ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವೀಧರೆಯ ಭೂಮಿ ಪ್ರೀತಿ

Last Updated 7 ಮಾರ್ಚ್ 2016, 20:07 IST
ಅಕ್ಷರ ಗಾತ್ರ

‘ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಬೆಳವಡಿಯ ಸಾವಯವ ಕೃಷಿ ತಜ್ಞೆ ಲಕ್ಷ್ಮಿ ಲೋಕುರ ಕೃಷಿಯಲ್ಲಿ ಅದ್ವಿತೀಯ ಸಾಧನೆ ಮಾಡಿದವರು. ಕೃಷಿ ಬೆಳೆ ಪದ್ಧತಿ, ಹವಾಮಾನ ಆಧಾರಿತ ಬೆಳೆ ಹಾಗೂ ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಕಂಡುಕೊಳ್ಳುವ ಮೂಲಕ ಕೃಷಿ ಮಹಿಳೆ ಎಂಬ ಕೀರ್ತಿಯ ಜತೆಗೆ ಉತ್ತಮ ಮಾರುಕಟ್ಟೆ ತಜ್ಞೆಯಾಗಿಯೂ ಹೊರ ಹೊಮ್ಮಿದ್ದಾರೆ. ಮಹಿಳಾದಿನದ ಅಂಗವಾಗಿ ಅವರು ಸಾಗಿಬಂದ ಬದುಕಿನ ಕೆಲವು ತಿರುವುಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ...

ಧಾರವಾಡ: ಕೃಷಿಯಿಂದ ಮಹಿಳೆಯರು ವಿಮುಖರಾಗಿದ್ದರಿಂದಾಗಿಯೇ ಇಂದು ಏಕಬೆಳೆ ಪದ್ಧತಿ ಹೆಚ್ಚಾಗಿದೆ. ಧಾನ್ಯಗಳು ಕಡಿಮೆಯಾಗಿವೆ. ಸುಲಭವಾಗಿ ಹಣ ಗಳಿಸಬಹುದು ಎಂಬ ನಂಬಿಕೆಯಿಂದ ರೈತರು ವಾಣಿಜ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಕೃಷಿ ಚಟುವಟಿಕೆಯಲ್ಲಿ ಮಹಿಳೆ ಮೊದಲಿನಂತೆ ಕ್ರಿಯಾಶೀಲವಾಗಿ  ಮುಂದುವರಿದಿದ್ದರೆ ಇಂದಿನ ಈ ಅನಾರೋಗ್ಯಕರ ಬದುಕು ಇರುತ್ತಿರಲಿಲ್ಲ.

ಕೂಡು ಕುಟುಂಬದಿಂದ ಬಂದ ನನಗೆ ಕೃಷಿ ಹೊಸತಲ್ಲ. ಅಜ್ಜಿ ಹಾಗೂ ಅಮ್ಮ ಕೃಷಿಗೆ ಸಂಬಂಧಿಸಿದಂತೆ ಮನೆಯ ಗಂಡಸರಿಗೆ ನೀಡುತ್ತಿದ್ದ ಸಲಹೆ, ಬಿತ್ತನೆ ಸಂದರ್ಭದಲ್ಲಿ ಖುದ್ದು ತಾವೇ ಹೋಗಿ ತಮ್ಮ ಅಡುಗೆಗೆ ಬೇಕಾದ ಅಗತ್ಯ ಬೀಜಗಳನ್ನು ಗುಟ್ಟಾಗಿ ಬಿತ್ತುತ್ತಿದ್ದ ರೀತಿಯನ್ನು ನೋಡುತ್ತಿದ್ದೆ. ಹೀಗಾಗಿ ಬಾಲ್ಯದಿಂದಲೇ ನನಗೆ ಕೃಷಿಯತ್ತ ಆಸಕ್ತಿ ಮೂಡಿತು. ನನ್ನಜ್ಜ ಸದಾ ಹೇಳುತ್ತಿದ್ದಂತೆ ಪಾರಂಪರಿಕ ಕೃಷಿಯನ್ನು ಮುಂದುವರಿಸಿಕೊಂಡು ಹೋಗಬೇಕೆನ್ನುವ ಹಂಬಲ ಹೆಚ್ಚಾಗಿತ್ತು.

ಬಿ.ಎ. ಪದವಿ ಮುಗಿಸಿದರೂ ಕೃಷಿಯನ್ನು ತಂತ್ರಜ್ಞಾನದ ನೆರಳಿನಿಂದ ನೋಡುವ ಹಂಬಲ ನನ್ನಲ್ಲಿತ್ತು. ಹೀಗಾಗಿ ಹಠದಿಂದಲೇ ಕೆಎಲ್‌ಇ ಕೃಷಿ ಕಾಲೇಜು ಸೇರುವ ಸಂಕಲ್ಪ ಮಾಡಿದೆ. ಅಲ್ಲಿಯೂ ಮಹಿಳೆಯರಿಗೆ ಪ್ರವೇಶವಿರಲಿಲ್ಲ. ಮನೆಬಿಟ್ಟು ಕೃಷಿ ಭೂಮಿಯಲ್ಲಿ ದುಡಿಯಬೇಕಾದ್ದರಿಂದ ಕೋರ್ಸ್‌ಗೆ ಮಹಿಳೆಯರನ್ನು ಸೇರಿಸಿಕೊಳ್ಳುತ್ತಿರಲಿಲ್ಲ. ಆದರೆ ನನ್ನಲ್ಲಿದ್ದ ಉತ್ಕಟವಾದ ಓದಿನ ಹಂಬಲದಿಂದ ನಾನು ಅಲ್ಲಿ ಪ್ರವೇಶ ಗಿಟ್ಟಿಸಿಕೊಳ್ಳುವಲ್ಲಿ ಸಫಲಳಾದೆ.

ಅಲ್ಲಿ ನನಗೆ ಕೃಷಿ ಕುರಿತು ಸ್ಪಷ್ಟ ಚಿತ್ರಣ ದೊರೆಯಿತು. ಅಲ್ಲಿನ ಉಪನ್ಯಾಸಕರು ಹಾಗೂ ಕೆಲ ಸಹಪಾಠಿಗಳ ಮಾರ್ಗದರ್ಶನದಿಂದ ಋತುಮಾನ, ಬಿತ್ತನೆ ಕಾರ್ಯ, ಮಿಶ್ರ ಬೆಳೆಯ ಅನುಕೂಲ ಇತ್ಯಾದಿಗಳನ್ನು ಕಲಿತೆ. ಆ ಮೂಲಕ ಕೃಷಿ ಕುರಿತು ತಕ್ಕಮಟ್ಟಿನ ಜ್ಞಾನ ದೊರೆಯಿತು. ಆದರೆ ಸಾವಯವ ಕೃಷಿಯಲ್ಲೇ ನನ್ನ ಕೃಷಿ ಬದುಕು ಮುಂದುವರಿಸಬೇಕು ಎಂಬ ನಿಲುವಿಗೆ ನಾನು ಬದ್ಧಳಾದೆ.

ಆದರೆ ಮಳೆಯಾಧಾರಿತ ಹಾಗೂ ಇಳಿಜಾರು ಭೂಮಿಯಾಗಿದ್ದ ನಮ್ಮ ಹೊಲದಲ್ಲಿ ಹರಿದು ಹೋಗುವ ನೀರನ್ನು ನಿಲ್ಲಿಸಿ ಅದನ್ನು ಅಲ್ಲಿಯೇ ಇಂಗುವಂತೆ ಮಾಡುವುದು ನನ್ನ ಎದುರಿದ್ದ ಮೊದಲ ಸವಾಲು. ನಿರಂತರ ಪ್ರಯೋಗ ಹಾಗೂ ಪ್ರಯತ್ನಗಳಿಂದ ಅದರಲ್ಲಿ ಸಫಲಳಾದೆ. ಹಾಗೆಯೇ ಭೂಮಿಗೆ ಬೇಕಾದ ಗೊಬ್ಬರ ತಯಾರಿಕೆಯಲ್ಲೂ ಹಲವು ಚಮತ್ಕಾರಗಳು ನನಗೆ ಹೊಸ ಪಾಠಗಳನ್ನು ಕಲಿಸಿದವು.

ಕುಟುಂಬದ 7 ಎಕರೆ 32 ಗುಂಟೆ ಭೂಮಿಯಲ್ಲಿ ನನ್ನ ಪ್ರಯೋಗಕ್ಕೆ ತಂದೆಯಿಂದ ಸಿಕ್ಕಿದ್ದು ಅರ್ಧ ಎಕರೆ ಮಾತ್ರ. ಜತೆಗೆ ಕೃಷಿ ಆರಂಭಿಸಲು ಒಂದಿಷ್ಟು ಇಡಗಂಟು. ಕೊಟ್ಟ ಭೂಮಿ ಹಾಗೂ ಹಣದಿಂದ 2003ರಲ್ಲಿ ಕೃಷಿ ಜೀವನ ಆರಂಭಿಸಿದೆ. ನನಗೆ ಪಾರಂಪರಿಕ ಕೃಷಿ ಪದ್ಧತಿಯಲ್ಲಿ ಹೊಸತನ್ನು ಮಾಡುವುದರ ಜತೆಗೆ, ನಾನು ಎದುರಿಸುತ್ತಿರುವ ಪರೀಕ್ಷೆಯಲ್ಲಿ ಯಶಸ್ವಿಯಾಗುವುದು ಅಷ್ಟೇ ಮುಖ್ಯವಾಗಿತ್ತು.

ನನ್ನ ಅರ್ಧ ಎಕರೆಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದ ಹೆಸರು ಹಾಗೂ ಪಕ್ಕದಲ್ಲಿ ಮೂರೂವರೆ ಎಕರೆ ಭೂಮಿಯಲ್ಲಿ ರಾಸಾಯನಿಕ ಬಳಸಿ ಬೆಳೆದ ಹೆಸರು ಕಾಳಿನ ಪ್ರಮಾಣ ಒಂದೇ ಆಗಿತ್ತು. ಇದು ನನ್ನ ಮೊದಲ ಜಯ. ಇದಾದ ನಂತರ ಭೂಮಿಯ ಜೊತೆ ನಿರಂತರ ಪ್ರಯೋಗಗಳನ್ನು ನಡೆಸುತ್ತಲೇ ಇದ್ದೆ. ಕೃಷಿಯನ್ನು ಲಾಭದಾಯಕವನ್ನಾಗಿಸುವ ಪ್ರಯತ್ನವೂ ಮುಂದುವರಿಯಿತು.

ಧಾನ್ಯಗಳನ್ನು ಬಿಟ್ಟು ಸೇವಂತಿ, ಸುಗಂಧರಾಜದಂತ ಹೂವುಗಳನ್ನು ಬೆಳೆದೆ. ಈ ಹೂವುಗಳ ನಡುವಿನ ಅಂತರ ಹೆಚ್ಚು ಮಾಡಿ, ನಡುವೆ ಕೊತ್ತಂಬರಿ, ಹರವಿ, ಕುಸುಬಿ ಸೊಪ್ಪು ಬೆಳೆದೆ. ಬೆಳೆದಾದ ನಂತರ ಅದನ್ನು ಮಾರುವುದು, ಅದಕ್ಕೊಂದು ಮಾರುಕಟ್ಟೆ ಸೃಷ್ಟಿಸುವುದು ನನ್ನ ಮುಂದಿರುವ ಮತ್ತೊಂದು ಸವಾಲಾಗಿತ್ತು.  ನಾನು ಬೆಳೆದ ಸೊಪ್ಪನ್ನು 25ಪೈಸೆಗೆ ಖರೀದಿಸಿ ಮಧ್ಯವರ್ತಿಗಳು ಅದನ್ನು ₹ 1ಕ್ಕೆ ಮಾರುತ್ತಿದ್ದರು. ನನಗೆ ಸಿಗುತ್ತಿದ್ದ 25 ಪೈಸೆ ತೀರಾ ಕಡಿಮೆಯಾಗಿತ್ತು. ಇನ್ನೂ ಕೆಲವೊಮ್ಮೆ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳು ನಾನು ತಂದ ಬೆಳೆಯನ್ನು ಖರೀದಿಸಲು ನಿರಾಕರಿಸುತ್ತಿದ್ದರು. ಆಗ ನಾನೇ ಅಲ್ಲಿ ನಿಂತು ಮಾರಾಟ ಮಾಡಲು ಆರಂಭಿಸಿದೆ.

ಕೃಷಿ ಕಲಿಸಿದ ಪಾಠ: ಕೃಷಿಯಲ್ಲಿ ಪ್ರಯೋಗಗಳನ್ನು ಮಾಡುತ್ತಲೇ ಅದಕ್ಕೆ ಪೂರಕವಾದ ಎರೆಹುಳು ಗೊಬ್ಬರ ತಯಾರಿಕೆ ಹಾಗೂ ಹೈನುಗಾರಿಕೆಯನ್ನೂ ಆರಂಭಿಸಿದೆ. ಜವಾರಿ ಹಸು ಹಾಗೂ ಎಮ್ಮೆಗಳನ್ನು ಸಾಕಿದೆ. ಹಾಲಿನಿಂದ ಹಣ ಹಾಗೂ ನನ್ನ ಕೃಷಿಗೆ ಬೇಕಾಗುವಷ್ಟು ಗೊಬ್ಬರ ಸಿಗಲಾರಂಭಿಸಿತು. ನನಗೆ ಕೃಷಿ ಗೊತ್ತಿತ್ತೇ ಹೊರತು, ಒಕ್ಕಲುತನ ಕುರಿತು ನನಗೆ ಏನೂ ತಿಳಿದಿರಲಿಲ್ಲ. ಜೋಡು ಎತ್ತು ಹಾಗೂ ಕೃಷಿ ಸಲಕರಣೆ ಪಡೆದು ಅದನ್ನೂ ಆರಂಭಿಸಿದೆ. ಆ ವರ್ಷ ಏಳು ಎಕರೆಯಲ್ಲಿ 31 ಚೀಲ ಜೋಳ ಬೆಳೆದೆ. ನನ್ನ ಪಕ್ಕದ ಹೊಲದ ಅಜ್ಜನಿಗಿಂತ ಒಂದು ಚೀಲ ಹೆಚ್ಚು. ಅದೂ ಸಾವಯವ ಕೃಷಿಯಲ್ಲಿ. ಇದು ನನ್ನ ಆತ್ಮವಿಶ್ವಾಸವನ್ನು ಇನ್ನಷ್ಟು  ಹೆಚ್ಚಿಸಿತು.

ಇಂದಿನ ಕೃಷಿಯಲ್ಲಿ ನನಗೇನು ಸುಲಭವೋ ಅದನ್ನು ಬೆಳೆಯುವುದು ಮುಖ್ಯವಲ್ಲ. ಜನರ ಆರೋಗ್ಯ ಮತ್ತು ಅವರ ಅಗತ್ಯಗಳನ್ನು ಪೂರೈಸುವಂತಿರಬೇಕು ಎಂಬ ಮಾತಿನಲ್ಲಿ ನಂಬಿಕೆ ಇಟ್ಟು ಆರೋಗ್ಯವಂತ ಸೊಪ್ಪು ಹಾಗೂ ತರಕಾರಿ ಬೆಳೆಗೆ ನಾನು ಮುಂದಾದೆ. ಗೊತ್ತಿದ್ದ ಕೆಲವರಿಗೆ ಇವುಗಳನ್ನು ನೀಡುವ ಮೂಲಕ ಮಾರುಕಟ್ಟೆ ಜಾಲವನ್ನು ವಿಸ್ತರಿಸಿದೆ. ದಿನಗಳು ಉರುಳಿದಂತೆ ನನ್ನ ಕೃಷಿ ಹಲವರ ಗಮನ ಸೆಳೆಯಲಾರಂಭಿಸಿತು. ನಾನು ಬೆಳೆಯುವ ತರಕಾರಿಗಳಿಗೆ ನಗರ ಪ್ರದೇಶಗಳಲ್ಲಿ ಬೇಡಿಕೆ ಹೆಚ್ಚಿತು. ಇದರಿಂದ ಕೃಷಿ ಲಾಭದಾಯಕವಾಗಿಯೂ ಮುಂದುವರೆಯಿತು.

ಕೃಷಿಗೆ ತಂತ್ರಜ್ಞಾನದ ನೆರವು: ನನಗೆ ಬದುಕು ಸಾಕಷ್ಟು ಕಲಿಸಿದೆ. ಈ ಪಾಠ ಕಲಿಯುವುದರಲ್ಲಿ ನಾನು ನನ್ನ ವೈಯಕ್ತಿಕ ಬದುಕನ್ನೂ ಲೆಕ್ಕಿಸಲಿಲ್ಲ. 14 ವರ್ಷ ಕೃಷಿಯಲ್ಲಿ ಕಳೆದಿದ್ದೇನೆ. ಕೃಷಿಯಲ್ಲೇ ಮತ್ತಷ್ಟು ಸಾಧನೆ ಮಾಡುವ ಗುರಿ ನನ್ನದು. ತಿಳಿದಿದ್ದನ್ನು ಮತ್ತಷ್ಟು ಜನಕ್ಕೆ ಹಂಚುವುದು ನನಗಿಷ್ಟ. ಕೊನೆಯದಾಗಿ ಮಹಿಳೆಯರಿಗೆ ಒಂದು ಮಾತು. ಹೆಣ್ಣುಮಕ್ಕಳು ತಮ್ಮ ಜವಾಬ್ದಾರಿಯನ್ನು ತಾವೇ ಹೊರಬೇಕು.

ಇತರರ ಮೇಲಿನ ಅವಲಂಬನೆ ಒಳ್ಳೆಯದಲ್ಲ. ಹಿಡಿದ ಕೆಲಸ ಎಷ್ಟೇ ಕಷ್ಟವಾಗಲಿ ನಿಭಾಯಿಸಬೇಕು. ಯಶಸ್ಸು ಸಿಗುವವರೆಗೂ ಹೋರಾಡಬೇಕು. ಸವಾಲು ಸ್ವೀಕರಿಸಿದ ಮೇಲೆ ಸಮಸ್ಯೆ ಎದುರಾಗುವುದು ಸಹಜ. ಅದನ್ನು ಮೆಟ್ಟಿನಿಂತರೆ ಮಾತ್ರ ಸಾಧನೆಯ ಫಸಲು ಸಿಗಲಿದೆ. 

ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಬಂದರು
ನನ್ನ ಕೃಷಿ ಕುರಿತು ಆಸಕ್ತಿ ಹೊಂದಿದ ಹಲವು ಯುವಕರು ಬೆಂಗಳೂರಿನಲ್ಲಿ ತಮಗಿದ್ದ ಸಾಫ್ಟ್‌ವೇರ್‌ ಉದ್ಯೋಗ ತ್ಯಜಿಸಿ ನನ್ನೊಂದಿಗೆ ಕೆಲಸ ಮಾಡಲು ಬಂದರು. ಆದರೆ ಕೃಷಿಯಲ್ಲಿ ಯಾರೂ ಉಳಿಯಲಿಲ್ಲ. ಅದರ ಬದಲಾಗಿ ಕೆಲವರು ಮಾರುಕಟ್ಟೆ ವಿಸ್ತರಿಸಲು ಸಹಕರಿಸಿದ್ದಾರೆ. ಕೃಷಿ ಕಲಿಯಲು ಬಂದು ಹೋದ ಯುವಕರಿಬ್ಬರು ನನ್ನ ಕೆಲಸಕ್ಕೆ ಸರಿಹೊಂದುವಂತ ತಂತ್ರಾಂಶ ಹಾಗೂ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಿದ್ದಾರೆ.

prerena natural ಎಂಬ ಈ ಆ್ಯಪ್‌ ಮೂಲಕ ಗ್ರಾಹಕರು ತಮಗೆ ಅಗತ್ಯವಿರುವ ವಸ್ತುಗಳ ಪಟ್ಟಿ ಕಳುಹಿಸುತ್ತಾರೆ. ಇದರಿಂದ ನನಗೆ ಮುಂದೆ ಬೆಳೆಯಬೇಕಾದ ಬೆಳೆ ಹಾಗೂ ಸ್ಪಷ್ಟ ಮಾರುಕಟ್ಟೆ ಚಿತ್ರಣ ದೊರೆಯುತ್ತಿದೆ. ದೇಶ ವಿದೇಶಗಳ ಹಲವು ಬಗೆಯ ತರಕಾರಿಗಳನ್ನು ನಾನು ಬೆಳೆಯುತ್ತಿದ್ದೇನೆ. ಇಂದಿನ ಗೃಹಿಣಿಯರಿಗೆ ತಿಳಿಯದ ಕೆಲವು ಸೊಪ್ಪು ಹಾಗೂ ತರಕಾರಿಗಳು ನನ್ನ ಬಳಿ ಇವೆ. ತರಕಾರಿಯೊಂದಿಗೆ ಅವುಗಳನ್ನು ರುಚಿಕಟ್ಟಾಗಿ ತಯಾರಿಸುವ ವಿಧಾನವನ್ನೂ ನಾನು ಹೇಳುತ್ತೇನೆ. ಇದು ಅವರಿಗೆ ಇಷ್ಟವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT