ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಮೇಶ್ವರ ಜತೆ ವಾಗ್ವಾದ ಪೂರ್ಣ ಸುಳ್ಳು: ಸಿದ್ದರಾಮಯ್ಯ

ಸರ್ಕಾರ ಬೀಳಲಿದೆ ಎಂಬ ಭ್ರಮೆಯಲ್ಲಿ ಮುಳುಗಿರುವ ಬಿಜೆಪಿ: ಸಿದ್ದರಾಮಯ್ಯ
Last Updated 27 ಡಿಸೆಂಬರ್ 2018, 20:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪರಮೇಶ್ವರ ಮತ್ತು ನನ್ನ ಮಧ್ಯೆ ಖಾತೆ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿದೆ ಎಂಬ ಸುದ್ದಿ ಸಂಪೂರ್ಣ ಸುಳ್ಳು. ನಾವು ನಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದು, ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅಂತಿಮ ತೀರ್ಮಾನ ಮಾಡುವರು’ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಗುರುವಾರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ವಿರೋಧ ಪಕ್ಷದಲ್ಲಿ ಕುಳಿತು ಕೆಲಸ ಮಾಡಲಾಗದ ಬಿಜೆಪಿ, ಸರ್ಕಾರ ಬೀಳಲಿದೆ ಎಂಬ ಭ್ರಮೆಯಲ್ಲಿ ಮುಳುಗಿದೆ. ಸರ್ಕಾರ ಇಂದು ಬೀಳಲಿದೆ, ನಾಳೆ ಬೀಳಲಿದೆ ಎಂದು ಕಳೆದ ಏಳು ತಿಂಗಳಿನಿಂದ ಕನಸು ಕಾಣುತ್ತಿದೆ. ಅಧಿಕಾರ ಕಳೆದುಕೊಂಡು ಹಲವು ವರ್ಷಗಳೇ ಆಗಿರುವುದರಿಂದ ಉಮೇಶ್ ಕತ್ತಿ ಏನೇನೋ ಮಾತನಾಡುತ್ತಿದ್ದಾರೆ’ ಎಂದರು.

‘ರಮೇಶ ಜಾರಕಿಹೊಳಿ ಕಾಂಗ್ರೆಸ್ ಕಟ್ಟಾಳು. ಅವರು ಪಕ್ಷದಲ್ಲೇ ಇದ್ದು ಕೆಲಸ ಮಾಡಲಿದ್ದಾರೆ. ಸಚಿವ ಸ್ಥಾನ ಕೈತಪ್ಪಿರುವುದರಿಂದ ಸಹಜವಾಗಿಯೇ ಸ್ವಲ್ಪ ಅಸಮಾಧಾನಗೊಂಡಿರಬಹುದು. ನನ್ನ ಸಂಪರ್ಕಕ್ಕೂ ಅವರು ಸಿಕ್ಕಿಲ್ಲ’ ಎಂದರು.

‘ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್– ಜೆಡಿಎಸ್ ಒಟ್ಟಿಗೇ ಎದುರಿಸಲಿವೆ. ಸೀಟು ಹಂಚಿಕೆ ಕುರಿತು ತೀರ್ಮಾನಿಸಲು ಇನ್ನೂ ಸಭೆಯೇ ನಡೆದಿಲ್ಲ. ಸಭೆಯಲ್ಲಿ ಅವರಿಗೆ ಎಷ್ಟು, ನಮಗೆಷ್ಟು ಸೀಟು ಎಂಬುದನ್ನು ಅಂತಿಮಗೊಳಿಸಲಾಗುವುದು’ ಎಂದರು.

‘ಅಧಿಕೃತ ವಿರೋಧ ಪಕ್ಷವಾಗಿರುವ ಬಿಜೆಪಿ ರಾಜ್ಯಪಾಲರನ್ನು ಭೇಟಿ ಮಾಡುವುದರಲ್ಲಿ ವಿಶೇಷತೆಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದಲ್ಲಿ ಅರಾಜಕತೆ; ನಾವೇನು ಸನ್ಯಾಸಿಗಳಲ್ಲ: ಯಡಿಯೂರಪ್ಪ

ವಿಜಯಪುರ: ‘ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ಮುಂದುವರಿದಿರುವುದರಿಂದ ಅರಾಜಕತೆ ಸೃಷ್ಟಿಯಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಟೀಕಿಸಿದರು.

‘ರಾಜ್ಯದ ಅಭಿವೃದ್ಧಿ ಬಗ್ಗೆ ಈ ಸರ್ಕಾರಕ್ಕೆ ಸ್ವಲ್ಪವೂ ಕಾಳಜಿ ಇಲ್ಲ. ಕಾಟಾಚಾರಕ್ಕೆ ಬರ ಪರಿಹಾರ ಕಾಮಗಾರಿ ನಡೆಸುತ್ತಿದೆ. ಕಿತ್ತಾಟದಿಂದ ಅಭಿವೃದ್ಧಿಯೇ ಸ್ಥಗಿತಗೊಂಡಿದೆ. ಅಧಿಕಾರಕ್ಕಾಗಿ ಸಿದ್ದರಾಮಯ್ಯ, ಪರಮೇಶ್ವರ ನಡುವಿನ ಜಟಾಪಟಿ ಧಾರಾವಾಹಿಯಂತಾ
ಗಿದೆ’ ಎಂದು ಗುರುವಾರ ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ತಿಳಿಸಿದರು.

‘ಆಪರೇಷನ್‌ ಕಮಲದ ಪ್ರಸ್ತಾಪವೇ ಇಲ್ಲ. ವರಿಷ್ಠರು ಇದಕ್ಕೆ ಒಲವು ತೋರುವುದಿಲ್ಲ. ಸರ್ಕಾರ ತಾನಾಗಿಯೇ ಬಿದ್ದ ಮೇಲೆ ಪರಿಸ್ಥಿತಿಗನುಗುಣವಾಗಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಶಾಸಕರನ್ನು ಸೆಳೆಯುವ ಯತ್ನ ನಡೆಸಲ್ಲ’ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಕಾಂಗ್ರೆಸ್‌, ಜೆಡಿಎಸ್‌ ಶಾಸಕರೇ ಬಿಜೆಪಿಗೆ ಬಂದರೇ ಏನು ಮಾಡುತ್ತೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ‘ನಾವೇನು ರಾಜಕೀಯ ಸನ್ಯಾಸಿಗಳಲ್ಲ’ ಎಂದರು.

ಸಾಮರ್ಥ್ಯವಿದ್ದರೆ ಸರ್ಕಾರ ಬೀಳಿಸಿ: ಪ್ರಿಯಾಂಕ್‌ ಸವಾಲು
ಕಲಬುರ್ಗಿ: ‘ಶಾಸಕ ಉಮೇಶ ಕತ್ತಿ ಅವರಿಗೆ ಸಾಮರ್ಥ್ಯ ಇದ್ದರೆ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ತೋರಿಸಲಿ’ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಸವಾಲು ಹಾಕಿದರು.

‘ಹದಿನೈದು ದಿನಗಳಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದು ಉಮೇಶ ಕತ್ತಿ ಹೇಳಿಕೆ ನೀಡಿದ್ದಾರೆ. ಇಂಥ ಡೆಡ್‌ಲೈನ್‌ಗಳನ್ನು ನಾವು ಎಷ್ಟೋ ನೋಡಿ ಬಿಟ್ಟಿದ್ದೇವೆ’ ಎಂದು ಅವರು ಗುರುವಾರ ಇಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

‘ಜನರು ಆಯ್ಕೆ ಮಾಡಿರುವ ಸರ್ಕಾರವನ್ನು ಬೀಳಿಸುತ್ತಾರೆ ಎಂದರೆ; ಬಿಜೆಪಿ ಮುಖಂಡರಿಗೆ ಸಂವಿಧಾನದ ಮೇಲೆ ನಂಬಿಕೆ, ಗೌರವ ಏನೂ ಇಲ್ಲ ಎಂದರ್ಥ ಅಲ್ಲವೆ’ ಎಂದು ಪ್ರಿಯಾಂಕ್‌ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT