿ ಕಚೇರಿ
*ಎಂ.ಎಸ್‌.ಸತ್ಯ  ಆಪ್ತ ಕಾರ್ಯದರ್ಶಿ, ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
*ವಸುಂಧರಾ  ಆಪ್ತ ಕಾರ್ಯದರ್ಶಿ, ಅರಣ್ಯ ಇಲಾಖೆ ಕಾರ್ಯದರ್ಶಿ
*ಶಾಂತಮ್ಮ  ಆಪ್ತ ಕಾರ್ಯದರ್ಶಿ, ಕಂದಾಯ ಇಲಾಖೆ
*ವಿಜಯಕುಮಾರ್  ಆಪ್ತ ಕಾರ್ಯದರ್ಶಿ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT