ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರ ಹೆಚ್ಚಳಕ್ಕೆ ಚಿಂತನೆ ಸಚಿವ ಆರ್‌.ವಿ.ದೇಶಪಾಂಡೆ

ಮಳೆಯಿಂದಾಗಿ ಮನೆಗಳಿಗೆ ಭಾಗಶಃ ಹಾನಿ
Last Updated 12 ಜೂನ್ 2018, 19:30 IST
ಅಕ್ಷರ ಗಾತ್ರ

ಧಾರವಾಡ: ಪ್ರಕೃತಿ ವಿಕೋಪದಿಂದ ಭಾಗಶಃ ಹಾನಿಗೀಡಾದ ಮನೆಗಳಿಗೆ ನೀಡುವ ಪರಿಹಾರದ ಮೊತ್ತವನ್ನು ಹೆಚ್ಚಿಸಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದರು.

ಪ್ರಕೃತಿ ವಿಕೋಪ, ಅತಿವೃಷ್ಟಿಯಿಂದಾದ ಹಾನಿ ಹಾಗೂ ಪರಿಹಾರ ವಿತರಣೆ ಪರಿಶೀಲನೆ ಸಂಬಂಧ ಮಂಗಳವಾರ ಇಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.

‘ಪರಿಹಾರದ ಮೊತ್ತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲು ಇದೆ. ಕೇಂದ್ರ ಸರ್ಕಾರದ ನೂತನ ಕಾಯ್ದೆ ಅನ್ವಯ ಹೆಚ್ಚಿನ ಹಣ ನೀಡಲಾಗದಿದ್ದರೂ, ರಾಜ್ಯ ಸರ್ಕಾರದಿಂದ ಹೆಚ್ಚಿನ ಹಣ ನೀಡಲು ಸಾಧ್ಯವಿದೆ. ಆ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡಿದರೆ ಉತ್ತಮ’ ಎಂದು ಗದಗ ಜಿಲ್ಲಾಧಿಕಾರಿ ಮನೋಜಕುಮಾರ ಜೈನ್‌ ಮಾಡಿದ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಿದ ದೇಶಪಾಂಡೆ, ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

‘ರಾಯಚೂರು ಜಿಲ್ಲೆ ಹೊರತುಪಡಿಸಿ ರಾಜ್ಯದ 29 ಜಿಲ್ಲೆಗಳಲ್ಲೂ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಕೆಲವೆಡೆ ಅತಿವೃಷ್ಟಿಯಿಂದಾಗಿ ಬಹಳಷ್ಟು ಮನೆಗಳು ಹಾಳಾಗಿವೆ. ಪೂರ್ಣ ಹಾನಿಯಾದ ಮನೆಗೆ ₹95ಸಾವಿರ ಪರಿಹಾರ ಸಿಗುತ್ತಿದೆ. ಆದರೆ, ಭಾಗಶಃ ಹಾನಿಯಾದ ಮನೆಗಳಿಗೆ ₹3,500 ದಿಂದ ₹5, 500 ಪರಿಹಾರ ನೀಡಲಾಗುತ್ತಿದೆ. ಹಾನಿಗೀಡಾಗುವುದು ಬಡವರ ಮನೆಯೇ ಹೊರತು, ಶ್ರೀಮಂತರ ಆರ್‌ಸಿಸಿ ಮನೆಗಳಲ್ಲ. ಇಂಥ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹೆಚ್ಚು ಧಾರಾಳ ಮನೋಭಾವದಿಂದ ವರ್ತಿಸಬೇಕು’ ಎಂದರು.

‘ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ವಾರದೊಳಗೆ ಪರಿಹಾರ ನೀಡಬೇಕು. ವಾರಕ್ಕೆ ಎರಡು ಬಾರಿ ವಿಡಿಯೊ ಸಂವಾದ ನಡೆಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ವಾರಕ್ಕೊಮ್ಮೆಯಾದರೂ ಜಿಲ್ಲೆಯ ಪ್ರವಾಸ ಕೈಗೊಳ್ಳಬೇಕು ಎಂದು ಸೂಚಿಸಿದರು.

ವಿಪತ್ತು ನಿರ್ವಹಣೆಗಾಗಿ, ಪ್ರತಿ ಜಿಲ್ಲಾಧಿಕಾರಿ ಖಾತೆಯಲ್ಲೂ ಕನಿಷ್ಠ ₹ 5 ಕೋಟಿ  ಇರಬೇಕು. ಕಡಿಮೆ ಇದ್ದಲ್ಲಿ ಕೂಡಲೇ ಹಣ ಬಿಡುಗಡೆ ಮಾಡಲಾಗುವುದು. ಪರಿಹಾರ ಕಾರ್ಯದಲ್ಲಿ ಯಾವುದೇ ಕಾರಣಕ್ಕೂ ವಿಳಂಬವಾಗದಂತೆ ಎಚ್ಚರವಹಿಸಬೇಕು ಎಂದು ಸೂಚಿಸಿದರು.

’ಮನೆ ಸಮಸ್ಯೆ ನಾವೇ ಬಗೆಹರಿಸಿಕೊಳ್ಳುತ್ತೇವೆ’

‘ಹಿರಿಯ ಮುಖಂಡ ಎಂ.ಬಿ.ಪಾಟೀಲರ ಅಸಮಾಧಾನದ ಬಗ್ಗೆ ನನಗೆ ಎಲ್ಲ ಗೊತ್ತಿದೆ. ಸಚಿವ ಸ್ಥಾನ ಸಿಗದಿರುವುದರಿಂದ ಬೇಸರವಾಗುವುದು ಸಹಜ. ಇದು ನಮ್ಮ ಮನೆ ಸಮಸ್ಯೆ. ಇದನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ಅವರು ನನ್ನ ಗೆಳೆಯ. ಹೀಗಾಗಿ, ಸಚಿವ ಸ್ಥಾನ ಕುರಿತು ಅವರೊಂದಿಗೆ ಮಾತನಾಡಿದ್ದೇನೆ’ ಎಂದು ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.

ನನಗೆ ಅನ್ಯಾಯವಾಗಿದೆ: ಹೆಬ್ಬಾಳಕರ

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ‘ಕಾಂಗ್ರೆಸ್ ಹೈಕಮಾಂಡ್, ಹೇಳಿದಂತೆ ನಡೆದುಕೊಂಡಿಲ್ಲ. ಮೊದಲು ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ಇಲ್ಲ ಎಂದರು. ಆದರೆ, ಜಯಮಾಲಾ ಅವರಿಗೆ ಯಾವ ಮಾನದಂಡದ ಮೇಲೆ ಸಚಿವ ಸ್ಥಾನ ನೀಡಲಾಗಿದೆ ಎಂಬುದೇ ಸೋಜಿಗದ ಸಂಗತಿ. ಪಕ್ಷಕ್ಕಾಗಿ 20 ವರ್ಷಗಳಿಂದ ದುಡಿದಿದ್ದೇನೆ. ಭವಿಷ್ಯದ ಮೇಲೆ ನನಗೆ ನಂಬಿಕೆ ಇಲ್ಲ. ಈಗ ನನಗೆ ಅನ್ಯಾಯವಾಗಿದೆ ಎಂದಷ್ಟೇ ಹೇಳಬಲ್ಲೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT