ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈರುತ್ಯ ರೈಲ್ವೆಗೆ ₹3,174 ಕೋಟಿ

ಯಶವಂತಪುರ, ಕಂಟೊನ್ಮೆಂಟ್‌ ನಿಲ್ದಾಣ ಮರು ಅಭಿವೃದ್ಧಿ
Last Updated 2 ಫೆಬ್ರುವರಿ 2017, 6:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಲೋಕಸಭೆಯಲ್ಲಿ ಬುಧವಾರ ಮಂಡಿಸಿದ 2017–18ನೇ ಸಾಲಿನ ಬಜೆಟ್‌ನಲ್ಲಿ ನೈರುತ್ಯ ರೈಲ್ವೆಗೆ ₹3,174 ಕೋಟಿ ಹಂಚಿಕೆ ಮಾಡಿದ್ದಾರೆ.

‘ಇದು ಕಳೆದ ವರ್ಷದ ಅನುದಾನಕ್ಕಿಂತ ಶೇ 19.17ರಷ್ಟು ಜಾಸ್ತಿ ಇದೆ. 2016–17ನೇ ಸಾಲಿನಲ್ಲಿ ₹2,663.42 ಕೋಟಿ ಹಂಚಿಕೆ ಮಾಡಲಾಗಿತ್ತು’ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ. ಗುಪ್ತಾ ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ನಮ್ಮ ಕೋರಿಕೆ ಇದ್ದಿದ್ದು ₹2,900 ಕೋಟಿ. ಆದರೆ ಹಂಚಿಕೆ ಆಗಿರುವುದು ₹3,174 ಕೋಟಿ. ಅಂದರೆ ಹೆಚ್ಚುವರಿಯಾಗಿ ₹274 ಕೋಟಿ ಸಿಕ್ಕಿದ್ದು, ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅನುಕೂಲ ಆಗಲಿದೆ’ ಎಂದರು.

‘ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯ ಯಾವ ಯೋಜನೆಗೆ ಎಷ್ಟುಅನುದಾನ ಹಂಚಿಕೆ ಮಾಡಲಾಗಿದೆ ಎಂಬುದರ ವಿವರಗಳು ಇನ್ನೂ ಲಭ್ಯವಾಗಿಲ್ಲ.  ಶುಕ್ರವಾರ ಅಥವಾ ಶನಿವಾರ ಯೋಜನಾವಾರು ಮಾಹಿತಿ ದೊರೆಯಲಿದೆ’ ಎಂದು ಅವರು ವಿವರಿಸಿದರು.

ನಿಲ್ದಾಣ ಮರುಅಭಿವೃದ್ಧಿ
‘ದೇಶದಲ್ಲಿನ 25 ರೈಲ್ವೆ ನಿಲ್ದಾಣಗಳನ್ನು ಮರು–ಅಭಿವೃದ್ಧಿಪಡಿಸುತ್ತಿದ್ದು, ಅವುಗಳಲ್ಲಿ ಬೆಂಗಳೂರಿನ ಯಶವಂತಪುರ ಮತ್ತು ಕಂಟೊನ್ಮೆಂಟ್ ರೈಲ್ವೆ ನಿಲ್ದಾಣಗಳು ಸೇರಿವೆ.  ಖಾಸಗಿ ಸಹಭಾಗಿತ್ವದಲ್ಲಿ ಈ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುವುದು. ಅಲ್ಲಿನ ಖಾಲಿ ಜಾಗವನ್ನು ಅಭಿವೃದ್ಧಿಪಡಿಸುವುದರ ಮೂಲಕ ಆದಾಯ ಗಳಿಸುವ ಉದ್ದೇಶವೂ ಇದೆ’ ಎಂದು ಎ.ಕೆ. ಗುಪ್ತಾ ವಿವರಿಸಿದರು.

‘ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಹಂಚಿಕೆಯಾಗಿರುವ ಅನುದಾನದಲ್ಲಿ ಬಹುತೇಕ ಹಣವನ್ನು ಜೋಡಿ ರೈಲು ಮಾರ್ಗ ನಿರ್ಮಾಣ ಹಾಗೂ ಮಾರ್ಗದ ಸಾಮರ್ಥ್ಯ ಹೆಚ್ಚಳಕ್ಕೆ ಬಳಸಲಾಗುವುದು. ಹುಬ್ಬಳ್ಳಿ–ಚಿಕ್ಕಜಾಜೂರು ಮತ್ತು ಹುಬ್ಬಳ್ಳಿ–ಹೊಸಪೇಟೆ ಜೋಡಿ ಮಾರ್ಗ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಹಂಚಿಕೆಯಾಗಿರುವ ಸಾಧ್ಯತೆ ಇದೆ’ ಎಂದು ಹೇಳಿದರು.

165 ಕಿ.ಮೀ ಹೊಸ ಮಾರ್ಗ:  ‘ಒಟ್ಟು 2,800 ಕಿ.ಮೀ ಉದ್ದದ ರೈಲ್ವೆ ಮಾರ್ಗವನ್ನು ದೇಶದಲ್ಲಿ ಹೊಸದಾಗಿ ಅಭಿವೃದ್ಧಿಪಡಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಅದರಲ್ಲಿ ನೈರುತ್ಯ ರೈಲ್ವೆಯ 165 ಕಿ.ಮೀ ಸೇರಿದೆ. ಕಳೆದ ವರ್ಷ 231 ಕಿ.ಮೀ ಹೊಸ ಮಾರ್ಗ ನಿರ್ಮಾಣಕ್ಕೆ ಅನುದಾನ ಹಂಚಿಕೆ ಮಾಡಲಾಗಿತ್ತು’ ಎಂದರು.

‘ರಾಜ್ಯದಲ್ಲಿ ಮಾನವ ರಹಿತ ಲೆವೆಲ್‌ ಕ್ರಾಸಿಂಗ್‌ಗಳು 350 ಇದ್ದು, ಮೂರು ವರ್ಷಗಳಲ್ಲಿ ಅವುಗಳನ್ನು ನಿರ್ಮೂಲನೆ ಮಾಡಲಾಗುವುದು. ದೇಶದಲ್ಲಿನ 2,000 ರೈಲ್ವೆ ನಿಲ್ದಾಣಗಳಲ್ಲಿ ಸೌರವಿದ್ಯುತ್‌ ಉತ್ಪಾದನೆಗೆ ಅವಕಾಶ ಕಲ್ಪಿಸುತ್ತಿದ್ದು, ಈ ಯೋಜನೆ ವ್ಯಾಪ್ತಿಗೆ ರಾಜ್ಯದ 34 ನಿಲ್ದಾಣಗಳು ಸೇರಿವೆ. ಇದುವರೆಗೂ 900 ರೈಲ್ವೆ ಬೋಗಿಗಳಲ್ಲಿ ಜೈವಿಕ ಶೌಚಾಲಯಗಳನ್ನು ಅಳವಡಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಬೋಗಿಗಳಿಗೆ ಈ ಸೌಲಭ್ಯ ವಿಸ್ತರಿಸಲಾಗುವುದು ಎಂದು ವಿವರಿಸಿದರು.

ಅಂಕಿ ಅಂಶ
* 165ಕಿ.ಮೀ ಹೊಸ ರೈಲು ಮಾರ್ಗ ನಿರ್ಮಾಣ

* 34ರೈಲ್ವೆ ನಿಲ್ದಾಣಗಳಲ್ಲಿ ಸೌರವಿದ್ಯುತ್ ಉತ್ಪಾದನೆ

* 350ಮಾನವ ರಹಿತ ಲೆವೆಲ್‌ ಕ್ರಾಸಿಂಗ್‌ಗಳಿಗೆ 3 ವರ್ಷದಲ್ಲಿ ಮುಕ್ತಿ

 ಬಜೆಟ್‌ನಲ್ಲಿ  ಮೆಟ್ರೊ

* ನಮ್ಮ ಮೆಟ್ರೊ ಎರಡು ಹೊಸ ಲೈನ್‌ಗಳಿಗೆ ಒಪ್ಪಿಗೆ
* ಎರಡನೇ ಹಂತದ ನಾಲ್ಕು ಮಾರ್ಗಗಳ ವಿಸ್ತರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT